Kannada NewsKarnataka NewsNationalPolitics

*ಜೋಶಿ ಸಹೋದರನಿಂದ ಟಿಕೆಟ್ ವಂಚನೆ: ಪ್ರಲ್ಹಾದ್ ಜೋಶಿ ರಾಜೀನಾಮೆಗೆ ಆಗ್ರಹಿಸಿದ ದಿನೇಶ್ ಗುಂಡೂರಾವ್*

ಪ್ರಗತಿವಾಹಿನಿ ಸುದ್ದಿ: ಪ್ರಲ್ಹಾದ್ ಜೋಶಿಯವರ ಸಹೋದರ ಗೋಪಾಲ್ ಜೋಶಿಯರ ಮೇಲೆ ಟಿಕೆಟ್ ವಂಚನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸಚಿವ ಪ್ರಲ್ಹಾದ್ ಜೋಶಿಯವರ ರಾಜೀನಾಮೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ. 

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಗೋಪಾಲ್ ಜೋಶಿಯವರು ಪ್ರಲ್ಹಾದ್ ಜೋಶಿಯವರ ಜೊತೆಗೆ ಇದ್ದಾರೆ ಎಂಬುದು ಹುಬ್ಬಳ್ಳಿ ಭಾಗದ ಜನರಿಗೆ ಗೊತ್ತಿರುವ ಸಂಗತಿ. ಸಹೋದರ ಗೋಪಾಲ್ ಜೋಶಿಯವರ ಮೇಲೆ ಬಂದಿರುವ ಆರೋಪ, ನನಗೆ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನುಣಿಚಿಕೊಳ್ಳುವುದು ಸರಿಯಲ್ಲ. ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು. 

ಮಾಜಿ ಶಾಸಕ ದೇವಾನಂದ ಚೌಹಾಣ್ ಗೌರವಯುತವಾದ ವ್ಯಕ್ತಿ. ಚೌಹಾಣ್ ಅವರಿಗೆ ಲೋಕಸಭೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಜೋಶಿಯವರ ಸಹೋದರ ಗೋಪಾಲ್ ಜೋಶಿ 2 ಕೋಟಿ ಹಣ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೇನಾನಂದ ಚೌಹಾಣ್ ಅವರು ದಾಖಲೆ ಕೊಟ್ಟಿದ್ದಾರೆ.  ಅಮಿತ್ ಶಾ ಅವರ ಹೆಸರನ್ನ ಬಳಸಿಕೊಳ್ಳಾಗಿದೆ. ಪ್ರಲ್ಹಾದ್ ಜೋಶಿಯವರ ಪ್ರಭಾವ ಬಳಿಸಿಕೊಂಡು ವಂಚಿಸಲಾಗಿದೆ. 

ಇಡಿ, ಐಟಿಯವರನ್ನ ಚೂ ಬಿಟ್ಟು ಹೆದರಿಸಿ ದೇವಾನಂದ ಚೌಹಾಣ್ ಅವರನ್ನ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಟಿಕೆಟ್ ಕೊಡಿಸುವುದಾಗಿ ಹೇಳಿ 2 ಕೋಟಿ ಹಣ ಪಡೆದು ವಂಚಿಸಿರುವುದು ಇದೀಗ ಬೆಳಕಿಗೆ ಬಂದಿದೆ.  ಗೋಪಾಲ್ ಜೋಶಿಯವರು ಆರ್.ಎಸ್.ಎಸ್ ನಲ್ಲಿ ತೊಡಗಿಸಿಕೊಂಡವರು. ಆರ್.ಎಸ್.ಎಸ್ ನ ಕೆಲ ನಾಯಕರು ಈ ರೀತಿಯ ಟಿಕೆಟ್ ದಂಧೆಯಲ್ಲಿ ತೊಡಗಿರುವ ಬಗ್ಗೆ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. 

ಇಡಿ ಜನರ ವಿಶ್ವಾಸ ಕಳೆದುಕೊಂಡಿದೆ

ಮಡಾ ಪ್ರಕರಣದಲ್ಲಿ ಇಡಿ ಬಂದಿರುವುದೇ ಸಿಎಂ ಸಿದ್ದರಾಮಯ್ಯ ಅವರನ್ನ ಸಿಕ್ಕಿಹಾಕಿಸಬೇಕು ಎಂಬ ದುರುದ್ದೇಶದಿಂದ. ಈ ರೀತಿಯ ನಡವಳಿಕೆಗಳಿಂದಾಗಿ ಇಡಿ  ಜನರ ವಿಶ್ವಾಸವನ್ನ ಕಳೆದುಕೊಂಡಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮುಡ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ಸಂಬಂಧ ಪ್ರತಿಕ್ರಿಯೆ ನೀಡಿದ ಸಚಿವರು, ಇಡಿ ಒಂದು ಸ್ವಾಯತ್ತ ಸಂಸ್ಥೆಯಾಗಿ ಕೆಲಸ ಮಾಡುತ್ತಿಲ್ಲ. ಕೇಂದ್ರದ ಕೈಗೊಂಬೆಯಾಗಿದೆ. ಕಳೆದ 10 ವರ್ಷದಲ್ಲಿ ಬಿಜೆಪಿಯವರ ಬಂಧನವಾಗಿದೆಯಾ..? ವಿಪಕ್ಷ ನಾಯಕರು ಏಲ್ಲಿ ಇರ್ತಾರೆ ಅಲ್ಲಿ ಮಾತ್ರ ಇಡಿ, ಐಟಿ ಚೂ ಬಿಡ್ತಾರೆ ಎಂದರು. 

ವಿರೋಧ ಪಕ್ಷದ ನಾಯಕರು ಇರುವ ಕಡೆ ಇಡಿ ಸಿಬಿಐವರು ಬರ್ತಾರೆ. ಕೆಜ್ರಿವಾಲ್, ಸೂರೇನ್,ಡಿಕೆಶಿಯನ್ನ ಜೈಲಿಗೆ ಹಾಕಿದ್ರು. ಯಡಿಯೂರಪ್ಪ, ವಿಜಯೇಂದ್ರ ಯಾಕೆ ಕಣ್ಣಿಗೆ ಕಾಣಲ್ಲ.? ಈ ಕಾನೂನು ದುರ್ಬಳಕೆ ಆಗುತ್ತಿದೆ.‌ ಹೇಗಾದರು ಸರಿ ಸಿಎಂ ಅವರನ್ನು ಸಿಕ್ಕಿಸಬೇಕು ಎಂದು ವ್ಯವಸ್ಥಿತವಾದ ಸಂಚು ನಡೆದಿದೆ. ಪ್ರೀ ಪ್ಲಾನ್ ಮಾಡಲಾಗಿದೆ. ಸಿಎಂ ಅವರ ಹೆಸರು ಹೇಳಲು ಇಡಿ ಒತ್ತಡ ಹಾಕಿದ್ರು ಎಂದು ಮಾಜಿ ಸಚಿವ ನಾಗೇಂದ್ರ ಕೂಡ ಹೇಳಿದ್ದಾರೆ. ಹೆದರಿಸುವ ಕೆಲಸ ಇಡಿ ಮಾಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button