*ವಿದಾಯಕ ಕಾರ್ಯಕ್ರಮಗಳ ಮೂಲಕ ಜೊಲ್ಲೆ ಗ್ರುಪ್ ಮನೆ ಮಾತು*
ಪ್ರಗತಿವಾಹಿನಿ ಸುದ್ದಿ, ಯಕ್ಸಂಬಾ: ಜೊಲ್ಲೆ ದಂಪತಿ ಗ್ರಾಮೀಣ ಮಟ್ಟದಲ್ಲಿ ಸಹಕಾರ ಕ್ಷೇತ್ರವನ್ನು ಹುಟ್ಟು ಹಾಕಿ ರಾಜ್ಯದ ರಾಜಧಾನಿ ಸೇರಿದಂತೆ ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ತಮ್ಮ ಶಾಖೆಗಳನ್ನು ಪ್ರಾರಂಭಿಸಿದ್ದಾರೆ. ಜೊಲ್ಲೆ ಅವರು ಕೇವಲ ಸಹಕಾರ ಕ್ಷೇತ್ರಕ್ಕೆ ಸೀಮಿತವಾಗದೆ ಜೊಲ್ಲೆ ಗ್ರುಪ್ ವತಿಯಿಂದ ಅನೇಕ ವಿದಾಯಕ ಕಾರ್ಯಗಳನ್ನು ಮಾಡಿ ಮನೆಮಾತಾಗಿದ್ದಾರೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಅವರು ರವಿವಾರ ಯಕ್ಸಂಬಾ ಪಟ್ಟಣದ ಬೀರೇಶ್ವರ ಸಭಾ ಭವಣದಲ್ಲಿ ಮಾಜಿ ಸಚಿವೆ ಹಾಗೂ ನಿಪ್ಪಾಣಿ ವಿಧಾನಸಭೆ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆಯವರ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಜೊಲ್ಲೆ ದಂಪತಿಗಳು ಸಹಕಾರ ಕ್ಷೇತ್ರದ ಜೊತೆಗೆ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ಸೈ ಎನಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಅಭಿನಂದನೆ ಸ್ವೀಕರಿಸಿದ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, 34 ವರ್ಷಗಳ ಹಿಂದೆ ಯಕ್ಸಂಬಾದಲ್ಲಿ ಬೀರೇಶ್ವರ ಎಂಬ ಸಣ್ಣ ಸಹಕಾರಿ ಸಂಸ್ಥೆಯನ್ನು ಹುಟ್ಟು ಹಾಕಿ ಇಂದು ಅದು ಕರ್ನಾಟಕ. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ 221 ಶಾಖೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಗುರುಗಳ ಮತ್ತು ಸಾರ್ವಜನಿಕರ ಆರ್ಶಿವಾದದಿಂದ ಹೆಮ್ಮರವಾಗಿ ಬೆಳೆದು ನಿಂತಿದೆ. ಜೊಲ್ಲೆ ಗ್ರೂಪ್ ಸಹಕಾರದ ಜೊತೆಗೆ ಸಾಮಾಜಿಕ ಕಾರ್ಯ ಮಾಡುತ್ತಾ ಬರುತ್ತಿದೆ ಎಂದರು.
ಅಥಣಿಯ ಮೋಟಗಿಮಠದ ಶ್ರೀ ಪ್ರಭು ಚನ್ನಬಸವ ಮಹಾಸ್ವಾಮಿಗಳು ಮಾತನಾಡಿ, ಹುಟ್ಟು ಹಬ್ಬಗಳು ಸಾಮಾಜಿಕ ಕಾರ್ಯಗಳಾಗಬೇಕು, ಸಿರಿವಂತಿಕೆ ಮತ್ತು ಹಿರಿವಂತಿಕೆ ಸಮಾಜ ಸೇವೆಗಾಗಿ ಆಗಬೇಕು, ಸಮಾಜಕ್ಕಾಗಿ ಬದುಕಬೇಕು, ಬೆಳೆಸಬೇಕು, ಅಂದಾಗ ನಮ್ಮನ್ನು ಸಮಾಜ ಗೌರವಿಸುತ್ತದೆ ಎಂದರು.
ಸದಲಗಾದ ಡಾ.ಶ್ರಧ್ದಾನಂದ ಮಹಾಸ್ವಾಮಿಗಳು ಮತ್ತು ಘೋಡಗೇರಿಯ ಶ್ರೀ ಮಲ್ಲಯ್ಯಾ ಮಹಾಸ್ವಾಮಿಗಳು, ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ಡಾ. ಗೀತಾ ಮಾನೆ, ಪೈಲ್ವಾನ ಅಮೃತ ಬೋಸಲೆ, ಪವನ ಪಾಟೀಲ, ನಿಪ್ಪಾಣಿ ನಗರಾಧ್ಯಕ್ಷ ಸೋನಾಲಿ ಕೋಠಾಡಿಯಾ ಮಾತನಾಡಿದರು.
ನಿವೃತ್ತ ಸಿಬ್ಬಂದಿಗೆ ಪೆನ್ಶನ್ ಪ್ರಮಾಣ ಪತ್ರಗಳನ್ನು, ಜ್ಯೋತಿ ಬಜಾರಲ್ಲಿ ದಸರಾ, ದೀಪಾವಳಿ ನಿಮ್ಮಿತ್ಯ ಗ್ರಾಹಕರಿಗೆ ಆಯೋಜಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು ಹಾಗೂ ಕ್ರೀಡಾಪಟುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ದುರ್ಯೋದನ ಐಹೊಳೆ, ಜಯಾನಂದ ಜಾಧವ, ಸಿದ್ರಾಮ ಗಡದೆ, ಲಕ್ಷ್ಮಣ ಕಬಾಡೆ, ಶಾಂಭವಿ ಅಶ್ವತ್ಪೂರ, ಸತೀಶ ಅಪ್ಪಾಜಿಗೊಳ, ಹಾಲಸಿದ್ಧನಾಥ ಸಕ್ಕರೆ ಕಾರಖಾನೆಯ ಅಧ್ಯಕ್ಷ ಎಂ.ಪಿ ಪಾಟೀಲ, ವಿಲಾಸ ಗಾಡಿವಡ್ಡರ, ಯಶಸ್ವಿನಿ ಜೊಲ್ಲೆ, ಪ್ರಿಯಾ ಜೊಲ್ಲೆ, ಜೊಲ್ಲೆ ಗ್ರುಪ್ನ ವಿವಿಧ ಅಂಗಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು, ಸಹಕಾರ ಧುರೀಣರು, ಮಹಿಳೆಯರು ಉಪಸ್ಥಿತರಿದ್ದರು.
ಬಸವ ಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ರಮೇಶ ಪಾಟೀಲ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ