Karnataka News

ಉತ್ಸವಕ್ಕೆ ಮುನ್ನ ಕಿತ್ತೂರು ಕರ್ನಾಟಕವಾಗಲಿ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ -ಕಿತ್ತೂರು ಉತ್ಸವಕ್ಕೂ ಮುನ್ನ ಮುಂಬೈ ಕರ್ನಾಟಕ ಪ್ರದೇಶವನ್ನು ’ಕಿತ್ತೂರು ಕರ್ನಾಟಕ’ ಎಂದು ನಾಮಕರಣ ಮಾಡಬೇಕು ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

ಈ ಸಂಬಂಧ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಶತಮಾನಗಳಿಂದ ದಾಸ್ಯದ ಸಂಕೇತವಾಗಿರುವ ಮುಂಬೈ ಕರ್ನಾಟಕ ಹಾಗೂ ಹೈದ್ರಾಬಾದ ಕರ್ನಾಟಕ ಎಂದು ಕರೆಯುತ್ತಾ ಬಂದಿರುವ ನಮ್ಮ ನಾಡಿನ ಎರಡು ಪ್ರಾದೇಶಿಕ ಭಾಗಗಳನ್ನು ಕ್ರಮವಾಗಿ ’ಕಿತ್ತೂರು ಕರ್ನಾಟಕ’ ಮತ್ತು ’ಕಲ್ಯಾಣ ಕರ್ನಾಟಕ’ ಎಂಬುದಾಗಿ ಬದಲಾವಣೆ ಮಾಡುವಂತೆ ಈ ಭಾಗಗಳ ಜನ ಕಳೆದ ಕೆಲವು ವರ್ಷಗಳಿಂದಲೂ ಒತ್ತಾಯಿಸುತ್ತಲೇ ಬಂದಿದ್ದಾರೆ.

ಈ ಒತ್ತಾಸೆಯ ಫಲವಾಗಿ ಕಳೆದ ತಿಂಗಳು ತಾವು ಹೈದ್ರಾಬಾದ ಕರ್ನಾಟಕವನ್ನು ’ಕಲ್ಯಾಣ ಕರ್ನಾಟಕ’ವೆಂದು ಅಧಿಕೃತವಾಗಿ ಘೋಷಿಸಿರುವುದು ನಾಡಿನ ಚರಿತ್ರೆಯಲ್ಲಿ ಐತಿಹಾಸಿಕ ಅಷ್ಟೇ ಚಿರಸ್ಮರಣೀಯ ಘಟನೆಯಾಗಿ ಉಳಿಯಲಿದೆ.

ಅದೇ ರೀತಿ ಪ್ರಸ್ತುತ ಮುಂಬೈ ಕರ್ನಾಟಕವೆಂದು ಕರೆಯಲ್ಪಡುವ ಬೆಳಗಾವಿ ರೆವಿನ್ಯೂ ಪ್ರಾದೇಶಿಕ ವಿಭಾಗವನ್ನು ’ಕಿತ್ತೂರು ಕರ್ನಾಟಕ’ವೆಂದು ಅಧಿಕೃತವಾಗಿ ಘೋಷಿಸಿ ನಾಮಕರಣ ಮಾಡಬೇಕೆಂಬುದು ಈ ಭಾಗದ ಸಾಹಿತಿಗಳು, ಸ್ವಾತಂತ್ರ ಹೋರಾಟಗಾರರು, ಚಿಂತಕರು, ಬುದ್ಧಿಜೀವಿಗಳ ಹಾಗೂ ಮಠಾಧೀಶರ ಮಹದಾಸೆಯಾಗಿದೆ.

ಬ್ರಿಟೀಷರ ಪ್ರಭುತ್ವಕ್ಕೆ ದೇಶದಲ್ಲಿಯೇ ಮೊಟ್ಟಮೊದಲು ಸೆಡ್ಡುಹೊಡೆದು ಪ್ರತಿಭಟಿಸಿ ಕಾಳಗದಲ್ಲಿ ಬಗ್ಗುಬಡಿದ ವೀರರಾಣಿ ಚೆನ್ನಮ್ಮಾಜಿಯ ಕ್ಷೇತ್ರಭೂಮಿ ಇದಾಗಿದೆ. ಜೊತೆಗೆ ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪನಂಥವರ ಕ್ರಾಂತಿಕಾರಿ ಹೋರಾಟಗಾರರ ಗಂಡು ಮೆಟ್ಟಿನ ನಾಡಾಗಿದೆ. ಅಷ್ಟೇ ಅಲ್ಲ, ಸ್ವಾತಂತ್ರ್ಯಪೂರ್ವದಲ್ಲಿ ಕರ್ನಾಟಕದಲ್ಲಿ ನಡೆದ ಒಂದೇ ಒಂದು ಕಾಂಗ್ರೆಸ್ ಅಧಿವೇಶನ ನಡೆದದ್ದು (೧೯೨೪) ಬೆಳಗಾವಿಯಲ್ಲಿ ಅದೂ ಕೂಡಾ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ. ಸ್ವಾತಂತ್ರ್ಯ ಸಿಕ್ಕ ದಿನದಂದು ಭಾರತ ದೇಶದ ಕೇವಲ ೬ ಸ್ಥಳಗಳಲ್ಲಿ ಬೃಹತ್ ತ್ರಿವರ್ಣ (೨೦*೧೨ಅಡಿ) ದ್ವಜವನ್ನು ಆಗಸ್ಟ್ ೧೫ರಂದು ಹಾರಿಸಲಾಗಿದ್ದು, ಆ ಪೈಕಿ ೩ ಸ್ಥಳಗಳು ಕರ್ನಾಟಕದಲ್ಲಿದ್ದು, ಅದರಲ್ಲಿ ಕಿತ್ತೂರು ಮತ್ತು ನರಗುಂದ ಕಿತ್ತೂರು ಕರ್ನಾಟಕ ಭಾಗದಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆ ವಿಷಯವಾಗಿದೆ.
ಇಂತಹ ಮಹಾನ್ ದೇಶಭಕ್ತಿಯ ಸ್ವಾತಂತ್ರ್ಯ ಪ್ರಿಯತೆಯ ಅಭಿಮಾನವನ್ನು ಹೊಂದಿದ ಈ ನಾಡನ್ನು ಇಂದಿಗೂ ಮುಂಬೈ ಕರ್ನಾಟಕವೆಂದು ಕರೆಯುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಕಾರಣ, ಈ ಭಾಗದ ಸಮಸ್ತ ಕನ್ನಡಿಗರ ಬಹುದಿನಗಳ ಆಶೋತ್ತರದಂತೆ ಮುಂಬೈ ಕರ್ನಾಟಕ ಭಾಗವನ್ನು ’ಕಿತ್ತೂರು ಕರ್ನಾಟಕ’ವೆಂದು ಅಧಿಕೃತವಾಗಿ ಘೋಷಣೆ ಮಾಡಬೇ ಕು.

ಮುಂಬರುವ ಕಿತ್ತೂರು ಉತ್ಸವಕ್ಕೂ ಮುನ್ನ ಈ ಘೋಷಣೆ ಮಾಡುವ ಮೂಲಕ ತಮ್ಮಿಂದ ಮತ್ತೊಂದು ಮಹತ್ತರ ಕಾರ್ಯ ಆಗಲೆಂದು ಆಶಿಸುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಶಿಕ್ಷಕರ ವರ್ಗಾವಣೆ: ಮತ್ತೊಂದು ಪತ್ರ ಬರೆದ ಹೊರಟ್ಟಿ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button