ಒಂದೇ ದಿನದಲ್ಲಿ 51000 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ವಿತರಣೆ
ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ರೋಜಗಾರ್ ಯೋಜನೆ ಮುಖೇನ ದೇಶದಲ್ಲಿ 10 ಲಕ್ಷಕ್ಕೂ ಅಧಿಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಧಾರವಾಡದಲ್ಲಿ ಇಂದು ಆಯೋಜಿಸಿದ್ದ ರೋಜಗಾರ್ ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದರು.
ರೋಜಗಾರ್ ಮೇಳದಲ್ಲಿ ದೇಶಾದ್ಯಂತ ಇಂದು 51 ಸಾವಿರ ಉದ್ಯೋಗಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಲಾಗಿದೆ. ಮುಂದಿನ ದಿನ ಇದು ಇನ್ನಷ್ಟು ಹೆಚ್ಚಲಿದೆ ಎಂದು ಹೇಳಿದರು.
ಕಳೆದ ವರ್ಷದಿಂದಲೇ ಪ್ರಧಾನಮಂತ್ರಿ ರೋಜಗಾರ್ ಉದ್ಯೋಗ ಮೇಳ ಆಯೋಜಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ. ದೇಶಾದ್ಯಂತ ಒಟ್ಟಾರೆ 10 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ನೀಡುವ ಯೋಜನೆ ಹಾಕಿಕೊಂಡಿದೆ ನಮ್ಮ ಸರ್ಕಾರ ಎಂದು ಹೇಳಿದರು.
ಧಾರವಾಡದಲ್ಲಿ 100 ಜನಕ್ಕೆ ನೇಮಕಾತಿ:
ಧಾರವಾಡದಲ್ಲಿ ಇಂದು ಭಾರತೀಯ ಅಂಚೆ ಇಲಾಖೆ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ ಈ ಉದ್ಯೋಗ ಮೇಳದಲ್ಲಿ 100 ಅಭ್ಯರ್ಥಿಗಳಿಗೆ ನೇರ ನೇಮಕಾತಿ ಆದೇಶ ಪತ್ರ ನೀಡಲಾಗಿದೆ ಎಂದು ಸಚಿವ ಜೋಶಿ ತಿಳಿಸಿದರು.
ಹೊಸದಾಗಿ ನೇಮಕಗೊಂಡ ಉದ್ಯೋಗಿಗಳು 2047ರ ವಿಕಸಿತ ಭಾರತ ನಿರ್ಮಾಣಕ್ಕೆ ಅನನ್ಯ ಕೊಡುಗೆ ನೀಡಲಿ. ಈ ನಿಟ್ಟಿನಲ್ಲಿ ದೇಶಕ್ಕೆ ಅವರ ಸೇವೆ ಫಲಿಸಲಿ ಎಂದು ಜೋಶಿ ಆಶಿಸಿದರು.
ಉದ್ಯೋಗ ಆಕಾಂಕ್ಷಿಗಳಿಗೆ ದೀಪಾವಳಿ ಉಡುಗೊರೆ:
ದೇಶದಲ್ಲಿ ಉದ್ಯೋಗದ ಆಕಾಂಕ್ಷೆಯಲ್ಲಿದ್ದ ನಿರುದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ನೇಮಕಾತಿ ಅಭಿಯಾನದ ಮೂಲಕ ದೀಪಾವಳಿ ಉಡುಗೊರೆ ನೀಡಿದೆ ಎಂದು ಹೇಳಿದರು.
ಕಳೆದ ವರ್ಷ ಅಕ್ಟೋಬರ್ ನಲ್ಲೇ ಈ ಉದ್ಯೋಗ ಮೇಳ ಆರಂಭಿಸಿದ್ದು, ಈ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಅರ್ಹ 51000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದರು. ಅಂತೆಯೇ ಧಾರವಾಡದಲ್ಲಿ ಸಹ ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ಸುಶೀಲ್ ಕುಮಾರ್, ಅಂಚೆ ಸೇವೆಗಳ ನಿರ್ದೇಶಕರಾದ ಶ್ರೀಮತಿ ತಾರಾ, ಮಹಾನಗರ ಪಾಲಿಕೆ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ