ಪ್ರಗತಿವಾಹಿನಿ ಸುದ್ದಿ: “ಕಳೆದ 48 ಗಂಟೆಗಳಿಂದ ನಮ್ಮ ಅಧಿಕಾರಿಗಳ ತಂಡ ಮಳೆ ಪೀಡಿತ ಪ್ರದೇಶಗಳಲ್ಲಿ ನಿರಂತರವಾಗಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಈಗ ಪರಿಹಾರ ಕಾರ್ಯ ನಡೆಯುವುದು ಮುಖ್ಯವೇ ಹೊರತು, ನಾನು ಸ್ಥಳಕ್ಕೆ ಭೇಟಿ ನೀಡುವುದಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯಿಸಿದರು.
ಬೆಂಗಳೂರಿನಲ್ಲಿ ಮಳೆಯಿಂದ ಹೆಚ್ಚಿನ ಹಾನಿಯಾಗಿದ್ದು, ನೀವು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ ಎನ್ನುವ ವಿರೋಧ ಪಕ್ಷಗಳ ಆರೋಪದ ಬಗ್ಗೆ ಕೇಳಿದಾಗ, “ನಾನು ಭೇಟಿ ನೀಡುವುದಷ್ಟೇ ಮುಖ್ಯವಲ್ಲ. ಕೆಲಸಗಳು ಆಗಬೇಕು. ನಾನು ಭೇಟಿ ಮಾಡಿದರೆ ಪ್ರಚಾರ ಸಿಗುತ್ತದೆ. ನಮಗೆ ಪ್ರಚಾರ ಮುಖ್ಯವಲ್ಲ. ಇಂತಹ ಪರಿಸ್ಥಿತಿ ಎದುರಿಸುತ್ತಿರುವ ಸ್ಥಳಗಳನ್ನು ಗುರುತಿಸಿ ಶಾಶ್ವತ ಪರಿಹಾರ ನೀಡಲು ನಾವು ಸಮಿತಿ ರಚಿಸಲಾಗಿದೆ. ಆ ಸಮಿತಿ ವರದಿ ನೀಡಲಿದೆ” ಎಂದು ತಿಳಿಸಿದರು.
“ನಾನು ಕೂಡ ಸೋಮವಾರ ಸಂಜೆ ಮಳೆಯಲ್ಲಿ ಸಿಲುಕಿದ್ದೆ. ಚಳ್ಳಕೆರೆಯಿಂದ ಬರುವಾಗ ನೆಲಮಂಗಲದ ಬಳಿ ಸೇತುವೆ ಮೇಲೆ 2 ಅಡಿ ನೀರಿತ್ತು. ನಮ್ಮ ಅಧಿಕಾರಿಗಳು ದಿನದ 24 ಗಂಟೆಗಳ ಕಾಲ ಶ್ರಮಿಸುತ್ತಿದ್ದು, ಕಳೆದ 48 ಗಂಟೆಗಳಿಂದ ಅವರು ಮಳೆ ಪೀಡಿತ ಪ್ರದೇಶಗಳಲ್ಲಿ ಇದ್ದಾರೆ. ಈ ಸಮಯದಲ್ಲಿ ಅವರನ್ನು ಮುಜುಗರಕ್ಕೀಡು ಮಾಡಲು ನನಗೆ ಇಷ್ಟವಿಲ್ಲ” ಎಂದು ತಿಳಿಸಿದರು.
“ಚೌಡೇಶ್ವರಿ ನಗರದಲ್ಲಿ 150 ಎಂಎಂ ಮಳೆಯಾಗಿದೆ. ಇನ್ನು ಕೆಲವು ಕಡೆಗಳಲ್ಲಿ ವಾಡಿಕೆಗಿಂತ ಶೇ 300ರಷ್ಟು ಹೆಚ್ಚಿನ ಮಳೆಯಾಗಿದೆ. ಈ ವಿಚಾರವಾಗಿ ಅಧಿಕಾರಿಗಳು ವರದಿ ನೀಡಿದ್ದಾರೆ. ಕೆಲವು ಪ್ರದೇಶದ ಜನರಿಗೆ ಸ್ಥಳಾಂತರ ಮಾಡಲು ಹೇಳಿದ್ದೇವೆ. ಕೇಂದ್ರಿಯ ವಿದ್ಯಾಲಯ ಹಾಗೂ ಟಾಟಾನಗರದಿಂದ ಸುಮಾರು 600 ಕುಟುಂಬಗಳನ್ನು ಸ್ಥಳಾಂತರಗೊಳಿಸಲು ಹೇಳಿದ್ದೇವೆ. 5 ಎಸ್ ಡಿಆರ್ ಎಫ್ ಹಾಗೂ ಎನ್ ಡಿಆರ್ ಎಫ್ ತಂಡಗಳ ನಿಯೋಜನೆ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.
“ಕೆಲವು ಅಪಾರ್ಟ್ಮೆಂಟ್ ಗಳನ್ನು 8 ದಿನಗಳ ಕಾಲ ಮುಚ್ಚಲು ಸೂಚನೆ ನೀಡಲಾಗಿದೆ. 20-25 ಹೆಚ್ ಪಿ ಯಂತ್ರಗಳನ್ನು ಹಾಕಿ ಚರಂಡಿ ಸ್ವಚ್ಛಗೊಳಿಸಲಾಗುತ್ತಿದೆ. 20 ಕಡೆಗಳಲ್ಲಿ ನೀರನ್ನು ತೆಗೆಯಲಾಗುತ್ತಿದೆ. ಪ್ರಕೃತಿಯನ್ನು ತಡೆದು ನಿಲ್ಲಿಸಲು ಆಗುವುದಿಲ್ಲ. ದುಬೈನಲ್ಲಿ ಪ್ರವಾಹ, ದೆಹಲಿಯಲ್ಲಿ ಮಾಲಿನ್ಯದ ವಿಚಾರ ನೀವು ನೋಡುತ್ತಿದ್ದೀರಿ. ನಮ್ಮ ತಂಡ ಹಗಲಿರುಳು ಶ್ರಮಿಸುತ್ತಿದೆ. ನಾನು ಕೂಡ ಪರಿಹಾರ ಕಾರ್ಯಗಳ ಪರಿಶೀಲನೆ ಮಾಡಿದ್ದೇನೆ. ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ಹೆಚ್ಚು ಸಮಸ್ಯೆಯಾಗಿದೆ. ದಾಸರಹಳ್ಳಿಯಲ್ಲಿ ಟ್ಯಾಂಕ್ ಒಡೆದಿದೆ. ಮಹದೇವಪುರ ವಲಯದಲ್ಲಿ 5 ಬಡಾವಣೆಗಳು ಸಮಸ್ಯೆಗೆ ಸಿಲುಕಿವೆ. ಈ ಎಲ್ಲಾ ಸಮಸ್ಯೆಗಳನ್ನು ನಾವು ಬಗೆಹರಿಸುತ್ತೇವೆ” ಎಂದರು.
ಇಬ್ಬರು ಮಕ್ಕಳು ಕೆರೆಯಲ್ಲಿ ಕೊಚ್ಚಿ ಹೋಗಿರುವ ಬಗ್ಗೆ ಕೇಳಿದಾಗ, “ನಾನು ಈ ವಿಚಾರ ನೋಡಿದೆ. ಆ ತಾಯಿಯ ಗೋಳು ಕಂಡೆ. ಮಕ್ಕಳ ಶೋಧ ಕಾರ್ಯ ನಡೆಯುತ್ತಿದೆ” ಎಂದು ತಿಳಿಸಿದರು.
ಬಿಜೆಪಿ ತೊರೆದ ನಂತರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ
ಸಿ.ಪಿ ಯೋಗೇಶ್ವರ್ ಅವರು ಕಾಂಗ್ರೆಸ್ ಗೆ ಬಂದರೆ ಸ್ವಾಗತ ಎಂದು ಸಿಎಂ ಹಾಗೂ ಮಾಜಿ ಸಂಸದ ಸುರೇಶ್ ಅವರು ಹೇಳಿರುವ ಬಗ್ಗೆ ಕೇಳಿದಾಗ, “ಈ ವಿಚಾರ ನನಗೆ ಗೊತ್ತಿಲ್ಲ. ಅವರು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಓದಿದ್ದೇನೆ. ಚನ್ನಪಟ್ಟಣದಲ್ಲಿ ಇಂದು ಸಭೆ ನಡೆಸುತ್ತಿದ್ದಾರೆ ಎಂದು ನಮ್ಮ ಮುಖಂಡರು ಕರೆ ಮಾಡಿ ತಿಳಿಸಿದರು. ಬಿಜೆಪಿಯವರು ಕೂಡ ಯೋಗೇಶ್ವರ್ ಅವರ ಜತೆ ಚರ್ಚೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅವರು ಬಿಜೆಪಿ ಬಿಟ್ಟ ನಂತರ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಸಿಎಂ ಜತೆ ಚರ್ಚೆ ಮಾಡುತ್ತೇನೆ. ಈಗ ಅವರು ಬಿಜೆಪಿಯಲ್ಲೇ ಇದ್ದಾರೆ, ಬಿಜೆಪಿಯಲ್ಲಿರುವವರ ಬಗ್ಗೆ ನಾನೇಕೆ ಮಾತನಾಡಲಿ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ