ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ – ತನ್ನಲ್ಲಿ ಇರುವ ಸಾಮರ್ಥ್ಯ, ಕಲೆ ಮತ್ತು ಕೌಶಲವನ್ನು ಸಮರ್ಪಕವಾಗಿ ಸದ್ಬಳಕೆ ಮಾಡುವ ಮೂಲಕ ವಿದ್ಯಾರ್ಥಿಗಳು ಎಂಥಹುದೇ ಸ್ಪರ್ಧೆಯನ್ನು ಎದುರಿಸಿ ಯಶಸ್ವೀ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬಹುದಾಗಿದೆ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಕಿರಣಕುಮಾರ ಬನ್ನಿಗೋಳ ಅಭಿಪ್ರಾಯಪಟ್ಟರು.
ಕೆ.ಎಲ್.ಇ. ಸಂಸ್ಥೆಯ ಸ್ಥಳೀಯ ಜಿ.ಆಯ್.ಬಾಗೇವಾಡಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಪ್ರೇರಿತ, ಸ್ನಾತಕೋತ್ತರ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ, ನೆಟ್, ಸ್ಲೆಟ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಯ ವಿಧಾನಗಳು ಎಂಬ ವಿಷಯದ ಕುರಿತು ಜರುಗಿದ ರಾಷ್ಟ್ರಮಟ್ಟದ ಒಂದು ದಿನದ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ವಾಲ್ಮಿಕಿ ಜಯಂತಿ ನಿಮಿತ್ತ ಮಹರ್ಷಿ ವಾಲ್ಮಿಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮೂಲಕ ಅರ್ಚನೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಸಿ.ವಿ.ಕೊಪ್ಪದ ಮಾತನಾಡಿ ಕಾಡಿನ ಬೇಡನೊಬ್ಬ ಮಹಾನ್ ಕವಿಯಾಗಿ, ಮಹಾತಪಸ್ವಿಯಾಗಿ ಪರಿವರ್ತಿತ ಹೊಂದಿದ ವಾಲ್ಮಕಿ ಅವರು ತಮಗೆಲ್ಲ ಆದರ್ಶವಾಗಲಿ. ಈ ಕಾರ್ಯಾಗಾರದ ಲಾಭ ಪಡೆದು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಾಗಾರವು ಎರಡು ಹಂತಗಳಲ್ಲಿ ನಡೆದು ಪ್ರಥಮಾರ್ಧದಲ್ಲಿ ಡಾ. ಕಿರಣಕುಮಾರ ಬನ್ನಿಗೋಳ ಅವರು ಕಲಿಕಾ ಮತ್ತು ಸಂಶೋಧನಾ ವಿಧಾನಗಳು, ವ್ಯವಹಾರ ನಿರ್ವಹಣೆ ಮತ್ತು ಹಣಕಾಸು ನಿರ್ವಹಣೆಗಳ ಕುರಿತು ಪ್ರಾತ್ಯಕ್ಷಿಕೆಗಳ ಮೂಲಕವಲ್ಲದೆ ಸೋದಾಹರಣವಾಗಿ ಮಾಹಿತಿ ನೀಡಿದರು.
ಉತ್ತರಾರ್ಧದಲ್ಲಿ ಜಮಖಂಡಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಸಂಯೋಜಕ ಮಲ್ಲಿಕಾರ್ಜುನ ಮರಡಿ ಅವರು ಆದಾಯ ತೆರಿಗೆ, ಸಾಮಾನ್ಯ ನಿರ್ವಹಣೆ, ಲೆಕ್ಕ ಪರಿಶೋಧನೆ, ಬ್ಯಾಂಕಿಂಗ ಮತ್ತು ಇತರ ಹಣಕಾಸು ಸಂಸ್ಥೆಗಳ ವ್ಯವಹಾರಗಳ ನೀತಿ ಕುರಿತಂತೆ ಸಮಗ್ರ ವಿವರಣೆ ಹಾಗೂ ಪ್ರಾತ್ಯಕ್ಷಿಕೆಯ ಮೂಲಕ ವಿಶ್ಲೇಷಿಸಿದರು. ಕಾರ್ಯಾಗಾರದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ವಿವಿಧ ಮಹಾವಿದ್ಯಾಲಯಗಳ ಸುಮಾರು ೧೫೦ ಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರುಗಳು ಭಾಗವಹಿಸಿದ್ದರು.
ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ವಿಜಯ ದಾರವಾಡ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ಪ್ರೊ. ಸುಪರ್ಣಾ ದೇಶಪಾಂಡೆ ವಹಿಸಿದ್ದರು. ರಾಹುಲ ವಂಜಿರೆ ಪ್ರಾರ್ಥಿಸಿದರು. ಸಮರಿನ್ ತಹಶಿಲ್ದಾರ ಸ್ವಾಗತಿಸಿದರು. ರಘುನಾಥ ಪಾಟೀಲ ಮತ್ತು ರಚನಾ ವ್ಹಿ. ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾಶ್ರೀ ಮಾರೆಣ್ಣವರ ಮತ್ತು ಶೃತಿ ಅಮ್ಮಣ್ಣವರ ಕಾರ್ಯಕ್ರಮ ನಿರೂಪಿಸಿದರು. ದಾನಮ್ಮ ಶೇಡಬಾಳೆ ವಂದಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಬಿ.ಎಂ. ಹಿರೇಮಠ ವೇದಿಕೆಯಲ್ಲಿದ್ದರು. ಕೆ.ಎಲ್. ಇ. ಸಂಸ್ಥೆಯ ಅಂಕಲಿ ಮಹಾವಿದ್ಯಾಲಯದ ಪ್ರೊ. ಸುಪ್ರಿಯಾ ಅರಬೋಳೆ ಮತ್ತು ಮಹಾಲಿಂಗಪೂರದ ಮನಿಷ ನಿಪನಾಳ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ