Karnataka NewsPolitics

*71 ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ: ರೈತರ ಆರ್ಥಿಕ ಸಂಕಷ್ಟ ಪರಿಹಾರಕ್ಕೆ ಸಹಕಾರ ಕ್ಷೇತ್ರ ನೆರವಾಗಿದೆ: ಕೆ.ಎನ್ ರಾಜಣ್ಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಸಹಕಾರಿ ಆಂದೋಲನ ಸಾರ್ವಜನಿಕರ ಆಂದೋಲನವಾಗಿದೆ. ಕೃಷಿ ಪತ್ತಿನ ಸಹಕಾರಿ ಸಂಘಗಳು ಗ್ರಾಮೀಣ ಭಾಗದ ರೈತರ ಸಂಕಷ್ಟ ಕಾಲದಲ್ಲಿ ಕೈ ಹಿಡಿದಿವೆ. ಪತ್ತಿನ ಸಹಕಾರಿ ವ್ಯವಸ್ಥೆ ಇಲ್ಲದೆ ಹೋದರೆ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗುತ್ತಿದ್ದರು. ರೈತರಿಗೆ ಆರ್ಥಿಕ ಊರುಗೋಲಾಗಿ ಸಹಕಾರಿ ಕ್ಷೇತ್ರ ಕಾರ್ಯ ನಿರ್ವಹಿಸುತ್ತಿದೆ”  ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು ಹಾಗೂ ಇತರೆ ಸಹಯೋಗದಲ್ಲಿ ನೆಹರು ನಗರದ ಜೆ.ಎನ್.ಎಂ.ಸಿ ಆವರಣದಲ್ಲಿರುವ ಡಾ. ಬಿ.ಎಸ್ ಜೀರಗೆ ಸಭಾಂಗಣದಲ್ಲಿ ಬುಧವಾರ (ನ.20) ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ -2024ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 

ಸಹಕಾರ ಸಂಘಗಳು ಸಾಲ ನೀಡದೆ ಹೋದರೆ ರಾಜ್ಯದ ಸಕ್ಕರೆ ಕಾರ್ಖಾನೆಗಳು ಆರ್ಥಿಕವಾಗಿ ಹಿಂದುಳಿಯುತಿದ್ದವು. ರಾಜ್ಯದ ಕಾರ್ಖಾನೆಗಳಿಗೆ ಬೆಂಬಲವಾಗಿ ನಿಂತಿದೆ. ಈಗಾಗಲೇ ರಾಜ್ಯದಲ್ಲಿ ಸಹಕಾರ ಕ್ಷೇತ್ರ ಪ್ರಗತಿಯತ್ತ ಸಾಗುತ್ತಿದ್ದು, ಇನ್ನಷ್ಟು ಅಭಿವೃದ್ಧಿಪಡಿಸುವ ಜವಾಬ್ದಾರಿ ನಮ್ಮಮೇಲಿದೆ. ಹಾಗಾಗಿ ಪ್ರಾಮಾಣಿಕವಾಗಿ ಜನಪರ ಸಹಕಾರ ಕ್ಷೇತ್ರವಾಗಿ ದೇಶದಲ್ಲೇ ಆರ್ಥಿಕವಾಗಿ ಮುಂಚೂಣಿಗೆ ಬರಲಿದೆ ಎಂದು ಹೇಳಿದರು.

ರೈತರ ಉತ್ಪಾದಿತ ವಸ್ತುಗಳಿಗೆ ಬೆಲೆ ನಿಗದಿಯಾಗಬೇಕು ಇದರಿಂದ ರೈತರ ಆರ್ಥಿಕತೆಗೆ ಶಕ್ತಿ ಬರಲಿದೆ. ರೈತರಿಗೆ ವಿವಿಧ ಸೌಲಭ್ಯಗಳನ್ನು ಸರಳವಾಗಿ ಒದಗಿಸುವ ನಿಟ್ಟಿನಲ್ಲಿ ಸಹಕಾರ ಕ್ಷೇತ್ರ ಮುನ್ನಡೆಯುತ್ತಿದೆ. “ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ” ಎಂಬ ಧ್ಯೇಯವಾಕ್ಯದೊಂದಿಗೆ ಸಹಕಾರ ಕ್ಷೇತ್ರ ಬಂದಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು. 

ಬೆಳಗಾವಿ ಸಹಕಾರ ರಂಗದ ತವರು ಜಿಲ್ಲೆಯಾಗಿದೆ. ಅತೀ ಹೆಚ್ಚು ಸಹಕಾರ ಸಂಘಗಳನ್ನು ಬೆಳಗಾವಿ ಜಿಲ್ಲೆ ಹೊಂದಿದೆ.

ರೈತರಿಗೆ, ಪರಿಶಿಷ್ಟ ಜಾತಿ, ಪಂಗಡದ ವರ್ಗದವರಿಗೆ ವಿವಿಧ ಯೋಜನೆಗಳನ್ನು ಸಹಕಾರಿ ಸಂಘಗಳು ತಲುಪಿಸುತ್ತಿವೆ.

ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಹೇಳಿದರು.

ಸಹಕಾರ ಚಳುವಳಿ ಗದಗ ಜಿಲ್ಲೆಯಿಂದ ಪ್ರಾರಂಭವಾಗಿ ಪ್ರಸ್ತುತ ದಿನಮಾನಗಳಲ್ಲಿ ಸಹಕಾರ ರಂಗ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಹುಕ್ಕೇರಿಯಲ್ಲಿ ಸಹಕಾರಿ ಶಾಲೆ ದೇಶದಲ್ಲೇ ಮಾದರಿಯಾಗಿದೆ. 

ಸಹಕಾರ ರಂಗದಲ್ಲಿ ಸದಸ್ಯರ ಆಯ್ಕೆಯ ಮಾನದಂಡ ಬದಲಾಗಬೇಕಿದೆ. ಇನ್ನಷ್ಟು ಸುಲಭ ಮಾರ್ಗದಲ್ಲಿ ಸಹಕಾರ ಸಂಘಗಳ ಸದಸ್ಯರ ಆಯ್ಕೆ ನಿಯಮಗಳನ್ನು ರೂಪಿಸಬೇಕು. ಜಮೀನು ಪಹಣಿ ಹೊಂದಿದ ರೈತರಿಗೆ ಸದಸ್ಯತ್ವ ದೊರೆಯುವ ನಿಟ್ಟಿನಲ್ಲಿ ಡಿಜಿಟಲ್ ಮೂಲಕ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಸಬೇಕು ಎಂದು ಸಚಿವ ಜಾರಕಿಹೊಳಿ ಹೇಳಿದರು.

ರೈತರಿಗೆ ಸುಲಭವಾಗಿ ಹೆಚ್ಚು ಸಾಲ ಸೌಲಭ್ಯ ನೀಡಲು ಸರಳೀಕರಣ ಮಾದರಿಯನ್ನು ಅನುಸರಿಸಬೇಕು. ಈ ಪ್ರಕ್ರಿಯೆಯನ್ನು ಎಲ್ಲಾ ಸಹಕಾರಿ ಸಂಘಗಳು ನಿಯಮಾನುಸಾರ ಕಾನೂನು ಚೌಕಟ್ಟಿನಲ್ಲಿ ಜಾರಿಗೆ ತರಬೇಕು ಎಂದರು.

ಜಿಲ್ಲೆಯ ಎಲ್ಲಾ ರೈತರಿಗೆ ವಿವಿಧ ಸಹಕಾರಿ ಬ್ಯಾಂಕಗಳಿಂದ ರೈತರಿಗೆ ಸೌಲಭ್ಯಗಳನ್ನು ಒದಗಿಸುವ ಚಿಂತನೆಗಳನ್ನು ಬೆಳಸಿಕೊಳ್ಳಬೇಕು. ರೈತರು ಸ್ವಾಭಿಮಾನದ ಬದುಕ ಕಟ್ಟಿಕೊಳ್ಳಲು ಸಹಕಾರ ಸಂಘಗಳ ಸದಾ ಬೆಂಬಲವಾಗಿ ನಿಂತಿವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. 

ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ  ಡಾ. ಪ್ರಭಾಕರ ಕೋರೆ ಮಾತನಾಡಿ, ಉತ್ತರ ಕರ್ನಾಟಕದ ಭಾಗದ ಜನರು ಸಹಕಾರ ಸಂಘದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ತಾರತಮ್ಯ ಇಲ್ಲದೇ ನಿಷ್ಠಾವಂತ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರಿ ಚಳುವಳಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಿದೆ ಎಂದರು. 

ಸಹಕಾರಿ ಸಂಘಗಳಿಂದ ದೇಶದ ಆರ್ಥಿಕತೆಗೆ ಬಹಳಷ್ಟು ಬಲ ಬಂದಿದೆ. ರಾಜ್ಯದಲ್ಲಿ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಅದೇ ರೀತಿಯಲ್ಲಿ ಜಿಲ್ಲೆಯಲ್ಲಿ ಮಹಾ ವಿದ್ಯಾಲಯವಾಗಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಸಹಕಾರ ಕ್ಷೇತ್ರವಿಲ್ಲದೆ ರಾಜ್ಯ, ದೇಶ ರೈತರ ಪ್ರಗತಿ ಸಾಧ್ಯವಿಲ್ಲ. ಗದಗ ಜಿಲ್ಲೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ರೈತರಿಗೆ ಅನುಕೂಲವಾಗಲು ಸಹಕಾರ ಕ್ಷೇತ್ರ ಪ್ರಾರಂಭವಾಯಿತು. ಸಾಲದ ನೆರವು ನೀಡದೆ ಹೋದರೆ ರೈತಾಪಿ ವರ್ಗಕ್ಕೆ ಆರ್ಥಿಕ ಕಷ್ಟವಾಗುತ್ತಿತ್ತು. ಜವಾಹರ್ ಲಾಲ್ ನೆಹರೂ ಅವರ ಜನ್ಮ ದಿನದ ನಿಮಿತ್ಯ ನವಂಬರ್ 14 ರಿಂದ 7 ದಿನಗಳ ಕಾಲ ಸಹಕಾರ ಸಪ್ತಾಹ ಏರ್ಪಡಿಸಲಾಗುವುದು ಎಂದು ಹೇಳಿದರು.

ಹಾಲು ಮಾರಾಟ, ನೇಕಾರ, ರೈತರು, ಸೌಹಾರ್ದ, ಮಹಿಳಾ ಸೊಸೈಟಿ ಸೇರಿದಂತೆ ಎಲ್ಲ ವರ್ಗದಲ್ಲಿ ಸಹಕಾರ ಕ್ಷೇತ್ರ ಬೆಳೆದು ನಿಂತಿದೆ. ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅದೇ ರೀತಿಯಲ್ಲಿ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಿಬೇಕು. ಸಹಕಾರ ಸಂಘಗಳು ಜನರ ವಿಶ್ವಾಸ ಉಳಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಸಹಕಾರ ಕ್ಷೇತ್ರದ ಬೆಳವಣಿಗೆಗೆ ವರದಿಯನ್ನು ಸಹಕಾರ ಸಪ್ತಾಹ ಮೂಲಕ ಆಚರಣೆ ಮಾಡಲಾಗುವುದು. ಬೆಳಗಾವಿ ಜಿಲ್ಲೆ ಕಬ್ಬು ಬೆಳೆಯುವಲ್ಲಿ ಮುಂಚೂಣಿಯಲ್ಲಿದೆ. ಬಾಗಲಕೋಟೆ, ಬಿಜಾಪುರ, ತುಮಕೂರು ಸೇರಿದಂತೆ ರಾಜ್ಯದಲ್ಲೇ ಸಹಕಾರ ಕ್ಷೇತ್ರ ಬೆಳೆದು ಹೆಮ್ಮರವಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 8 ರಿಂದ 9 ಸಾವಿರ ಕೋಟಿ ಜಿ.ಎಸ್.ಟಿ ಸಂದಾಯ ಮಾಡಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರದ ಹೊಸ ಯೋಜನೆಯಾದ ಕಬ್ಬಿನಿಂದ ಎಥನಾಲ್ ಉತ್ಪಾದನೆ ಪ್ರಾಜೆಕ್ಟ್ ಗೆ ಸಹಕಾರ ಕ್ಷೇತ್ರ ಪ್ರಮುಖ ಪಾತ್ರ ವಹಿಸಲಿದೆ. ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆಗೆ ಸಹಕಾರ ಕ್ಷೇತ್ರ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಶಾಸಕ ಸವದಿ ಹೇಳಿದರು.

ವಿಶೇಷ ಸಂಚಿಕೆ ಬಿಡುಗಡೆ

ಇದಕ್ಕೂ ಮುಂಚೆ ಸಹಕಾರ ಸಚಿವ ಕೆ.ಎನ್ ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸಪ್ತಾಹದ ಸಹಕಾರ ಕ್ಷೇತ್ರದ ಚಿಂತನ ಮಂತನ, ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು.

ರಾಮದುರ್ಗ ವಿಧಾನಸಭಾ ಶಾಸಕರು ಹಾಗೂ ಸರ್ಕಾರದ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ, ರಾಯಬಾಗ ವಿಧಾನಸಭಾ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಜಗದೀಶ ಕವಟಗಿಮಠ,  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ಡಿಸಿಸಿ ಬ್ಯಾಂಕ್, ಜಿಲ್ಲಾ ಹಾಲು ಒಕ್ಕೂಟ, ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕರು, ಸದಸ್ಯರು, ಸಹಕಾರ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button