ಪ್ರಗತಿವಾಹಿನಿ ಸುದ್ದಿ: ಮಾದಕ ವಸ್ತು ಸಾಗಾಣಿಕೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಜಾಲವೊಂದನ್ನು ಬೇಧಿಸಿರುವ ಕೊಡಗು ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 3 ಕೋಟಿ ಬೆಲೆ ಬಾಳುವ 3. 31 ಕೆಜಿ ಹೈಡ್ರೋ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ. ಕೇರಳ ಮತ್ತು ಕೊಡಗು ಜಿಲ್ಲೆಯ ಆರೋಪಿಗಳು ಈ ಜಾಲದಲ್ಲಿ ತೊಡಗಿಸಿಕೊಂಡಿದ್ದು, ಮತ್ತೋರ್ವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಎಸ್ ಪಿ ಅವರು, ಮಾದಕ ದ್ರವ್ಯ ದಂಧೆ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕ ನಂತರ ದಂಧೆ ಬಯಲಿಗೆಳೆಯಲು ಮಡಿಕೇರಿ ಬಳಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿತ್ತು. ಸೆ. 28ರಂದು ಮೂರ್ನಾಡು-ಮಡಿಕೇರಿ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ವಾಹನಗಳ ತಪಾಸಣೆ ನಡೆಸಿದ್ದರು. ಈ ವೇಳೆ ಐವರು ಆರೋಪಿಗಳ ಬಳಿ 3.31 ಕಿಲೋ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿತ್ತು. ಕೊಡಗಿನ ಹೆಗ್ಗಳದ ನಜೀರುದ್ದೀನ್ ಎಂ.ಯು (26), ಯಾಹ್ಯಾ ಸಿ.ಎಚ್ (28) ಕುಂಜಿಲದ ಅಕ್ನಾಸ್ (26), ಬೇಟೋಳಿ ಗ್ರಾಮದ ವಜೀದ್ (26) ಮತ್ತು ಕೇರಳದ ಕಣ್ಣೂರಿನ ರಿಯಾಜ್ (44) ಬಂಧಿತ ಆರೋಪಿಗಳು. ವಿಚಾರಣೆ ವೇಳೆ ಆರೋಪಿಗಳು 3.31 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಥಾಯ್ಲೆಂಡ್‌ನಿಂದ ಭಾರತಕ್ಕೆ ಸಾಗಿಸಲಾಗುತ್ತಿತ್ತು ಎಂಬುದು ತಿಳಿದುಬಂದಿದೆ ಎಂದರು.
ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಅನೂಫ್ (28) ಎರಡು ವರ್ಷಗಳಿಂದ ಥಾಯ್ಲೆಂಡ್‌ನಲ್ಲಿ ನೆಲೆಸಿದ್ದು, ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಥಾಯ್ಲೆಂಡ್‌ನಿಂದ ಭಾರತಕ್ಕೆ ಡ್ರಗ್‌ಗಳನ್ನು ರವಾನಿಸಿದ್ದಾನೆ. ಈ ಕೃತ್ಯಕ್ಕೆ ಆರೋಪಿಗಳಾದ ಕಾಸರಗೋಡಿನ ಮೆಹರೂಫ್ (37) ಮತ್ತು ವಿರಾಜಪೇಟೆಯ ರವೂಫ್ ಬೆಂಬಲ ನೀಡಿದ್ದರು. ಅವರು ಇತರ ಐವರು ಆರೋಪಿಗಳೊಂದಿಗೆ ಕೊಡಗಿನಿಂದ ದುಬೈಗೆ ವಿಮಾನದ ಮೂಲಕ ಮಾದಕ ವಸ್ತು ಸಾಗಾಣಿಕೆ ಮಾಡುತ್ತಿದ್ದರು ಎಂದು ಎಸ್ಪಿ ತಿಳಿಸಿದರು.
ಐವರು ಆರೋಪಿಗಳನ್ನು ಮಡಿಕೇರಿಯಲ್ಲಿ ಬಂಧಿಸಿದರೆ, ಮೆಹರೂಫ್ ಥಾಯ್ಲೆಂಡ್‌ಗೆ ಪರಾರಿಯಾಗುತ್ತಿದ್ದಾಗ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸೆರೆ ಹಿಡಿಯಲಾಯಿತು. ರವೂಫ್ ನನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಮೊಹಮ್ಮದ್ ಅನೂಫ್ ಥಾಯ್ಲೆಂಡ್‌ನಲ್ಲಿದ್ದಾನೆ ಎಂದು ಶಂಕಿಸಿರುವ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ, ಅಂತಾರಾಷ್ಟ್ರೀಯ ದಂಧೆ ಯಶಸ್ವಿಯಾಗಿ ನಿಗ್ರಹಿಸುವಲ್ಲಿ ಕೊಡಗು ಪೊಲೀಸ್ ತಂಡದ ಪ್ರಯತ್ನವನ್ನು ಎಸ್ಪಿ ರಾಮರಾಜನ್ ಶ್ಲಾಘಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ