ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಚಿವ ಬೈರತಿ ಸುರೇಶ್ ನಡುವಿನ ವಾಕ್ಸಮರ ಮುಂದುವರೆದಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಸಾವಿನ ಹಿಂದೆ ಶೋಭಾ ಕರಂದ್ಲಾಜೆ ಕೈವಾಡವಿದೆ ಎಂದು ಆರೋಪಿಸಿದ್ದ ಸಚಿವ ಬೈರತಿ ಸುರೇಶ್ ಗೆ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಮುಡಾ ಫೈಲ್ ಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಬಂದು ಬೈರತಿ ಸುಟ್ಟುಹಾಕಿದ್ದು ನಿಜ. ನಾವು ನಿಜ ಹೇಳಿದ್ದಕ್ಕೆ ತಡೆದುಕೊಳ್ಳಲಾಗದೇ ಇಂದು ಬೈರತಿ ಸುರೇಶ್ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ ಬೈರತಿ ಸುರೇಶ್ ನಂತವರನ್ನು ಸಂಪುಟದಲ್ಲಿ ಇಟ್ಟುಕೊಳ್ಳುವ ಅಗತ್ಯವೇನಿದೆ. ಆತ ಒಬ್ಬ ಶಕುನಿಯಂತೆ ಎಂದು ಕಿಡಿಕಾರಿದ್ದಾರೆ.
ಮೈತ್ರಾದೇವಿ ಸಾವಿನ ಹಿಂದೆ ನನ್ನ ಕೈವಾಡದ ಅನುಮಾನವಿದೆ ಎಂದು ಆರೋಪಿಸಿದ್ದಾರೆ. ಬೈರತಿ ಸುರೇಶ್ ಅವರೇ ನಾಲಿಗೆ ಬಿಗಿ ಹಿಡಿದು ಮಾತನಾಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ಸಾವಿಗೆ ಬೈರತಿ ಸುರೇಶ್ ಕಾರಣ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆ ಬಗ್ಗೆ ನಿಮಗೂ ಗೊತ್ತು. ನಾನು ಈ ಬಗ್ಗೆ ಹೇಳಬೇಕಾ? ಮೊದಲು ಕೆಳಮಟ್ಟದ ರಾಜಕಾರಣ ಮಾಡುವುದನ್ನು ಬಿಡಿ ಎಂದು ಕಿಡಿಕಾರಿದ್ದಾರೆ.
ರಾಜಕಾರಣಿಗಳು ಮಹಾಭಾರತವನ್ನು ಮೊದಲು ಓದಬೇಕು. ಮಹಾಭಾರತದಲ್ಲಿ ಶಕುನಿ ಇದ್ದ. ಆತ ಕೌರವರಿಗೆ ಸಹಾಯ ಮಾಡಲು ಇರಲಿಲ್ಲ. ಬದಲಾಗಿ ಅವರ ನಾಶ ಮಾಡಲು ಇದ್ದ. ಬೈರತಿ ಸುರೇಶ್ ಕೂಡ ಶಕುನಿಯಂತೆ. ಕೌರವರನ್ನು ಶಕುನಿ ಮುಗಿಸಿದ ಹಾಗೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಗಿಸಲೆಂದೇ ಬೈರತಿ ಸುರೇಶ್ ಇದ್ದಾರೆ. ಅವರಿಂದ ಸಿದ್ದರಾಮಯ್ಯನವರಿಗೆ ಒಳ್ಳೆಯದಾಗುತ್ತದೆ ಎಂಬುದು ಸುಳ್ಳು ಎಂದು ಗುಡುಗಿದ್ದಾರೆ.
ಇನ್ನು ಬೈರತಿ ಅವರು ನಾನು ಓಡಿ ಹೋಗುತೇನೆ ಎಂದಿದ್ದಾರೆ. ನಾನು ಓಡಿ ಹೋಗುವ ರಾಜಕಾರಣಿಯಲ್ಲಿ. ದೇವರು, ದೈವ ಬಲದಲ್ಲಿ ನಂಬಿಕೆಇಟ್ಟು ರಾಜಕಾರಣ ಮಾಡುತ್ತಿದ್ದೇನೆ. ನಿಮ್ಮ ಹಾಗೆ ಕೊಲೆ, ಸುಲಿಗೆ ಮಾಡಿ ರಾಜಕಾರಣ ಮಾಡುತ್ತಿಲ್ಲ. ನಾವು ನಿಮ್ಮನ್ನು ಹೆಬ್ಬಾಳದಿಂದ ಓಡಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ