Belagavi NewsBelgaum NewsKannada NewsKarnataka News

ಜಿಲ್ಲೆಯಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ: ಕ್ಯಾನ್ಸರ್ ರೋಗಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವ ಸತೀಶ್ ಜಾರಕಿಹೊಳಿ



ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವೇಣುಗ್ರಾಮ ಎಂದು ಹೆಸರುವಾಸಿಯಾಗಿದ್ದ ನಮ್ಮ ಬೆಳಗಾವಿಯು ತನ್ನ ವಿಶಿಷ್ಟ ಮತ್ತು ವಾತಾನುಕೂಲ ಪರಿಸರದಿಂದಾಗಿ ಎಲ್ಲರಿಗೂ ಪ್ರಿಯವಾಗಿದೆ. ಐತಿಹಾಸಿಕವಾಗಿ ಜಿಲ್ಲೆಯ ಹಲಸಿ ಗ್ರಾಮವು ಕದಂಬ ಅರಸರ ರಾಜಧಾನಿಯಾಗಿದ್ದ ಸಂಗತಿಯು ಶಾಸನಗಳು ಮತ್ತು ತಾಮ್ರ ಪತ್ರಗಳ ಆಧಾರದಿಂದ ತಿಳಿದುಬರುತ್ತದೆ. ಮದ್ರಾಸ್, ಮುಂಬೈ ಸೇರಿದಂತೆ ವಿವಿಧ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳು ಒಂದಾಗಿ ಅಖಂಡ ಕರ್ನಾಟಕದ ಕನಸು ನನಸಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿರಾದ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಮಾಧ್ಯಮ ಪ್ರತಿನಿಧಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ


ನಗರದ ಜಿಲ್ಲಾಕ್ರೀಡಾಂಗಣದಲ್ಲಿ ಶುಕ್ರವಾರ (ನ.೧) ಜರುಗಿದ ೬೯ನೇ ರಾಜ್ಯೋತ್ಸವದ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
೬ನೇ ಶತಮಾನದಿಂದ ಕ್ರಿ.ಶ ೭೬೦ರ ವರೆಗೂ ಬೆಳಗಾವಿಯು ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿತ್ತು. ಕ್ರಿ,ಶ ೮೭೫ರ ಅವಧಿಯಲ್ಲಿ ರಾಷ್ಟಕೂಟರ ಆಳ್ವಿಕೆಯಲ್ಲಿ ಸಾಂಸ್ಕೃತಿಕವಾಗಿ ಬೆಳೆದುಬಂದ ಬೆಳಗಾವಿ, ನಂತರ ರಟ್ಟ ವಂಶದ ಅರಸರ ರಾಜಧಾನಿಯಾಗಿತ್ತು. ಚಾರಿತ್ರಿಕವಾಗಿ ಪಾರತಂತ್ರ್ಯವನ್ನು ವಿರೋಧಿಸಿ ಬ್ರಿಟೀಷರೊಡನೆ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ ಕಿತ್ತೂರಿನ ರಾಣಿ ಚೆನ್ನಮ್ಮ; ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಪ್ರಪ್ರಥಮ ಮಹಿಳಾ ಸೈನ್ಯವನ್ನು ಕಟ್ಟಿದ ಬೆಳವಡಿ ಮಲ್ಲಮ್ಮ ನಮ್ಮ ನಾಡಿನ ಧೀಮಂತ ಶಕ್ತಿಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಮೆರವಣಿಗೆ: ೬೯ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ವಿವಿಧ ರೂಪಕ ನಿಮಿತ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ನಾಡದೇವಿ ಭುವನೇಶ್ವರಿ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ತದನಂತರ ಜರುಗಿದ ಆರ್ಕಷಕ ಮೆರವಣಿಗೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ರೂಪಕಗಳು ಸಾರ್ವಜನಿಕರ ಗಮನ ಸೆಳೆದವು.
ನಾಗರೀಕ ಪೊಲೀಸ್ ಪಡೆ, ಕೆ.ಎಸ್.ಆರ್.ಪಿ ಪುರುಷ ಮತ್ತು ಮಹಿಳಾ ತುಕಡಿ, ಅಬಕಾರಿ ಇಲಾಖೆ, ಗೃಹ ರಕ್ಷಕ ದಳ, ಎನ್.ಸಿ.ಸಿ, ಭಾರತ ಸೇವಾದಳ ಮಹೇಶ್ವರಿ ಅಂದ ಮಕ್ಕಳ ಶಾಲೆ ಸೇರಿದಂತೆ ವಿವಿಧ ಶಾಲಾ ಮಕ್ಕಳು ಪರೇಡನಲ್ಲಿ ಭಾಗವಹಿಸಿದ್ದವು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಸಂಸದರಾದ ಜಗದೀಶ ಶೆಟ್ಟರ, ಶಾಸಕರುಗಳಾದ ರಾಜು ಆಸೀಫ್ (ಸೇಠ), ಅಭಯ ಪಾಟೀಲ, ವಿಧಾನ ಪರಿಷತ್ ಸದಸ್ಯರುಗಳಾದ ಚನ್ನರಾಜ ಹಟ್ಟಿಹೊಳಿ, ಸಾಬಣ್ಣ ತಳವಾರ, ಮಹೌಪೌರರಾದ ಸವಿತಾ ಕಾಂಬಳೆ, ಉಪಮಹಾಪೌರ ಆನಂದ ಚವ್ಹಾಣ, ನಗರ ಸೇವಕರು, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೋಲಿಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ನಬ್ಯಾಂಗ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯತ ಸಿ.ಇ.ಓ ರಾಹುಲ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಉಪವಿಭಾಗಾಧಿಕಾರಿ ಶ್ರವಣ ನಾಯಕ, ಗಣ್ಯರು, ಸಾರ್ವಜನಿಕರು ಹಾಗೂ ವಿವಿಧ ಶಾಲಾ ಕಾಲೇಜು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.


ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ (ನ.೧) ಜರುಗಿದ ೬೯ನೇ ರಾಜ್ಯೋತ್ಸವದ ಪ್ರಯುಕ್ತ ಜರುಗಿದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾಧ್ಯಮ ಪ್ರತಿನಿಧಿಗಳು, ಕನ್ನಡಪರ ಹೋರಾಟಗಾರರು ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸೇರಿದಂತೆ ಗಣ್ಯರುಗಳು ಸನ್ಮಾನಿಸಿದರು.
ಮಾಧ್ಯಮ ಪ್ರತಿನಿಧಿಗಳ ವಿಭಾಗ:
ಮುದ್ರಣ ಮಾಧ್ಯಮ ವಿಭಾಗ: ಪಿ.ಟಿ.ಐ. ಸುದ್ದಿ ಸಂಸ್ಥೆ ವರದಿಗಾರರಾದ ಸುಭಾಷ್ ಮದ್ಧುರಾವ ಕುಲಕರ್ಣಿ ಹಾಗೂ ಉದಯವಾಣಿ ದಿನಪತ್ರಿಕೆಯ ಜಿಲ್ಲಾ ಹಿರಿಯ ವರದಿಗಾರರಾದ ಭೈರೋಬಾ ಶಿವಾಜಿ ಕಾಂಬಳೆ.
ಪತ್ರಿಕಾ ಛಾಯಾಗ್ರಾಹಕರ ವಿಭಾಗ: ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆ ಛಾಯಾಗ್ರಾಹಕರಾದ ಏಕನಾಥ ರಾಮಚಂದ್ರ ಅಗಸಿಮನಿ.
ವಿದ್ಯುನ್ಮಾನ ಮಾಧ್ಯಮ ವಿಭಾಗ: ಪ್ರಜಾ ಟಿ.ವಿ. ಜಿಲ್ಲಾ ವರದಿಗಾರರಾದ ಚಂದ್ರು ಹಣಮಂತ ಶ್ರೀರಾಮುಡು ಮತ್ತು ಚಿಕ್ಕೋಡಿ ಸುವರ್ಣ ನ್ಯೂಸ್ ವರದಿಗಾರರಾದ ಮುಸ್ತಾಕ್‌ಅಹ್ಮದ್ ಸಯ್ಯದ್ ಹುಸೇನ್ ಪೀರಜಾದೆ.
ಟಿವಿ ಕ್ಯಾಮರಾಮೆನ್ ವಿಭಾಗ: ನ್ಯೂಸ್ ಫರ್ಸ್ಟ ಕ್ಯಾಮೆರಾಮನ್ ರೋಹಿತ ನಾರಾಯಣ ಶಿಂಧೆ ಮತ್ತು ಇನ್ ನ್ಯೂಸ್ ಛಾಯಾಗ್ರಾಹಕ ಸುಭಾನಿ ಇಮಾಮಸಾಬ್ ಮುಲ್ಲಾ.
ಜಿಲ್ಲಾ/ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರುಗಳ ವಿಭಾಗ: ಸಮದರ್ಶಿ ದಿನಪತ್ರಿಕೆಯ ಸಂಪಾದಕರಾದ ಅಶ್ರಫ್ ಬಾಬಾಸಾಬ್ ಧಾರವಾಡಕರ.
ತಾಲೂಕು ವರದಿಗಾರರ ವಿಭಾಗ: ಚನ್ನಮ್ಮನ ಕಿತ್ತೂರಿನ ಪ್ರಜಾವಾಣಿ ದಿನಪತ್ರಿಕೆಯ ತಾಲೂಕು ವರದಿಗಾರರಾದ ಪ್ರದೀಪ ನೀಲಕಂಧರ ಮೇಲಿನಮನಿ ಮತ್ತು ಕಾಗವಾಡ ತಾಲೂಕಿನ ಸಂಯುಕ್ತ ಕರ್ನಾಟಕ ಹಾಗೂ ಕನ್ನಡಪ್ರಭ ದಿನಪತ್ರಿಕೆಯ ತಾಲೂಕು ವರದಿಗಾರರಾದ ಸಿದ್ಧಯ್ಯ ಗಂಗಯ್ಯ ಹಿರೇಮಠ.
ಪತ್ರಿಕಾ ವಿತರಕರ ವಿಭಾಗ: ಬೈಲಹೊಂಗಲ್ ತಾಲೂಕಿನ ನೇಗಿನಹಾಳ ಗ್ರಾಮದ ಸದೆಪ್ಪ ಫಕೀರಪ್ಪ ಗರಗದ.
ಕನ್ನಡಪರ ಹೋರಾಟಗಾರರ ವಿಭಾಗ:
ಹೊಳೆಪ್ಪ ಭೀಮಪ್ಪ ಸುಲಧಾಳ(ಮಾರ್ಕಂಡೇಯ ನಗರ, ಬೆಳಗಾವಿ), ಮಾರುತಿ ಲಕ್ಕಪ್ಪ ಮಾನೋಜಿ(ಬೆಳಗಾವಿ), ಬಸವರಾಜ ಖಾನಪ್ಪನವರ(ಗೋಕಾಕ), ರಾಜು ಕೋಲಾ(ಬಾಳೆಕುಂದ್ರಿ ಕೆ.ಎಚ್), ಉದಯ ಪದ್ಮನ್ನವರ(ಗಾಂಧಿನಗರ, ಬೆಳಗಾವಿ), ರಮೇಶ್ ನಾಯ್ಕರ್(ಮಾರುತಿನಗರ, ಬೆಳಗಾವಿ), ಶ್ರೀಮತಿ ಫರೀದಾ ದೇವಲಾಪುರ(ಆಟೋನಗರ, ಬೆಳಗಾವಿ), ಗಿರೀಶ್ ಕಾಮಕರ(ಭಾಗ್ಯನಗರ, ಬೆಳಗಾವಿ), ಡಾ.ಎಸ್.ಡಿ.ಪಾಟೀಲ(ಕಾಕತಿ), ಜಗನ್ನಾಥ ಬಾಮನೆ(ಅಥಣಿ), ವಿನಯ ಢವಳಿ(ಖಾಸಬಾಗ, ಬೆಳಗಾವಿ), ಮನೋಹರ ಪುಡಕಲನಟ್ಟಿ(ಹನುಮಾನ ನಗರ, ಬೆಳಗಾವಿ).
ವಿವಿಧ ಕ್ಷೇತ್ರಗಳ ವಿಭಾಗ:
ಕುಮಾರ ಬಡಿಗೇರ(ಕಪ್ಪಲಗುದ್ದಿ, ರಾಯಬಾಗ), ಬಾಬುರಾವ್ ನಡೋಣಿ(ರಾಯಬಾಗ), ಮೀರಾಸಾಬ್ ಮಲಿಕ್ ಸಾಬ್ ನದಾಫ್(ಸವಸುದ್ದಿ, ರಾಯಬಾಗ), ಭೀಮಪ್ಪ ಶಿವಲಿಂಗ ಖಿಚಡೆ(ಖಿಚಡಿ ತೋಟ, ರಾಯಬಾಗ), ಗೋಪಾಲ ಚಿಪಣಿ(ಯಮಕನಮರಡಿ), ಮುತ್ತಪ್ಪ ಸವದಿ(ಖಾನಟ್ಟಿ, ಮೂಡಲಗಿ), ಆರ್.ಎ.ಬಾಳೇಕುಂದ್ರಿ(ಬೆಳಗಾವಿ), ವಿನೋದ ಜಗಜಂಪಿ(ಹೊಸ ವಂಟಮುರಿ), ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆ(ಅಥಣಿ) ಹಾಗೂ ಆಶಾಜ್ಯೋತಿ ಎಸ್.ಎಸ್.ಟಿ. ಮಹಿಳಾ ಅಭಿವೃದ್ಧಿ ಸಂಸ್ಥೆ(ಬೆಳಗಾವಿ). ಇವರುಗಳನ್ನು ಸಚಿವರು, ಗಣ್ಯರುಗಳು ಸನ್ಮಾನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಸಂದೇಶ

ಬೆಳಗಾವಿ ಜಿಲ್ಲೆಯ ಮಹಾಜನಗಳೇ,
ಎಲ್ಲರಿಗೂ ೬೯ನೇ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಕರ್ನಾಟಕ ರಾಜ್ಯೋತ್ಸವದ ಇಂದಿನ ಸಂಭ್ರಮದಲ್ಲಿ ಭಾಗಿಯಾಗಿರುವ ಬೆಳಗಾವಿ ಜಿಲ್ಲೆಯ ಹಿರಿಯ ಜೀವಿಗಳಿಗೆ, ಕರ್ನಾಟಕದ ಏಕೀಕರಣಕ್ಕೆ ದುಡಿದ ಮಹನೀಯರಿಗೆ, ವಿದ್ವಾಂಸರು, ಕವಿ-ಸಾಹಿತಿಗಳಿಗೆ, ಚಿಂತಕರು, ಶಾಸಕರು, ಸಂಸದರು ಹಾಗೂ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ಸಹೋದರ-ಸಹೋದರಿಯರು ಮತ್ತು ಮಾಧ್ಯಮದ ಸ್ನೇಹಿತರಿಗೆ ರಾಜ್ಯೋತ್ಸವದ ಶುಭಾಶಯಗಳು.

ವೇಣುಗ್ರಾಮವೆಂದು ಹೆಸರುವಾಸಿಯಾಗಿದ್ದ ನಮ್ಮ ಬೆಳಗಾವಿಯು ತನ್ನ ವಿಶಿಷ್ಟ ಮತ್ತು ವಾತಾನುಕೂಲ ಪರಿಸರದಿಂದಾಗಿ ಎಲ್ಲರಿಗೂ ಪ್ರಿಯವಾಗಿದೆ. ಐತಿಹಾಸಿಕವಾಗಿ ಜಿಲ್ಲೆಯ ಹಲಸಿ ಗ್ರಾಮವು ಕದಂಬ ಅರಸರ ರಾಜಧಾನಿಯಾಗಿದ್ದ ಸಂಗತಿಯು ಶಾಸನಗಳು ಮತ್ತು ತಾಮ್ರ ಪತ್ರಗಳ ಆಧಾರದಿಂದ ತಿಳಿದುಬರುತ್ತದೆ.
೬ನೇ ಶತಮಾನದಿಂದ ಕ್ರಿ.ಶ ೭೬೦ರ ವರೆಗೂ ಬೆಳಗಾವಿಯು ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿತ್ತು. ಕ್ರಿ,ಶ ೮೭೫ರ ಅವಧಿಯಲ್ಲಿ ರಾಷ್ಟಕೂಟರ ಆಳ್ವಿಕೆಯಲ್ಲಿ ಸಾಂಸ್ಕೃತಿಕವಾಗಿ ಬೆಳೆದುಬಂದ ಬೆಳಗಾವಿ, ನಂತರ ರಟ್ಟ ವಂಶದ ಅರಸರ ರಾಜಧಾನಿಯಾಗಿತ್ತು.

ದೆಹಲಿಯ ಸುಲ್ತಾನರ ಹಾಗೂ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿದ್ದ ಬೆಳಗಾವಿ, ಕ್ರಿ.ಶ ೧೩೪೭ರಲ್ಲಿ ಬಹುಮನಿ ಸುಲ್ತಾನರ ಆಳ್ವಿಕೆಯ ಭಾಗವಾಗಿದ್ದ ಕುರಿತಂತೆ ಜಿಲ್ಲೆಯಾದ್ಯಂತ ಅನೇಕ ಸ್ಮಾರಕಗಳನ್ನು ನಾವು ಇಂದಿಗೂ ಕಾಣಬಹುದಾಗಿದೆ.
ಚಾರಿತ್ರಿಕವಾಗಿ ಪಾರತಂತ್ರ್ಯವನ್ನು ವಿರೋಧಿಸಿ ಬ್ರಿಟೀಷರೊಡನೆ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ ಕಿತ್ತೂರಿನ ರಾಣಿ ಚೆನ್ನಮ್ಮ; ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಪ್ರಪ್ರಥಮ ಮಹಿಳಾ ಸೈನ್ಯವನ್ನು ಕಟ್ಟಿದ ಬೆಳವಡಿ ಮಲ್ಲಮ್ಮ ನಮ್ಮ ನಾಡಿನ ಧೀಮಂತ ಶಕ್ತಿಯಾಗಿದ್ದಾರೆ.

ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಚಿಕ್ಕೋಡಿ ನ್ಯಾಯಾಲಯದ ಪ್ರಕರಣವೊಂದರಲ್ಲಿ ವಕಾಲತ್ತು ವಹಿಸಿದ್ದು, ಈ ನೆಲದ ಇನ್ನೊಂದು ವಿಶೇಷ. ಅಲ್ಲದೇ ಸಮಾನತೆಯನ್ನು ಸಾರಲು ಜಾತಿ ಭೇದವನ್ನು ತೊಡೆದು ಹಾಕಲು ವಿಶೇಷವಾಗಿ ಅಸ್ಪೃಶ್ಯತೆಯ ನಿವಾರಣೆಗಾಗಿ ಬಹಿಷ್ಕೃತ ಹಿತಕರಣಿ ಸಭಾ ಮೂಲಕ ಜಿಲ್ಲೆಯ ನಿಪ್ಪಾಣಿಯಲ್ಲಿ ಚಳುವಳಿಯನ್ನು ರೂಪಿಸಿದ್ದು ನಮಗೆಲ್ಲ ಅಭಿಮಾನದ ಸಂಗತಿಯಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಕನ್ನಡ ಕುಲಪುರೋಹಿತರೆಂದು ಖ್ಯಾತಿವೆತ್ತ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯ ಕಿಚ್ಚು ಹೊತ್ತಿಸಿದರು. ೧೯೫೦ರ ಸುಮಾರಿಗೆ ಭಾರತವು ಗಣರಾಜ್ಯವೆಂದು ಘೋಷಿಸಲ್ಪಟ್ಟ ನಂತರ, ಡೆಪ್ಯೂಟಿ ಚೆನ್ನಬಸಪ್ಪ, ಅ.ನ.ಕೃಷ್ಣರಾಯರು, ಬಿ.ಎಂ.ಶ್ರೀಕಂಠಯ್ಯನವರು, ಫ.ಗು.ಹಳಕಟ್ಟಿಯವರು, ಹುಯಿಲಗೋಳ ನಾರಾಯಣರಾಯರು, ಅಂದಾನೆಪ್ಪ ದೊಡ್ಡಮೇಟಿ ಮುಂತಾದ ಮಹನೀಯರ ಅವಿರತ ಹೋರಾಟದ ಫಲವಾಗಿ ೧೯೫೬ರ ನವೆಂಬರ್ ೧ ರಂದು ನಮ್ಮ ಹೆಮ್ಮೆಯ ಕರುನಾಡು, ಚಂದನದ ತವರೂರು ಕರ್ನಾಟಕ ರಾಜ್ಯವು ಉದಯವಾಗಿದೆ.

ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಬೆಳಗಾವಿ ಜಿಲ್ಲೆಯಿಂದ ಹಲವಾರು ಮಹನೀಯರು ಕ್ರಿಯಾಶೀಲರಾಗಿ ಹೋರಾಡಿದ್ದು, ಬೈಲಹೊಂಗಲದ ಗಂಗಾಧರ ತುರಮುರಿ, ಹುದಲಿಯ ಸ್ವಾತಂತ್ರ್ಯ ಯೋಧರಾದ ಗಂಗಾಧರರಾವ್ ದೇಶಪಾಂಡೆ, ಚಿಂಚಲಿಯ ರಾಷ್ಟ್ರೀಯವಾದಿ ಆರ್.ಎಸ್.ಹುಕ್ಕೇರಿ, ತ್ರಿವಿಧ ದಾಸೋಹಿ ನಾಗನೂರ ಶಿವಬಸವ ಮಹಾಸ್ವಾಮಿಗಳು, ಗೋಕಾವಿ ನಾಡಿನ ಬೆಟಗೇರಿ ಕೃಷ್ಣಶರ್ಮ, ಸವದತ್ತಿಯ ಶಂ.ಬಾ.ಜೋಶಿ, ಅಂಕಲಿಯ ಬಸವಪ್ರಭು ಕೋರೆ, ಅಥಣಿಯ ಬಿ.ಎನ್.ದಾತಾರ, ಕುಂದರನಾಡಿನ ಅಣ್ಣೂ ಗುರೂಜಿ, ದತ್ತೋಪಂತ ಬೆಳವಿ, ಸಂಪಗಾವಿಯ ಚನ್ನಪ್ಪ ವಾಲಿ ಮೊದಲಾದವರ ಕೊಡುಗೆ ಅವಿಸ್ಮರಣೀಯವಾಗಿದೆ.

ಚಂಪಾಬಾಯಿ ಭೋಗಲೆ, ಅಕ್ಕನ ಬಳಗದ ಬಸಲಿಂಗಮ್ಮ ಬಾಳೆಕುಂದ್ರಿ, ಕೃಷ್ಣಾಬಾಯಿ ಪಣಜೀಕರ ಮೊದಲಾದ ಮಹಿಳೆಯರೂ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿರುವುದು ನಾಡು-ನುಡಿ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಮಹಿಳೆಯರ ಕೊಡುಗೆ ಅಪಾರ ಎಂಬುದಕ್ಕೆ ಸಾಕ್ಷಿಯಾಗಿದೆ.

ಕರ್ನಾಟಕ ಏಕೀಕರಣ ಮಾತ್ರವಲ್ಲದೇ ಗೋವಾ ವಿಮೋಚನಾ ಹೋರಾಟದಲ್ಲೂ ಬೆಳಗಾವಿ ಮುಂಚೂಣಿಯಲ್ಲಿತ್ತು. ಬೆಳಗಾವಿಯು ಈ ಸತ್ಯಾಗ್ರಹದ ಮಹತ್ವದ ಕೇಂದ್ರವಾಗಿತ್ತು. ಸತ್ಯಾಗ್ರಹಿಗಳ ಎಲ್ಲ ತಂಡಗಳೂ ಬೆಳಗಾವಿಯ ಮಾರ್ಗವಾಗಿಯೇ ಗೋವೆಯನ್ನು ಪ್ರವೇಶಿಸುತ್ತಿದ್ದವು.
ಇದಲ್ಲದೇ ಬೆಳಗಾವಿಯ ವಿಠ್ಠಲ ಯಾಳಗಿ ಕುಟುಂಬದವರು, ನಾಥ್ ಪೈ, ಪರಶುರಾಮ ನಂದಿಹಳ್ಳಿ, ರಾಮ್ ಆಪ್ಟೆ ಮತ್ತಿತರರು ಗೋವಾ ವಿಮೋಚನಾ ಹೋರಾಟದ ಸತ್ಯಾಗ್ರಹಿಗಳಿಗೆ ಊಟೋಪಾಹಾರ ಮತ್ತಿತರ ವ್ಯವಸ್ಥೆಯನ್ನು ಕಲ್ಪಿಸುವುದರ ಜತೆಗೆ ಎಲ್ಲ ಸ್ಥಳೀಯ ನೆರವು ನೀಡಿದವರು. ಹೀಗೆ ಈ ಜಿಲ್ಲೆಯ ಜನರು ನಾಡಪ್ರೇಮವನ್ನು ಸದಾ ತಮ್ಮ ಮನದಲ್ಲಿ ಕಾಪಿಟ್ಟುಕೊಂಡು ಬಂದವರು.

ಮದ್ರಾಸ್, ಮುಂಬೈ ಸೇರಿದಂತೆ ವಿವಿಧ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳು ಒಂದಾಗಿ ಅಖಂಡ ಕರ್ನಾಟಕದ ಕನಸು ನನಸಾಗಿ ಇಂದಿಗೆ ೬೮ ವರ್ಷಗಳು ಪೂರ್ಣಗೊಂಡಿದೆ. ಭಾರತಮಾತೆಯ ಮಡಿಲಿನಲ್ಲಿ ನಾವೆಲ್ಲರೂ ಇಂದು ೬೯ನೇ ಕರ್ನಾಟಕ ರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸುತ್ತಿರುವುದು ಕನ್ನಡನಾಡಿನ ಪ್ರಗತಿಗೆ ಸಾಕ್ಷಿಯಾಗಿದೆ.
ಈ ಸಂದರ್ಭದಲ್ಲಿ ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಕೈಗೊಂಡ ಕೆಲವು ಅಭಿವೃದ್ಧಿ ಕೆಲಸಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.


ಮಾನ್ಯರೇ,
ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸುವುದರ ಜತೆಗೆ ಸರ್ವಜನರ ಹಿತಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ.
ಗಡಿ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿರುತ್ತದೆ.
ಪ್ರಸಕ್ತ ವರ್ಷ ಕಿತ್ತೂರು ಉತ್ಸವದ ಜತೆಗೆ ಚನ್ನಮ್ಮನ ವಿಜಯೋತ್ಸವದ ೨೦೦ನೇ ವರ್ಷಾಚರಣೆಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸುವ ಮೂಲಕ ಸ್ವಾತಂತ್ರಂತ್ರ್ಯದ ಬೆಳ್ಳಿಚುಕ್ಕಿ ಕಿತ್ತೂರು ಚನ್ನಮ್ಮನ ಸ್ವಾಭಿಮಾನದ ಹೋರಾಟವನ್ನು ಸ್ಮರಿಸಲಾಯಿತು.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ೩೯ನೇ ಅಧಿವೇಶನವು ೧೯೨೪ರಲ್ಲಿ ಬೆಳಗಾವಿ ನಗರದಲ್ಲಿ ನಡೆದಿರುವುದು ನಮ್ಮ ನಾಡಿನ ಹಿರಿಮೆಯಾಗಿದೆ.
ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ಜರುಗಿ ನೂರು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರವು ಎರಡು ಕೋಟಿ ರೂಪಾಯಿ ಅನುದಾನವನ್ನು ಒದಗಿಸಿದೆ.


ಜಿಲ್ಲೆಯಲ್ಲಿ ಪ್ರಸ್ತುತ ಹಿಂಗಾರು ಹಂಗಾಮಿಗೆ ೩.೬೮ ಲಕ್ಷ ಹೇಕ್ಟರ್ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ. ಬಿತ್ತನೆಗೆ ಬೇಕಾಗುವ ಸುಮಾರು ೨೯,೦೦೦ ಕ್ವಿಂಟಲ್ ರಷ್ಟು ವಿವಿಧ ಬಿತ್ತನೆ ಬೀಜಗಳನ್ನು ದಾಸ್ತಾನುಕರಿಸಲಾಗಿದ್ದು, ಇಲ್ಲಿವರೆಗೆ ೧೨,೫೦೦ ಕ್ವಿಂಟಲ್ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ಬಿತ್ತನೆ ಬೀಜದ ಕೊರತೆ ಇರುವುದಿಲ್ಲ.
ಸುಮಾರು ೮೯,೧೭೧ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳನ್ನು ದಾಸ್ತಾನು ಮಾಡಲಾಗಿದ್ದು, ರೈತರ ಬೇಡಿಕೆಯಂತೆ ವಿತರಣೆ ಕೈಗೊಳ್ಳಲಾಗುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ಬಂದಂತಹ ಹೆಚ್ಚು ಮಳೆಯಿಂದ ಹಿಂಗಾರು ಬೆಳೆಗಳ ಬಿತ್ತನೆಗೆ ಸ್ವಲ್ಪ ಹಿನ್ನಡೆಯಾಗಿರುತ್ತದೆ. ಇಲ್ಲಿಯವರೆಗೆ ಸುಮಾರು ೭೫,೦೦೦ ಹೆಕ್ಟೇರ್ ಬಿತ್ತನೆ ಆಗಿರುತ್ತದೆ, ಮಳೆ ಪ್ರಮಾಣ ಕಡಿಮೆಯಾದ ನಂತರ ಹಿಂಗಾರು ಬೆಳೆಗಳ ಬಿತ್ತನೆ ಚುರುಕುಗೊಳ್ಳುತ್ತದೆ.

ಮಳೆಯಾಶ್ರಿತ ಪ್ರದೇಶದ ರೈತರು ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡು ಹೊಂಡದಲ್ಲಿ ಸಂಗ್ರಹವಾದ ನೀರನ್ನು ಬಳಸಿ ಆದಾಯವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಕೃಷಿ ಭಾಗ್ಯ ಯೋಜನೆಯನ್ನು ಕಳೆದ ಸಾಲಿನಲ್ಲಿ ಜಿಲ್ಲೆಯ ೫ ತಾಲೂಕುಗಳಿಗೆ ಜಾರಿಗೊಳಿಸಲಾಗಿತ್ತು. ಪ್ರಸಕ್ತ ಸಾಲಿನಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.


ತೋಟಗಾರಿಕೆ ಇಲಾಖೆಯಿಂದ ಬೆಳೆ ವಿಮೆ ಯೋಜನೆಯಡಿ ೨೦೨೩-೨೪ ನೇ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು ೮೦೬೭ ತೋಟಗಾರಿಕೆ ಬೆಳೆದ ರೈತರಿಗೆ ರೂ. ೮೯.೦೧ ಕೋಟಿ ಬೆಳೆ ವಿಮೆ ಪರಿಹಾರ ಮೊತ್ತವನ್ನು ಪಾವತಿಸಲಾಗಿರುತ್ತದೆ.

ಗೃಹಲಕ್ಷ್ಮೀ ಯೋಜನೆ ಯೋಜನೆಯ ಮುಖಾಂತರ ಮನೆ ಯಜಮಾನಿಗೆ ಪ್ರತಿ ತಿಂಗಳು ರೂ. ೨,೦೦೦/- ಗಳನ್ನು ನೇರವಾಗಿ ಯಜಮಾನಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.
ಗೃಹಲಕ್ಷ್ಮೀ ಯೋಜನೆಯಡಿ ಬೆಳಗಾವಿ ಜಿಲ್ಲೆಗೆ ೧೧.೮೭ ಲಕ್ಷ ಫಲಾನುಭವಿಗಳ ಗುರಿ ನಿಗದಿ ಪಡಿಸಿದ್ದು, ಇಲ್ಲಿಯವರೆಗೆ ೧೦.೭೬ ಲಕ್ಷ ಫಲಾನುಭವಿಗಳು ಈ ಯೋಜನೆಯಡಿ ನೋಂದಣಿಯಾಗಿರುತ್ತಾರೆ.
ಇಲ್ಲಿಯವರೆಗೆ ೧೧.೧೦ ಲಕ್ಷ ಫಲಾನುಭವಿಗಳಿಗೆ ೧೧ ಕಂತುಗಳಲ್ಲಿ ಒಟ್ಟು ೨೨೨ ಕೋಟಿ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗಿರುತ್ತದೆ.


ಶಕ್ತಿ ಯೋಜನೆ ಪೂರ್ವದಲ್ಲಿ ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ ೫.೪೦ ಲಕ್ಷ ಪ್ರಯಾಣಿಕರು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರು. ಶಕ್ತಿ ಯೋಜನೆ ಪ್ರಾರಂಭದ ನಂತರ ಪ್ರತಿದಿನ ಸರಾಸರಿ ಒಟ್ಟು ೭.೭೩ ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಪ್ರತಿದಿನ ಒಟ್ಟು ೨.೩೩ ಲಕ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುತ್ತದೆ.
ಶಕ್ತಿ ಯೋಜನೆ ಅಡಿಯಲ್ಲಿ ೧೧- ಜೂನ್ -೨೦೨೩ ರಿಂದ ೧೮-ಅಕ್ಟೋಬರ್ ೨೦೨೪ ವರೆಗೆ (೪೯೬ ದಿನಗಳು) ಒಟ್ಟು ೩೮.೩೨ ಕೋಟಿ ಪ್ರಯಾಣಿಕರಲ್ಲಿ, ೨೪.೨೭ ಕೋಟಿ ಮಹಿಳಾ ಪ್ರಯಾಣಿಕರು (ಶೇಕಡಾ ೬೩.೩) ಪ್ರಯಾಣಿಸಿದ್ದು, ರೂ ೫೭೦.೪೪ ಕೋಟಿ ಮೊತ್ತದ ಶೂನ್ಯ ಟಿಕೇಟ್ ವಿತರಿಸಲಾಗಿದೆ.

ಹಸಿವು ಮುಕ್ತ ಕರ್ನಾಟಕ” ಇದು ನಮ್ಮ ಸರರ್ಕಾರದ ಮುಖ್ಯ ಧೈಯವಾಗಿದ್ದು, ಇದಕ್ಕಾಗಿ ರಾಜ್ಯ ಸರರ್ಕಾರವು ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ ಗ್ಯಾರಂಟಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ.
ಜುಲೈ-೨೦೨೩ರ ಮಾಹೆಯಿಂದ ಐದು ಕೆ.ಜಿ ಅಕ್ಕಿಯ ಜೊತೆಗೆ ಇನ್ನುಳಿದ ಐದು ಕೆ.ಜಿಯ ಅಕ್ಕಿ ಮೊತ್ತಕ್ಕೆ ಸಮನಾಗಿ ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥೆಯ ಬ್ಯಾಂಕ್ ಖಾತೆಗೆ ನೇರವಾಗಿ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ರೂ.೧೭೦ ರಂತೆ ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಮೂಲಕ ಹಣ ಜಮೆ ಮಾಡಲಾಗಿರುತ್ತದೆ. ಜುಲೈ ೨೦೨೩ರಿಂದ ಜುಲೈ ೨೦೨೪ರ ವರೆಗೆ ೭೨೯ ಕೋಟಿ ಮೊತ್ತವನ್ನು ಜಿಲ್ಲೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.

ಅನ್ನಭಾಗ್ಯ ಯೋಜನೆಯಡಿ ಒಟ್ಟು ೩೭.೫೭ ಲಕ್ಷ ಫಲಾನುಭವಿಗಳು ಪ್ರತಿ ಮಾಹೆ ಉಚಿತವಾಗಿ ಇದರ ಸದುಪಯೋಗ ಪಡೆಯುತ್ತಿದ್ದಾರೆ. ಈ ಯೋಜನೆಗೆ ಪ್ರತಿ ಮಾಹೆ ೨೦ ಸಾವಿರ ಮೆಟ್ರಿಕ್ ಟನ್ ಅಕ್ಕಿ ಹಾಗೂ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ಜಮೆ ಮಾಡಲು ೬೦ ಕೋಟಿ ಅನುದಾನ ಸರರ್ಕಾರದಿಂದ ವೆಚ್ಚ ಮಾಡಲಾಗುತ್ತಿದೆ.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ೧೫,೯೬೪ ಅರ್ಜಿಗಳನ್ನು ಪರಿಗಣಿಸಲಾಗಿರುತ್ತದೆ. ಈ ಪೈಕಿ ೨೨,೦೮೪ ಪುರುಷರು ಹಾಗೂ ೧೫,೭೦೭ ಮಹಿಳೆಯರು ಸೇರಿದಂತೆ ಒಟ್ಟಾರೆ ೩೭,೭೯೧ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿರುತ್ತದೆ. ಉಳಿದ ಅರ್ಜಿದಾರರ ದಾಖಲೆಗಳ ಪರಿಶೀಲನೆ ನಡೆದಿರುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನಿಯರಿಂಗ್ ವಿಭಾಗದಿಂದ ಜಿಲ್ಲೆಯಲ್ಲಿ ಬೆಳಗಾವಿ ನಗರದ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಸೇರಿ ೨೦ ಸರ್ಕಾರಿ ಆರೋಗ್ಯ ಸಂಸ್ಥೆಗಳ ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಒಟ್ಟಾರೆ ೩೭೪ ಕೋಟಿ ೪೪ ಲಕ್ಷ ೮೩ ಸಾವಿರ ರೂಗಳ ಅಂದಾಜು ವೆಚ್ಚದಲ್ಲಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೆಲವು ಪ್ರಗತಿಯಲ್ಲಿವೆ.
ಅಥಣಿಯ ೫೦ ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ಮತ್ತು ಖಾನಾಪುರ ಪಟ್ಟಣದ ೧೦೦ ಹಾಸಿಗೆಯ ಸಾರ್ವಜನಿಕ ಆಸ್ಪತ್ರೆ ನಿರ್ಮಾಣದ ೫೦.೪೦ ಕೋಟಿ ರೂಪಾಯಿ ಮೊತ್ತದ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಕಿಮೋಥೆರಪಿ ಮತ್ತು ರೆಡಿಯೋ ಥೆರಪಿ ಚಿಕಿತ್ಸೆಯನ್ನು ಆರಂಭಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ೩೬ ನಮ್ಮ ಕ್ಲಿನಿಕ್ಗಳು ಕಾರ್ಯನಿರ್ವಹಿಸುತ್ತಿವೆ.
ಲೋಕೋಪಯೋಗಿ ಇಲಾಖೆಯ ವತಿಯಿಂದ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಗಳು-ಸುಧಾರಣೆಗಾಗಿ ಬೆಳಗಾವಿ ವಿಭಾಗದಡಿ ೨೦೨೩-೨೪ನೇ ಸಾಲಿನಲ್ಲಿ ಒಟ್ಟು ೧೪ ಕಾಮಗಾರಿಗಳನ್ನು ಅಂದಾಜು ಮೊತ್ತ ರೂ. ೫೪೩೫ ಲಕ್ಷಗಳಡಿ ಕೈಗೊಳ್ಳಲಾಗುತ್ತಿದ್ದು, ಅವುಗಳಲ್ಲಿ ೧೦ ಕಾಮಗಾರಿಗಳು ಪ್ರಗತಿಯಲ್ಲಿವೆ.

ಅದರಂತೆ ಚಿಕ್ಕೋಡಿ ವಿಭಾಗದಡಿ ೨೦೨೩-೨೪ನೇ ಸಾಲಿನಲ್ಲಿ ಒಟ್ಟು ೬ ಕಾಮಗಾರಿಗಳನ್ನು ಅಂದಾಜು ಮೊತ್ತ ರೂ. ೧೭೫೦ ಲಕ್ಷಗಳಡಿ ಕೈಗೊಳ್ಳಲಾಗುತ್ತಿದ್ದು, ಅವುಗಳಲ್ಲಿ ೩ ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿವೆ.

ರಾಜ್ಯಹೆದ್ದಾರಿ ಯೋಜನೆಯಲ್ಲಿ ಬೆಳಗಾವಿ ವಿಭಾಗದಡಿ ೨೦೨೩-೨೪ನೇ ಸಾಲಿನಲ್ಲಿ ಒಟ್ಟು ೧ ಕಾಮಗಾರಿಯ ಅಂದಾಜು ಮೊತ್ತ ರೂ. ೩೫೦೦ ಲಕ್ಷಗಳಡಿ ಕೈಗೊಳ್ಳಲಾಗುತ್ತಿದೆ. ಚಿಕ್ಕೋಡಿ ವಿಭಾಗದಡಿ ಒಟ್ಟು ೨ ಕಾಮಗಾರಿಗಳನ್ನು ಅಂದಾಜು ಮೊತ್ತ ರೂ. ೯೪೫ ಲಕ್ಷಗಳಡಿ ಕೈಗೊಳ್ಳಲಾಗುತ್ತಿದ್ದು, ಎರಡೂ ಕಾಮಗಾರಿಗಳು ಪ್ರಗತಿಯಲ್ಲಿವೆ.
ಲೋಕೋಪಯೋಗಿ ಇಲಾಖೆಯ ಕಟ್ಟಡಗಳು ಶೀರ್ಷಿಕೆಯಲ್ಲಿ ಬೆಳಗಾವಿ ವಿಭಾಗದಡಿ ೨೦೨೩-೨೪ನೇ ಸಾಲಿನಲ್ಲಿ ಒಟ್ಟು ೨೮ ಕಾಮಗಾರಿಗಳನ್ನು ಅಂದಾಜು ಮೊತ್ತ ರೂ. ೧೩೭೬೩ ಲಕ್ಷಗಳಡಿ ಕೈಗೊಳ್ಳಲಾಗುತ್ತಿದ್ದು, ೨ ಕಾಮಗಾರಿಗಳು ಪೂರ್ಣಗೊಂಡಿದ್ದು, ೧೯ ಕಾಮಗಾರಿಗಳು ಪ್ರಗತಿಯಲ್ಲಿವೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಬದ್ದವಾಗಿದ್ದು, ಜಿಲ್ಲೆಯ ಸರ್ಕಾರಿ ವಿಜ್ಞಾನ ವಿದ್ಯಾಲಯಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಶಕ್ತಗೊಳಿಸಲು ಜಿಲ್ಲಾ ಪಂಚಾಯತಿಯು ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಪ್ರಸ್ತುತ ಸಾಲಿನಲ್ಲಿ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಸಿಇಟಿ-ಸಕ್ಷಮ್ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ.

ಬೆಳಗಾವಿ ಜಿಲ್ಲೆಯ ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ೨೫ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು, ಒಟ್ಟು ೨೬೨ ಜನವಸತಿಗಳಿಗೆ ನದಿ ಜಲಮೂಲದಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ.

ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಹೊಸದಾಗಿ ೪ ಬಹುಗ್ರಾಮ ಯೋಜನೆಗಳನ್ನು ಯೋಜಿಸಲಾಗಿದ್ದು. ಒಟ್ಟಾರೆ ನಾಲ್ಕು ಬಹುಗ್ರಾಮ ಯೋಜನೆಗಳ ಅನುಷ್ಠಾನಕ್ಕೆ ರೂ. ೧,೪೪೪ ಕೋಟಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ.

ಚಿಕ್ಕೋಡಿ ವಿಭಾಗಕ್ಕೆ ಸಂಬಂಧಿಸಿದಂತೆ ೨೦೧ ಗ್ರಾಮಗಳಿಗೆ ೯ ಹೊಸ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಪ್ರಸ್ತಾಪಿಸಿ, ರೂ.೧೨೮೫ ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ಪಡೆದು ಟೆಂಡರ್ ಆಧಾರದ ಮೇಲೆ ಕಾರ್ಯಾದೇಶ ನೀಡಲಾಗಿದೆ.
ಸನ್ ೨೦೨೪-೨೫ನೇ ಸಾಲಿನಲ್ಲಿ ಮಹಾತ್ಮಾ ಗಾಂದಿs ಳ್ತ್ಮ್ಖೀ ಗಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಇಲ್ಲಿಯವರೆಗೆ ೭.೯೦ ಲಕ್ಷ ಕುಟುಂಬಗಳು ನೋಂದಣಿಯಾಗಿದ್ದು, ೭.೯೦ ಲಕ್ಷ ಉದ್ಯೋಗ ಚೀಟಿಗಳನ್ನು ವಿತರಿಸಲಾಗಿರುತ್ತದೆ. ಭೌತಿಕ ಗುರಿ ೧೩೦ ಲಕ್ಷಗಳ ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದೆ. ಅದರ ಪೈಕಿ ೬೯.೯೪ ಲಕ್ಷಗಳಷ್ಟು ಮಾನವ ದಿನಗಳನ್ನು ಸೃಜಿಸಿ ಶೇ. ೫೩.೮೦ ರಷ್ಟು ಪ್ರಗತಿ ಸಾಧಿಸಲಾಗಿದೆ. ಅದರಂತೆ ೨.೧೪ ಲಕ್ಷ ಕುಟುಂಬಗಳಿಗೆ ಹಾಗೂ ೩.೧೨ ಲಕ್ಷ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗಿರುತ್ತದೆ.

ನೀರಾವರಿ (ಉತ್ತರ) ವಲಯ ವ್ಯಾಪ್ತಿಯಡಿಯಲ್ಲಿ ಪ್ರಮುಖವಾಗಿ ಘಟಪ್ರಭಾ, ಮಾರ್ಕಂಡೇಯ, ಬಳ್ಳಾರಿ ನಾಲಾ, ಕಿಣಿಯೆ ಯೋಜನೆ, ಧೂದಗಂಗಾ ಹಾಗೂ ಹಿಪ್ಪರಗಿ ಯೋಜನೆಗಳು (ಒಟ್ಟು ೬ ಹರಿ ನೀರು ಯೋಜನೆಗಳು) ಪ್ರಮುಖ ವಾಗಿರುತ್ತವೆ.
ಇವುಗಳ ಪೈಕಿ ಘಟಪ್ರಭಾ, ಮಾರ್ಕಂಡೇಯ ಹಾಗೂ ಹಿಪ್ಪರಗಿ ಯೋಜನೆಗಳು ಪೂರ್ಣಗೊಂಡಿರುತ್ತವೆ. ಕಿಣಿಯೆ ಹಾಗೂ ದೂಧಗಂಗಾ ಯೋಜನೆಗಳು ಪ್ರಗತಿಯಲ್ಲಿವೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ ತುಬಚಿ-ಬಬಲೇಶ್ವರ, ಬಸವೇಶ್ವರ (ಕೆಂಪವಾಡ), ವೆಂಕಟೇಶ್ವರ, ಗೊಡಚಿನಮಲ್ಕಿ, ಚಚಡಿ, ಮುರಗೋಡ ಸೇರಿ ಒಟ್ಟು ೧೧ ಏತ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿರುತ್ತವೆ.

ಈ ೧೧ ನೀರಾವರಿ ಯೋಜನೆಗಳಿಂದ ಬೆಳಗಾವಿ ಜಿಲ್ಲೆಯ ೬ ತಾಲೂಕುಗಳ ೬೦,೮೩೫ ಹೆಕ್ಟೇರ್, ಬಾಗಲಕೋಟೆ ಜಿಲ್ಲೆಯ ಮೂರು ತಾಲೂಕುಗಳ ೧೩,೮೬೯ ಹೆಕ್ಟೇರ್ ಹಾಗೂ ಬಿಜಾಪೂರ ಜಿಲ್ಲೆಯ ೪೪,೩೭೫ ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ. ಈ ನೀರಾವರಿ ಯೋಜನೆಗಳಿಗೆ ಈವರೆಗೆ ೫,೩೫೪ ಕೋಟಿ ರೂಪಾಯಿ ಖರ್ಚು ಮಾಡಲಾಗಿರುತ್ತದೆ.

ನಗರೋತ್ಥಾನ(ಮುನ್ಸಿಪಾಲಿಟಿ) ಹಂತ-೪ ಯೋಜನೆಯಡಿ ಬೆಳಗಾವಿ ಜಿಲ್ಲೆಯ ೩೭ ನಗರ ಸ್ಥಳೀಯ ಸಂಸ್ಥೆಗಳಿಗೆ ೩೧೫ ಕೋಟಿ ರೂಪಾಯಿ ಹಂಚಿಕೆಯಾಗಿದ್ದು, ಶೇ.೮೫ರಷ್ಟು ಮೊತ್ತಕ್ಕೆ ಕ್ರಿಯಾ ಯೋಜನೆ ತಯಾರಿಸಲಾಗಿರುತ್ತದೆ.
೨೬೭ ಕೋಟಿ ಮೊತ್ತದ ೧೦೪೯ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುತ್ತದೆ. ಇಂದಿರಾ ಕ್ಯಾಂಟೀನ್-೨ ರಡಿ ಜಿಲ್ಲೆಯ ೩೧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಡುಗೆ ಕೋಣೆ ಸಹಿತ ಕ್ಯಾಂಟೀನ್‌ಗಳು ಮಂಜೂರಾಗಿವೆ.

ಸ್ಮಾರ್ಟಸಿಟಿ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ೫೦:೫೦ ಅನುಪಾತದಲ್ಲಿ ಒಟ್ಟು ರೂ.೧೦೦೦ ಕೋಟಿ ಅನುದಾನ ಒದಗಿಸಿರುತ್ತವೆ.
ಈವರೆಗೆ ಒಟ್ಟು ರೂ.೯೩೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ೮೬೭.೭೨ ಕೋಟಿ ಖರ್ಚು ಮಾಡಲಾಗಿದೆ. ಒಟ್ಟು ೧೦೭ ಕಾಮಗಾರಿಗಳಲ್ಲಿ ೯೭ ಕಾಮಗಾರಿಗಳು ಪೂರ್ಣಗೊಂಡಿದ್ದು, ೧೦ ಕಾಮಗಾರಿಗಳು ಪ್ರಗತಿಯಲ್ಲಿವೆ.
ಪ್ರಸ್ತುತ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ಮಾರ್ಚ-೨೦೨೫ ರ ಅಂತ್ಯದೊಳಗಾಗಿ ಮುಕ್ತಾಯಗೊಳಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ.

  • ಮಹನೀಯರೇ,
    ಅಖಂಡ ಕರ್ನಾಟಕದ ನಿರ್ಮಾಣದ ಕನಸು ನನಸು ಮಾಡಲು ಶ್ರಮಿಸಿದ ನಮ್ಮ ಹಿರಿಯರ ಆಶಯದಂತೆ ಸಮಗ್ರ ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ಕಟ್ಟಲು ಎಲ್ಲರೂ ಕೈ ಜೋಡಿಸೋಣ. ಕನ್ನಡ ನಾಡು-ನುಡಿ; ನೆಲ-ಜಲ ಸಂರಕ್ಷಣೆಗೆ ಸರಕಾರ ಸದಾ ಬದ್ಧವಾಗಿರುತ್ತದೆ.
    ನಾವೆಲ್ಲರೂ ಒಂದಾಗಿ ಕನ್ನಡದ ತೇರನ್ನು ಮುನ್ನಡೆಸೋಣ; ಕರ್ನಾಟಕವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸೋಣ ಎಂದು ಆಶಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button