Belagavi NewsBelgaum NewsKarnataka News

*ವಿಜಯದಶಮಿ ಹಬ್ಬಕ್ಕೆ ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್; ಎರಡು ತಿಂಗಳ ಹಣ ಖಾತೆಗೆ ಜಮಾ*

ಭರ್ಜರಿಯಾಗಿ ಹಬ್ಬ ಆಚರಿಸಿ, ಅದೇ ನನಗೆ ಸಂತೋಷ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಪ್ರಗತಿವಾಹಿನಿ ಸುದ್ದಿ: ತಾಂತ್ರಿಕ ಕಾರಣಗಳಿಂದ ವಿಳಂಬಗೊಂಡಿದ್ದ ಜುಲೈ ಹಾಗೂ ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಇದೇ 7 ಮತ್ತು 9 ರಂದು ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿ ಗುರುವಾರ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ರಾಜ್ಯದ ಯಜಮಾನಿಯರ ಖಾತೆಗೆ ಎರಡೂ ಕಂತಿನ ಹಣವನ್ನು ಹಾಕಲಾಗುವುದು. ಕೆಲವೊಂದು ತಾಂತ್ರಿಕ ಕಾರಣಗಳಿಂದ ಹಣ‌ ಹಾಕುವುದು ವಿಳಂಬವಾಗಿತ್ತು ಎಂದರು.

ಈ ಲಕ್ಷ್ಮೀ ಹೆಬ್ಬಾಳಕರ್ ಹಿಡಿದ ಕೆಲಸವನ್ನು ಮಾಡದೇ ಬಿಡುವುದಿಲ್ಲ ಎಂದು ಮೊನ್ನೆ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ನನ್ನ ಬಗ್ಗೆ ಹೇಳಿದ್ದಾರೆ. ಈ ಹೆಣ್ ಮಗಳು ತುಂಬಾ ಕಿಲಾಡಿ, ಹಠ ಮಾಡಿ‌ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ‌ ತಂದಿದ್ದೇ ಲಕ್ಷ್ಮೀ ಹೆಬ್ಬಾಳಕರ್ ಅಂತ ಸಿಎಂ ಸಿದ್ದರಾಮಯ್ಯ ನನ್ನ ಬಗ್ಗೆ ಹೇಳಿದ್ದಾರೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಪಟ್ಟು ಹಿಡಿದು ಯೋಜನೆ ಮಾಡಿಸಿದ್ದೇನೆ. ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿದ್ದೇನೆ ಎಂದು ಸಚಿವರು ಹೇಳಿದರು.

ನವರಾತ್ರಿ ಹಬ್ಬದ ವೇಳೆ ಎರಡು ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ನಿಮಗೆಲ್ಲಾ (ಫಲಾನುಭವಿ ಮಹಿಳೆಯರು) ಬರುತ್ತಿದ್ದು, ಹಣ ಸಿಕ್ಕ ಬಳಿಕ‌ ಭರ್ಜರಿಯಾಗಿ ಹೋಳಿಗೆ ಊಟ ಮಾಡಿ. ಅದೇ ನನಗೆ ಸಂತೋಷ ಎಂದು‌ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಸೇರಿದ್ದ ಮಹಿಳೆಯರು ಭಾರೀ ಕರತಾಡನ ಮಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button