Belagavi NewsBelgaum NewsKannada NewsKarnataka NewsLatest

ಶಿಕ್ಷಕ ಸೇರಿ ಇಬ್ಬರ ಆತ್ಮಹತ್ಯೆ; ಅಪಘಾತಕ್ಕೆ ಇಬ್ಬರು ಬಲಿ

ರೋಗಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ : ತಮ್ಮ ದೇಹದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತಿತರ ರೋಗಗಳಿಂದ ಬೇಸತ್ತ ವ್ಯಕ್ತಿಯೊಬ್ಬರು ವಿಷ ಸೇವಿಸಿ ಸಾವಿಗೆ ಶರಣಾದ ಘಟನೆ ಪಟ್ಟಣದ ಮಲಪ್ರಭಾ ಕ್ರೀಡಾಂಗಣದಲ್ಲಿ ಸಂಭವಿಸಿದೆ. ತಾಲ್ಲೂಕಿನ ಗುಂಡೇನಟ್ಟಿ ಗ್ರಾಮದ ಸಂಗಪ್ಪ ಯಲ್ಲಪ್ಪ ಅವರಾದಿ (65) ಮೃತ ವ್ಯಕ್ತಿ. ವಿಷ ಸೇವಿಸಿ ಕ್ರೀಡಾಂಗಣದಲ್ಲಿ ಮಲಗಿದ್ದ ಅವರನ್ನು ಗಮನಿಸಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

**

ಮಾನಸಿಕ ಖಿನ್ನತೆ: ಶಿಕ್ಷಕ ಆತ್ಮಹತ್ಯೆ

ಮಾನಸಿಕ ಖಿನ್ನತೆಯಿಂದಾಗಿ ಶಿಕ್ಷಕರೊಬ್ಬರು ರಸ್ತೆ ಪಕ್ಕದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಪಟ್ಟಣದ ಹೊರವಲಯದ ಬೆಳಗಾವಿ -ಪಣಜಿ ಹೆದ್ದಾರಿ ಬಳಿ ಶನಿವಾರ ಮಧ್ಯಾಹ್ನ ವರದಿಯಾಗಿದೆ. ಮೃತರನ್ನು ನಂದಗಡ ನಿವಾಸಿ ಮತ್ತು ನಂದಗಡದ ಕನ್ಯಾ ವಿದ್ಯಾಲಯ ಪ್ರೌಢಶಾಲೆಯ ಶಿಕ್ಷಕ ಸಂದೀಪ ಶಿಂಧೆ (44) ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನದವರೆಗೆ ಕರ್ತವ್ಯ ನಿರ್ವಹಿಸಿದ್ದ ಮೃತ ದುರ್ದೈವಿ ಅನಾರೋಗ್ಯದ ಕಾರಣ ಹೇಳಿ ಅರ್ಧ ದಿನ ರಜೆ ಹಾಕಿ ಶಾಲೆಯಿಂದ ಮರಳಿದ್ದರು. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

***

ರಸ್ತೆ ಅಪಘಾತ: ಇಬ್ಬರ ಸಾವು

ಪಟ್ಟಣದ ಹೊರವಲಯದ ಜಾಂಬೋಟಿ ರಸ್ತೆಯ ರೈಲ್ವೆ ಸೇತುವೆ ಬಳಿ ಎರಡು ಬೈಕ್ ಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿ ಒಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಒಂದು ಬೈಕ್ ಸವಾರ ತಾಲ್ಲೂಕಿನ ರಾಮಗುರವಾಡಿ ಗ್ರಾಮದ ಶಂಕರ ಗುರವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಚಿಕ್ಕಪ್ಪ, ಹಿಂಬದಿ ಸವಾರ ರವಳು ಗುರವ ಬೆಳಗಾವಿಯ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್ ಸವಾರ ನಾಗುರ್ಡಾ ಗ್ರಾಮದ ಅಮೋಲ ಪಾಖರೆ ಗಂಭೀರವಾಗಿ ಗಾಯಗೊಂಡು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

****

ಕುಣಕಿಕೊಪ್ಪ ಸುತ್ತಮುತ್ತ ಕಾಡಾನೆ ದಾಳಿ: ಅಪಾರ ಬೆಳೆನಾಶ

ತಾಲ್ಲೂಕಿನ ಕುಣಕಿಕೊಪ್ಪ ಗ್ರಾಮದ ಹೊರವಲಯದ ಕೃಷಿ ಜಮೀನಿನಲ್ಲಿ ಶನಿವಾರ ಕಾಡಾನೆಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ರೈತರ ಜಮೀನುಗಳಲ್ಲಿ ಸಂಚರಿಸುತ್ತಿರುವ ಕಾಡಾನೆ ಅಪಾರ ಪ್ರಮಾಣದ ಬೆಳೆನಾಶ ಮಾಡುತ್ತಿದೆ. ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ತಮ್ಮೂರಿನಿಂದ ಬೇರೆಡೆ ಸಾಗಿಸಬೇಕು ಎಂದು ಕುಣಕಿಕೊಪ್ಪ ಗ್ರಾಮದ ರೈತರು ಆಗ್ರಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button