Karnataka News

*ಬ್ಯಾಟಿಂಗ್ ಮಾಡುವ ಮೂಲಕ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ ಸಿಎಂ*

ಪ್ರಗತಿವಾಹಿನಿ ಸುದ್ದಿ: ತುಮಕೂರು ಈ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಆಗುವುದರಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಬ್ಯಾಟಿಂಗ್ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು.

ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಿದ್ದೇವೆ. ಇದು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಎಂದರು.

ಆದಷ್ಟು ಶೀರ್ಘದಲ್ಲಿ ಕ್ರೀಡಾಂಗಣ ನಿರ್ಮಾಣ ಮುಗಿಸಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸಿ ಎಂದು ತಿಳಿಸಿದರು.

ಮೈಸೂರಿನಲ್ಲೂ ಜಾಗ ಕೊಡ್ತೀವಿ

ಮೈಸೂರಿನಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಬೇಡಿಕೆ ಮುಂದಿಟ್ಟಿದೆ. ಮೈಸೂರಿನಲ್ಲೂ ಜಾಗ ಕೊಡುತ್ತೇವೆ ಎಂದರು.

ಗೃಹ ಸಚಿವರೂ, ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಪರಮೇಶ್ವರ್, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಹಾಗೂ ಜಿಲ್ಲೆಯ ಶಾಸಕರು, ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ರಘುರಾಮ್ ಭಟ್ ಮತ್ತು ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ವೇಳೆ ತುಮಕೂರು ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲು ಹಣದ ಆಮಿಷ ತೋರಿಸಿ ಸಾರ್ವಜನಿಕ ಮುಜುಗರಕ್ಕೆ ಒಳಗಾಗಿರುವ ಗ್ರಾಮಾಂತರ ಶಾಸಕ ಸುರೇಶ್ ಗೌಡ ಅವರಿಗೆ ಮುಖ್ಯಮಂತ್ರಿಗಳು ವೇದಿಕೆಯಲ್ಲೇ ಟಾಂಗ್ ಕೊಟ್ಟರು.

ನಾನು 41 ವರ್ಷದಿಂದ ಮಂತ್ರಿ ಆಗಿದ್ದೇನೆ. ಎರಡು ಬಾರಿ ವಿರೋಧ ಪಕ್ಷದ ನಾಯಕ, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೀನಿ. ಇಂಥಾದ್ದಕ್ಕೆಲ್ಲಾ ಹೆದರಿದ್ದರೆ ರಾಜಕಾರಣದಲ್ಲಿ ಉಳಿಯೋಕೆ ಆಗ್ತಿರಲಿಲ್ಲ. ಯಾವ ತಪ್ಪು ಮಾಡದ ನಾನು ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ವೇದಿಕೆಯಲ್ಲೆ ಉತ್ತರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button