Politics

*ಸಿಎಂ ಯಾವುದೇ ತಪ್ಪು ಮಾಡಿಲ್ಲ , ಯಾವುದೇ ತನಿಖೆ ನಡೆದರೂ ದೋಷಮುಕ್ತರಾಗುತ್ತಾರೆ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ನಮ್ಮ ಮುಖ್ಯಮಂತ್ರಿಗಳು ಯಾವುದೇ ತಪ್ಪು ಮಾಡಿಲ್ಲ, ಅವರು ಯಾವುದೇ ಹಗರಣದಲ್ಲೂ ಭಾಗಿಯಾಗಿಲ್ಲ. ಅವರ ವಿರುದ್ಧ ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ. ಯಾವುದೇ ತನಿಖೆ ನಡೆದರೂ ಅವರು ದೋಷಮುಕ್ತರಾಗುತ್ತಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ತಾಜ್ ವೆಸ್ಟೆಂಡ್ ಹೋಟೆಲ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಡಿಸಿಎಂ ಅವರು ಪ್ರತಿಕ್ರಿಯೆ ನೀಡಿದರು.

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವ ಬಗ್ಗೆ ಮಾಧ್ಯಮಗಳು ಗಮನ ಸೆಳೆದಾಗ, “ಬಿಜೆಪಿಯವರು ನನ್ನ ಮೇಲೆ ಹೇಗೆ ಷಡ್ಯಂತ್ರ ರೂಪಿಸಿ ಕೇಸ್ ದಾಖಲಿಸಿ, ಜೈಲಿಗೆ ಹಾಕಿದರೋ ಅದೇ ರೀತಿ ನಮ್ಮ ಮುಖ್ಯಮಂತ್ರಿಗಳ ವಿರುದ್ಧವೂ ಷಡ್ಯಂತ್ರ ರೂಪಿಸುತ್ತಿದ್ದಾರೆ. ಭಗವಂತನ ಕೃಪೆಯಿಂದ ನಾನು ಜೈಲಿಗೆ ಹೋದ ಪ್ರಕರಣ ಕೂಡ ವಜಾಗೊಂಡಿದೆ” ಎಂದು ತಿಳಿಸಿದರು.

“ ಮುಖ್ಯಮಂತ್ರಿಗಳು ಯಾವುದೇ ತಪ್ಪು ಮಾಡಿಲ್ಲ. ನಾವೆಲ್ಲರೂ ಮುಖ್ಯಮಂತ್ರಿಗಳ ಜತೆಗೆ ನಿಲ್ಲುತ್ತೇವೆ. ಹೋರಾಟ ಮುಂದುವರಿಸುತ್ತೇವೆ. ಅವರು ಮಾಡಿರುವ ಕೆಲಸ, ರಾಜ್ಯದ ಜನರಿಗೆ ನೀಡಿರುವ ಯೋಜನೆಯನ್ನು ಬಿಜೆಪಿಯವರಿಂದ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ. ನಮಗೆ ಈ ನೆಲದ ಕಾನೂನಿನ ಮೇಲೆ ಗೌರವವಿದೆ. ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿದೆ” ಎಂದು ತಿಳಿಸಿದರು.

ತೀರ್ಪಿನ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ

ಸಿಎಂ ಹಾಗೂ ಸರ್ಕಾರಕ್ಕೆ ಇದು ಹಿನ್ನಡೆಯೇ ಎಂದು ಕೇಳಿದಾಗ, “ಇಲ್ಲಿ ಹಿನ್ನಡೆಯಾಗುವ ವಿಚಾರ ಏನಿದೆ? ತನಿಖೆ ನಡೆಯಬೇಕು ಎಂದು ಕೋರ್ಟ್ ಆದೇಶ ನೀಡಿರುವುದಾಗಿ ಮಾಧ್ಯಮಗಳು ಹೇಳುತ್ತಿವೆ. ಈ ತೀರ್ಪಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಂತರ ಮಾತನಾಡುತ್ತೇನೆ. ನ್ಯಾಯಲಯದ ತೀರ್ಪು ಏನಿದೆ ಎಂದು ನಾನು ನೋಡಿಲ್ಲ. ಮಾಧ್ಯಮಗಳಿಂದ ವಿಚಾರ ತಿಳಿಯುತ್ತಿದೆ. ಸಂಪೂರ್ಣ ಮಾಹಿತಿ ಪಡೆದ ನಂತರ ಪ್ರತಿಕ್ರಿಯೆ ನೀಡುತ್ತೇನೆ.” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button