ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು : ಐತಿಹಾಸಿಕ ಕಿತ್ತೂರಿನಲ್ಲಿ ಮುಂದಿನ ವರ್ಷ ನಡೆಯುವ ಗ್ರಾಮದೇವಿ ಜಾತ್ರಾ ಮಹೋತ್ಸಕ್ಕೆ ಎಲ್ಲ ಸಹಾಯ ಸಹಕಾರ ನೀಡುವುದಾಗಿ ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ಪಟ್ಟಣದ ಕೋಟೆಯ ಆವರಣದಲ್ಲಿರುವ ಗ್ರಾಮದೇವಿ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ನಡೆದ ಪುರಾಣದ ಮಂಗಲ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ ಅವರು, ಕಿತ್ತೂರು ಸೇರಿದಂತೆ ೭ ಗ್ರಾಮಗಳಿಗೆ ಶಕ್ತಿ ಮಾತೆಯಾಗಿರುವ ಗ್ರಾಮದೇವತೆಯರ ಜಾತ್ರೆಯನ್ನು ಆಚರಿಸಲು ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ.
ಈ ಜಾತ್ರೆಯನ್ನು ವಿಜ್ರಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಎಲ್ಲ ಸಹಾಯ ಸಹಕಾರವನ್ನು ನೀಡಲಾಗುವುದೆಂದು ಹೇಳಿದ ಅವರು, ಕಿತ್ತೂರು ಅಭಿವೃದ್ಧಿಗಾಗಿ ಈಗಾಗಲೇ ರೂ.೨೦೦ ಕೋಟಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು ಹಣ ಬಿಡುಗಡೆಗೆ ಪ್ರಯತ್ನ ನಡೆಸಲಾಗುತ್ತಿದೆ, ಇದರಲ್ಲಿ ಶೇ ೭೫ ರಷ್ಟು ಹಣವನ್ನು ಕಿತ್ತೂರು ಪಟ್ಟಣದ ಅಭಿವೃದ್ಧಿಗೆ ಮೀಸಲಾಗಿಡಲಾಗುವುದೆಂದು ಹೇಳಿದರು.
ಆಧ್ಯಾತ್ಮದತ್ತ ಮುಖ ಮಾಡಿ
ಗೋಕಾಕ ತಾಲೂಕಿನ ತುಕ್ಕಾನಟ್ಟಿಯ ಶಾಂತಾನಂದ ಸ್ವಾಮೀಜಿ ಮಾತನಾಡಿ, ಈಗಿನ ಯುವ ಪೀಳಿಗೆಯು ದೇಶದ ಸಂಸ್ಕೃತಿ ಆಚಾರ ವಿಚಾರ ತಿಳಿಯದೇ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಪರಿಣಾಮ ಮಾನವೀಯ ಮೌಲ್ಯಗಳ ಕೊರತೆ ಇದರಿಂದ ಎದ್ದು ಕಾಣುತ್ತಿದೆ, ನಮ್ಮಲ್ಲಿರುವ ದುಷ್ಟಗುಣಗಳನ್ನು ಸಂಹರಿಸಲು ಆಧ್ಯಾತ್ಮದತ್ತ ಮುಖ ಮಾಡಬೇಕಾಗುತ್ತದೆ.
ನವರಾತ್ರಿಯಂತಹ ವಿಶೇಷ ದಿನಗಳಲ್ಲಿ ನಡೆಯುವ ಪುರಾಣ ಪ್ರವಚನಗಳನ್ನು ಆಲಿಸುತ್ತಾ ದೇವರ ಧ್ಯಾನ ಮಾಡಿದಲ್ಲಿ ನಮ್ಮಲ್ಲಿರುವ ದುರ್ಗಣ ಹಾಗೂ ದುಷ್ಟಶಕ್ತಿಗಳು ಅಳಿಸಲು ಸಾಧ್ಯವೆಂದು ಹೇಳಿದ ಅವರು, ಪುರಾಣ ಪ್ರವಚನಗಳನ್ನು ಆಲಿಸಿದ ನಂತರ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಜೊತೆಗೆ ಮಕ್ಕಳಲ್ಲಿ ಈಗಿನಿಂದಲೇ ಸಂಸ್ಕಾರವನ್ನು ತುಂಬುವ ಕಾರ್ಯವನ್ನು ಮಾಡಬೇಕು. ಇಲ್ಲವಾದಲ್ಲಿ ಪಾಲಕರೆ ಮಕ್ಕಳ ಜೀವನಕ್ಕೆ ಶತ್ರುಗಳಾಗುತ್ತಾರೆ ಎಂಬ ಕಿವಿಮಾತನ್ನು ಹೇಳಿದರು.
ಸಂಸ್ಕಾರದ ಕೊರತೆಯಿಂದ ಸಮಾಜದಲ್ಲಿ ಅನೇಕ ಅನಾಚಾರಗಳು ತಾಂಡವಾಡುತ್ತಿವೆ. ಅದರಲ್ಲಿಯೂ ಅತ್ಯಾಚಾರ, ಗೋಹತ್ಯೆ ಹಾಗೂ ಭ್ರೂಣಹತ್ಯೆಯಂತಹ ಕೃತ್ಯಗಳು ಹೆಚ್ಚುತ್ತಿದ್ದು ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಲು ತೊಡಕಾಗಿವೆ ಎಂದು ಹೇಳಿದ ಅವರು, ಮಕ್ಕಳಲ್ಲಿ ದೇಹಾಭಿಮಾನದ ಬದಲಾಗಿ ದೇಶಾಭಿಮಾನ ಬೆಳೆಸಿ ಜೊತೆಗೆ ಆಧ್ಯಾತ್ಮದಲ್ಲಿ ನಿಷ್ಕಾಮ ಭಕ್ತಿಯಿಂದ ದೇವರನ್ನು ಪೂಜಿಸಿದಲ್ಲಿ ಮುಕ್ತಿ ದೊರೆಯಲು ಸಾಧ್ಯವೆಂದು ಹೇಳಿದರು.
ಇದಕ್ಕೂ ಮೊದಲು ಲೋಕ ಕಲ್ಯಾಣಕ್ಕಾಗಿ ಶಾಂತಾನಂದ ಸ್ವಾಮೀಜಿಯವರ ಮುಂದಾಳತ್ವದಲ್ಲಿ ಸಾಮೂಹಿಕ ಚಂಡಿಕಾ ಹೋಮವನ್ನು ನೆರವೇರಿಸಲಾಯಿತು. ಜೊತೆಗೆ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ನಿವೃತ್ತ ಶಿಕ್ಷಕರಾದ ಈಶ್ವರ ಗಡಿಬಿಡಿ, ಪ್ರಹ್ಲಾದ ಶಿಗ್ಗಾಂವಿ ಸಂಗೀತ ಸೇವೆ ನೀಡಿದರು.
ಗ್ರಾಮದೇವಿ ಕಮಿಟಿ ಅಧ್ಯಕ್ಷ ಈರಣ್ಣಾ ಮಾರಿಹಾಳ, ಗುರುಶಿದ್ದಯ್ಯಾ ಕಲ್ಮಠ, ಚನ್ನಬಸಯ್ಯಾ ಹಿರೇಮಠ, ಶ್ರೀಕಾಂತ ದಳವಾಯಿ, ಸುರೇಶ ಸೂರ್ಯವಂಶಿ, ಸಂಭಾಜಿ ಜಾದವ, ಶಿವಾನಂದ ಜಕಾತಿ, ಯಲ್ಲಪ್ಪ ವಕ್ಕುಂದ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು,
ನವರಾತ್ರಿ ನಿಮಿತ್ತ ಪುರಾಣ ಕಾರ್ಯಕ್ರಮದಲ್ಲಿ ಪ್ರತಿದಿನವೂ ಕಿತ್ತೂರು ಸೇರಿದಂತೆ ೭ ಗ್ರಾಮಗಳ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದು ವಿಶೇಷವಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ