ಪ್ರಗತಿವಾಹಿನಿ ಸುದ್ದಿ: ಸಮಾಜ ಹಿತವನ್ನು ಗಮನದಲ್ಲಿಟ್ಟುಕೊಂಡು ಬರೆಹಗಾರರು ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿಗಳೊಂದಿಗೆ ಸಾಹಿತ್ಯ ರಚನೆ ಮಾಡಬೇಕೆಂದು ಹಿರಿಯ ಸಾಹಿತಿ, ಪತ್ರಕರ್ತ ಎಲ್. ಎಸ್. ಶಾಸ್ತ್ರಿ ಅವರಿಂದಿಲ್ಲಿ ಹೇಳಿದರು.
ಕನ್ನಡ ಸಾಹಿತ್ಯ ಭವನದಲ್ಲಿಂದು ನಡೆದ ಮರಾಠಾ ಲಘು ಪದಾತಿ ದಳದ ಅಧಿಕಾರಿ ಎನ್. ಗುಣಶೀಲ ಅವರ ಮೂರು ಕೃತಿಗಳ ಬಿಡುಗಡೆ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಶಾಸ್ತ್ರಿಯವರು ಜಾಗತಿಕ ಕಥಾಲೋಕಕ್ಕೆ ಭಾರತದ ಕೊಡುಗೆ ಬಹಳ ದೊಡ್ಡದು. ವೇದಕಾಲದಿಂದ ಇಂದಿನವರೆಗೂ ನಮ್ಮ ಕಥಾ ಸಾಹಿತ್ಯ ಬೆಳೆದುಬಂದಿದೆ. ನಾವು ಏನನ್ನೇ ಬರೆದರೂ ಅವು ಓದುಗರ ಮನಸ್ಸನ್ನು ಕೆರಳಿಸುವಂತೆ ಅಥವಾ ಪ್ರಚೋದಿಸುವಂತೆ ಇರಬಾರದು. ಸಮಾಜಕ್ಕೆ ಒಳ್ಳೆಯದನ್ನು ನೀಡುವುದೇ ನಮ್ಮ ಬರೆಹದ ಉದ್ದೇಶವಾಗಿರಬೇಕು. ಎನ್. ಗುಣಶೀಲ ಅವರ ಕಥೆಗಳು ಉತ್ತಮ ಗುಣಮಟ್ಟ ಹೊಂದಿವೆ ಎಂದು ಹೇಳಿದರು.
ಗುಣಶೀಲ ಅವರ “ಕಡಲತೀರದಲ್ಲೊಂದು ಸಂಜೆ” ಕಥಾಸಂಕಲನದ ಕುರಿತು ಮಾತನಾಡಿದ ಡಾ. ಪಿ. ಜಿ. ಕೆಂಪಣ್ಣವರ ಅವರು ಸಂಕಲನದ ಕತೆಗಳು ಚಿಕ್ಕದಾಗಿದ್ದರೂ ಪರಿಣಾಮಕಾರಿಯಾಗಿ ಮೂಡಿಬಂದಿದ್ದು ಲೇಖಕರು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕೆಂದರು.
” ಕಪ್ಪು ಕಾಡಿನಲ್ಲೊಂದು ಬೆಳದಿಂಗಳು” ಕಥಾಸಂಕಲನದ ಕುರಿತು ಮಾತನಾಡುತ್ತ ಪೋಲೀಸ್ ನಿರೀಕ್ಷಕ ಸಾಹಿತಿ ಜ್ಯೋತಿರ್ಲಿಂಗ ಹೊನಕಟ್ಟಿ ಅವರು ” ಗುಣಶೀಲ ಅವರ ಕಥೆಗಳು ಭಾವನಾತ್ಮಕ ಪ್ರಪಂಚವನ್ನು ನಿರ್ಮಿಸುವಂತಿದ್ದು ಕಥಾಸಾಹಿತ್ಯಕ್ಕೆ ಇದೊಂದು ಒಳ್ಳೆಯ ಕೊಡುಗೆ” ಎಂದು ಪ್ರಶಂಸಿಸಿದರು.
” ಕನಸು ಕಣ್ಣಿನ ಹುಡುಗಿ” ಸಂಕಲನದ ಕವನಗಳು ವಿಷಯ ವೈವಿಧ್ಯತೆಯಿಂದ ಕೂಡಿದ್ದು ಕತೆಗಾರರ ಸಾಮಾಜಿಕ ಕಳಕಳಿಗೆ ನಿದರ್ಶನವಾಗಿವೆ ಎಂದರು.
ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಲಿಯ ಗೌರವ ಕಾರ್ಯದರ್ಶಿ ಶ್ರೀ ಆರ್. ಬಿ. ಕಟ್ಟಿ ಅವರು ಮೂರು ಕೃತಿಗಳನ್ನು ಬಿಡುಗಡೆಗೊಳಿಸಿದರು. ಅಪರಾಜಿತಾ ಅವರಿಂದ ಪ್ರಾರ್ಥನೆ, ಡಾ. ಸಿ. ಕೆ. ಜೋರಾಪುರ ಅವರಿಂದ ಸ್ವಾಗತ, ಅನಸೂಯಾ ಹಿರೇಮಠ ಅವರಿಂದ ಪರಿಚಯ ಮತ್ತು ನಿರೂಪಣೆ, ಎನ್. ಗುಣಶೀಲ ಅವರಿಂದ ಲೇಖಕನ ಮಾತು, ಆನಂದ ಪುರಾಣಿಕರಿಂದ ವಂದನಾರ್ಪಣೆಗಳಾದವು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಕ. ಸಾ. ಭ. ವಿಶ್ವಸ್ಥ ಮಂಡಲಿ, ಪುರಾಣಿಕ ಟ್ರಸ್ಟ್ ಗಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕತೆಗಾರ ಗುಣಶೀಲ ಅವರನ್ನು ಸನ್ಮಾನಿಸಲಾಯಿತು. ರಕ್ಷಣಾ ಇಲಾಖೆಯ ಹಿರಿಯ ಖಾತೆ ಅಧಿಕಾರಿ ಮಹೇಶ ಹೆಗಡೆಯವರು ಉಪಸ್ಥಿತರಿದ್ದರು. ಡಾ. ಬಸವರಾಜ ಜಗಜಂಪಿ, ಪ್ರೊ. ಎಂ. ಎಸ್. ಇಂಚಲ, ಮುರುಗೇಶ ಶಿವಪೂಜಿ, ಅಶೋಕ ಮಳಗಲಿ, ಮಮತಾ ಶಂಕರ, ಸುಧಾ ಪಾಟಿಲ, ಸುನಂದಾ ಮುಳೆ, ಚಂದ್ರಶೇಖರ ನವಲಗುಂದ ಮೊದಲಾದವರು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ