Belagavi NewsBelgaum NewsKarnataka News

*ಸೆ. 30 ರಂದು ಕಬ್ಬು ಬೆಳೆಗಾರರ ರಾಜ್ಯ ಸಮ್ಮೆಳನ*

ಪ್ರಗತಿವಾಹಿನಿ ಸುದ್ದಿ: ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರ ಸಮಿತಿ ಸಭೆ ಹಾಗೂ ಬೃಹತ್ ಸಮ್ಮೇಳನವನ್ನು ಸೆ.29 ಮತ್ತು 30 ರಂದು ಕಲಬುರಗಿಯಲ್ಲಿ ನಡೆಯಲಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಎನ್.ಎಲ್.ಭರತರಾಜ್ ಹೇಳಿದರು.

ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ‌ ಸಿಹಿ ಕೊಡುವ ರೈತರ‌ ಬದುಕು ಕಹಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಒಂದು ಟನ್ ಕಬ್ಬಿಗೆ ಐದು ಸಾವಿರ ರೂ. ಬೆಲೆ ನಿಗದಿ ಮಾಡಬೇಕು. ಸಕ್ಕರೆ ಕಾರ್ಖಾನೆಯ ಮಾಲೀಕರ ಲಾಬಿಗೆ ಮಣಿದು ಸರಕಾರಗಳು ಮುಲಾಜಿನಲ್ಲಿ ನಡೆಸುತ್ತಿವೆ ಎಂದು ಆರೋಪಿಸಿದರು.

ಕಳೆದ 1994- 95 ರಲ್ಲಿ ಕಬ್ಬಿಗೆ ಬೆಲೆ‌ ನಿಗದಿ ಪಡಿಸುವಾಗ ಶೇ.8.5 ರಷ್ಟು ಇಳಿವರಿಯ ಮಾನದಂಡ ಇಟ್ಟುಕೊಂಡು ಬೆಲೆ ನಿಗದಿ ಮಾಡುತ್ತಿದ್ದರು. ಬಳಿಕ ಶೇ. 9.5 ಇಳುವರಿಯ ಆಧಾರದಲ್ಲಿ ಬೆಲೆ ನಿಗದಿ ಮಾಡಿದರೂ ತದನಂತರ ಸಕ್ಕರೆ ಉದ್ಯಮಪತಿಗಳು ಕೇಂದ್ರ ಮತ್ತು ರಾಜ್ಯ ಸರಕಾರದ ಆಡಳಿತದಲ್ಲಿ ಪ್ರಬಲರಾದಂತೆ ಎಫ್ ಆರ್ ಪಿ ದರ ನಿಗದಿ ಪಡಿಸಲು ಇಳುವರಿಯ ಮಾನದಂಡ ಶೇ.10.25ಕ್ಕೆ ಬಂದಿದ್ದಾರೆ. ಇದು ಕಬ್ಬು ಬೆಳೆಗಾರರಿಗೆ ಮಾಡಿದ ದ್ರೋಹ ಎಂದರು.

ಕರ್ನಾಟಕ ರಾಜ್ಯದ ಕೃಷಿ ಬೆಲೆ ಆಯೋಗ ಒಂದು ಟನ್ ಕಬ್ಬು ಬೆಳೆಯಲು 3,580 ರೂ.‌ವೆಚ್ಚವಾಗುತ್ತದೆ ಎಂದು ವರದಿ ನೀಡಿದೆ ಮತ್ತು ಸಕ್ಕರೆ ನಿರ್ದೇಶಕರ ಮಂಡಳಿಯು ಇದಕ್ಕೆ ಶೇ.10 ಲಾಭಾಂಶ ಸೇರಿಸಿ ಶೇ.9.5 ಇಳುವರಿ ಒಂದು ಟನ್ ಕಬ್ಬಿಗೆ 3938 ರೂ.ಗಳನ್ನು ನೀಡಬೇಕೆಂದು ಕೇಂದ್ರ ಸರಕಾರಕ್ಕೆ ವರದಿ ನೀಡಿದೆ. ಆದ್ದರಿಂದ ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರಬೇಕೆಂದು ಸಮ್ಮೇಳನದಲ್ಲಿ ಒತ್ತಾಯಿಸಲಾಗುವುದು ಎಂದರು.

ಸಮ್ಮೇಳನದಲ್ಲಿ ಕರ್ನಾಟಕ,  ಉತ್ತರ ಪ್ರದೇಶ ಪಂಜಾಬ್, ಹರಿಯಾಣ, ತೆಲಂಗಾಣ, ಆಂದ್ರಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ, ತಮಿಳುನಾಡು ಮೊದಲಾದ ರಾಜ್ಯದಿಂದ ಕಬ್ಬು ಬೆಳೆಗಾರರು ಆಗಮಿಸಲಿದ್ದಾರೆ. ಕಬ್ಬು ಹೋರಾಟಗಾರರ ಮುಂದಿನ ಚಳವಳಿಯ ರೂಪರೇಷೆಯ ಬಗ್ಗೆ ಚರ್ಚಿಸಲು ಅಖಿಲ್ ಭಾರತ ಅಧ್ಯಕ್ಷ  ಡಿ.ರವೀಂದ್ರ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ವಿಜು ಕೃಷ್ಣನ, ಎನ್.ಕೆ.ಶುಕ್ಲಾ ಆಗಮಿಸಲಿದ್ದಾರೆ ಎಂದರು.

ಬಿ.ಎಸ್.ಸೊಪ್ಪಿನ, ಜಿ. ನಾಗರಾಜ, ಜಿ.ಎಂ.ಜೈನೆಖಾನ್, ಸಿದಗೌಡ ಮೋದಗಿ, ಚಂದ್ರಗೌಡ ಪಾಟೀಲ್, ಶಿವಲೀಲಾ ಮೀಸಾಳೆ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button