Politics

*ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಭೆ: ಅಧಿಕಾರಿಗಳಿಗೆ ಸಿಎಂ ಮಹತ್ವದ ಸೂಚನೆ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಸಭೆ ನಡೆಯಿತು. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಹಲವು ಸೂಚನೆ ನೀಡಿದರು.

ಸಭೆಯ ಮುಖ್ಯಾಂಶಗಳು:

• ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯ ಚಟುವಟಿಕೆಗಳ ಬಗ್ಗೆ ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲು ಸೂಚನೆ ನೀಡಿದರು.

• ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಈ ವರ್ಷ ಕೈಗೊಳ್ಳಬೇಕಾಗಿರುವ ಕಾಮಗಾರಿಗಳ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲು ಹಾವೇರಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

• ಪ್ರಾಧಿಕಾರದಲ್ಲಿ ಲಭ್ಯವಿರುವ ಕಾರ್ಪಸ್‌ ಫಂಡ್‌ ನಲ್ಲಿ 7 ಕೋಟಿ ರೂ. ಕ್ರಿಯಾ ಯೋಜನೆ ಅನುಮೋದನೆಗೆ ಸಲ್ಲಿಸಲಾಗಿದ್ದು, 4 ಕೋಟಿಗೆ ಸರ್ಕಾರದ ಅನುಮೋದನೆ ದೊರೆತಿದೆ. ಈ ಬಗ್ಗೆ ಕ್ರಿಯಾ ಯೋಜನೆ ಸಲ್ಲಿಸಲು ಸೂಚನೆ.

• ಪ್ರಾಧಿಕಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಕುರಿತು ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ನಿಯಮಗಳ ಅನುಸಾರ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚನೆ.

• ಪ್ರಾಧಿಕಾರದಲ್ಲಿ ಖಾಲಿಯಿರುವ 4 ಅಧಿಕಾರೇತರ ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡುವ ಕುರಿತು ಕ್ರಮ ವಹಿಸುವಂತೆ ಸೂಚಿಸಿದರು.

• 2024-25 ನೇ ಸಾಲಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರೂ.13.35ಕೋಟಿ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯಲ್ಲಿ ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಿದರು.

• ಕಾಗಿನೆಲೆ ಗ್ರಾಮದಲ್ಲಿ ಕನಕ ಗದ್ದುಗೆ ಸಮೀಪ ಇರುವ ಕನಕ ಸರೋವರ ಅಭಿವೃದ್ಧಿಪಡಿಸಿ, ಪ್ರವಾಸಿಗರಿಗೆ ಮನೋರಂಜನೆಗೆ ದೋಣಿ ವಿಹಾರ ಆರಂಭಿಸಲು ಅನುಮೋದನೆ ನೀಡಲಾಯಿತು.

• ಕಾಗಿನೆಲೆ ಕನಕ ಪರಿಸರ ಸ್ನೇಹಿ ಪಾರ್ಕ್‌ ಸಮೀಪ ಐದು ಎಕರೆ ಪ್ರದೇಶದಲ್ಲಿ ಔಷಧಿ ಸಸ್ಯಗಳನ್ನು ಬೆಳೆಸಲು ನಿರ್ಧರಿಸಲಾಯಿತು.

• ಕನಕದಾಸರ ಜೀವನ ಕುರಿತು ʻಒಳಾಂಗಣ ವಸ್ತು ಸಂಗ್ರಹಾಲಯʼ ನಿರ್ಮಾಣದ ಕುರಿತು ಹೊಸ ಪ್ರಸ್ತಾವನೆ ಸಿದ್ದಪಡಿಸಲು ಸೂಚನೆ ನೀಡಿದರು.

• ಬೆಂಗಳೂರಿನ ಬನಶಂಕರಿ 6ನೇ ಹಂತದಲ್ಲಿ ಪ್ರಾಧಿಕಾರದ ವತಿಯಿಂದ ನಿರ್ಮಾಣವಾಗುತ್ತಿರುವ ಕಟ್ಟಡವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲು ಸೂಚಿಸಿದರು.

• ಸಭೆಯಲ್ಲಿ ಸಚಿವರಾದ ಭೈರತಿ ಸುರೇಶ್, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ‌, ಶಾಸಕ ಬಸವರಾಜ ಶಿವಣ್ಣನವರ್, ಮುಖ್ಯಮಂತ್ರಿಯವರ ಅಪರ ಮುಖ್ಯ‌ ಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button