ಪ್ರಗತಿವಾಹಿನಿ ಸುದ್ದಿ: ಬಡ ಹಾಗೂ ಮಧ್ಯಮ ವರ್ಗದ ಜನರು ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಜೊತೆಗೆ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯವನ್ನು ಅಧಿಕಾರಿಗಳು ತಲುಪಿಸಬೇಕು ಎಂದು ಬೆಳಗಾವಿ ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿನಯ ನಾವಲಗಟ್ಟಿ ತಿಳಿಸಿದರು.
ಬೆಳಗಾವಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ (ಸೆ.27) ಜರುಗಿದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾದಲ್ಲಿ ಜಿಲ್ಲೆಯಲ್ಲಿ ಪ್ರತಿಶತ ನೂರರಷ್ಟು ಪ್ರಗತಿ ಸಾಧಿಸಿ ಎಲ್ಲ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ದೊರಕಬೇಕು ಎಂದರು.
ಗ್ಯಾರಂಟಿ ಯೋಜನೆಗಳಇಗೆ ಸಂಬಂಧಿಸಿದಂತೆ ಗ್ರಾಮೀಣ ಭಾಗದ ಜನರಲ್ಲಿನ ಗೊಂದಲಗಳ ನಿವಾರಣೆಯಾಗಬೇಕು. ಈ ಕುರಿತಂತೆ ತಾಲೂಕು ಮಟ್ಟದ ಅಧಿಕಾರಿಗಳು ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ಚರ್ಚಿಸಿ ಯೋಜನೆಗಳ ಕುರಿತು ಮಾಹಿತಿ ನೀಡಬೇಕು.
ಶಕ್ತಿ ಯೋಜನೆಯಡಿ ಬಸ್ ಚಾಲಕ ಹಾಗೂ ನಿರ್ವಾಹಕರು ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು. ಈ ಕುರಿತು ಅಧಿಕಾರಿಗಳು ಚಾಲಕ ಹಾಗೂ ನಿರ್ವಹಕರಿಗೆ ಸೂಕ್ತ ತಿಳುವಳಿಕೆ ನೀಡುವಂತೆ ತಿಳಿಸಿದರು.
ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿದ್ದು, ಈ ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಲು ಸಮಿತಿಯ ಉಪಾಧ್ಯಕ್ಷರು, ಸದಸ್ಯರುಗಳು ಮುಂದಾಗುವಂತೆ ಹೇಳಿದರು.
ತಾಲೂಕು ಮಟ್ಟದಲ್ಲಿಯೂ ಸಹ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಿಯಮಿತವಾಗಿ ಜರುಗಿಸಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಮುಂದಾಗಬೇಕು. ಈ ಕಾರ್ಯದಲ್ಲಿ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮಿತಿ ಉಪಾಧ್ಯಕ್ಷರು, ಸದಸ್ಯರುಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಸೂಚಿಸಿದ ಅವರು ತಾಲೂಕು ಮಟ್ಟದಲ್ಲಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಚೇರಿಗಳ ಸ್ಥಿತಿಗತಿಗಳ ಕುರಿತು ಅಧ್ಯಕ್ಷರಾದ ವಿನಯ ನಾವಲಗಟ್ಟಿ ಅವರು ಮಾಹಿತಿ ಪಡೆದರು.
ಜಿಲ್ಲಾ ಪಂಚಾಯತ ಸಿ.ಇ.ಓ ರಾಹುಲ ಶಿಂಧೆ ಅವರು ಮಾತನಾಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವೆ ಎಂದು ತಿಳಿಸಿದರು.
ತಾಲೂಕು ಮಟ್ಟದಲ್ಲಿ ಜರುಗುವ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಗೆ ಸಂಬಂಧಿಸಿದ ಅಧಿಕಾರಿಗಳು ತಪ್ಪದೇ ಹಾಜರಾಗುವಂತೆ ನಿರ್ದೆಶನ ನೀಡಿದರು.
ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗ್ಯಾರಂಟಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಗ್ರಾಮೀಣ ಭಾಗದ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ದೊರಕಿಸಿ ಕೊಡುವಲ್ಲಿ ಅಧಿಕಾರಿಗಳ ಜೊತೆ ಸಮಿತಿ ಸದಸ್ಯರು ಕೈಜೊಡಿಸುವಂತೆ ಜಿ.ಪಂ. ಸಿ.ಇ.ಓ. ರಾಹುಲ್ ಶಿಂಧೆ ಅವರು ಹೇಳಿದರು.
ಅನ್ನಭಾಗ್ಯ ಯೋಜನೆಯಲ್ಲಿ 35,21,586 ಫಲಾನುಭವಿಗಳಿಗೆ ಜುಲೈ -2023 ರಿಂದ ಜುಲೈ-2024ರ ವರೆಗೆ ಐದು ಕೆ.ಜಿ. ಅಕ್ಕಿ ಬದಲಾಗಿ ರೂ 170 ರಂತೆ 7,29,037,6190 ರೂ ಗಳನ್ನು ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ ಸಂದಾಯಿಸಲಾಗಿರುತ್ತದೆ.
ಗೃಹಜ್ಯೋತಿ ಯೋಜನೆಯಡಿ ಬೆಳಗಾವಿ ವೃತ್ತದಲ್ಲಿ 10,28,436 ಫಲಾನುಭವಿಗಳ ಪೈಕಿ
9,98,180 ಗ್ರಾಹಕರು ನೋಂದಣಿಯಾಗಿದ್ದು ಶೆ. 97 ರಷ್ಟು ಪ್ರಗತಿ ಸಾಧಿಸಲಾಗಿರುತ್ತದೆ. ಗೃಹಲಕ್ಷ್ಮೀ ಯೋಜನೆಯಡಿ ಸೆಪ್ಟೆಂಬರ -2024ರ ವರೆಗೆ 10,76,524 ಫಲಾನುಭವಿಗಳು ನೊಂದಣಿಯಾಗಿದ್ದು, ಜೂನ್-2024ರ ವರೆಗೆ ಒಟ್ಟು 2266.40ಕೋಟಿ ರೂ. ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿರುತ್ತದೆ. ಶಕ್ತಿ ಯೋಜನೆಯಡಿ ಜೂನ್ 2023 ರಿಂದ ಸೆಪ್ಟೆಂಬರ-2024ರ ವರೆಗೆ 23.08 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ರೂ. 541.26 ಕೋಟಿ ಮೊತ್ತದ ಶೂನ್ಯ ಟಿಕೆಟ ವಿತರಿಸಲಾಗಿರುತ್ತದೆ. ಯುವನಿಧಿ ಯೋಜನೆಯಡಿ ಸೆಪ್ಟೆಂಬರ-2024ರ ವರೆಗೆ 28,000 ನಿರುದ್ಯೋಗ ಅಭ್ಯರ್ಥಿಗಳಿಗೆ 8,36,67,000 ರೂ.ಗಳನ್ನು ನೇರನಗದು ಮೂಲಕ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿರುತ್ತದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರುಗಳಾದ ಮಲ್ಲಪ್ಪ ಮುರಗೋಡ, ಶೇಖರ ಈಟಿ, ಅಮೋಲ ಬನ್ನೆ, ರುದ್ರಯ್ಯ ಹಿರೇಮಠ, ಸದಸ್ಯರುಗಳಾದ ಸೂರ್ಯಕಾಂತ ಕುಲಕರ್ಣಿ, ಶಿವಕುಮಾರ ರಾಠೋಡ, ಶಾನೂಲ ತಹಶೀಲ್ದಾರ, ವಿಜಯ ಅಕ್ಕಿವಾಟ, ಜಿ.ಬಿ.ರಂಗನಗೌಡ್ರ, ರಮೇಶ ಪಾಟೀಲ, ಅರ್ಜುನ ಬಂಡಗರ, ಬೈರು ಕಾಂಭಳೆ, ಮಹಾಂತೇಶ ಕಳ್ಳಿಬಡ್ಡಿ, ರಮೇಶ ಜಾಧವ ಅವರುಗಳು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಗತ್ಯದ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಸವರಾಜ ಹೆಗನಾಯಕ ಸೇರಿದಂತೆ ವಿವಿಧ ಇಲಾಖೆ ಅಧಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ