ಪ್ರಗತಿವಾಹಿನಿ ಸುದ್ದಿ: ತಮಿಳುನಾಡು, ಪುದುಚೆರಿಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ಫೆಂಗಲ್ ಚಂಡಮಾರುತದ ಎಫೆಕ್ಟ್ ಕರ್ನಾಟಕಕ್ಕೂ ತಟ್ಟಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಕರಾವಳಿ ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ರಾತ್ರಿ ಹಾಗೂ ನಾಳೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದ್ದು, ಆರೇಂಜ್ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಾಳೆ ಶಾಲೆ-ಕಾಲೇಜುಗಲಿಗೆ, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿ ಜಿಲೆಯಲ್ಲಿಯೂ ಭಾರಿ ಮಳೆ ಮುನ್ಸೂಚನೆ ನೀಡಲಾಗಿದ್ದು, ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಕಟ್ಟೆಚ್ಚರ ಸೂಚಿಸಲಾಗಿದೆ. ಡಿ.6ವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಫೆಂಗಲ್ ಚಂಡಮಾರುತ ಹಿನ್ನೆಲೆಯಲ್ಲಿ ನಾಳೆ ಚಾಮರಾಜನಗರ ಜಿಲ್ಲೆಯಲ್ಲಿಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಚಂಡಮಾರುತದ ಪರಿಣಾಮ ಕೋಲಾರದಲ್ಲಿ ಜಡಿ ಮಳೆ, ಶೀತ ಗಾಳಿ ಹೆಚ್ಚುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕೇರಳದಲ್ಲಿ ಚಂಡಮಾರುತದ ಪರಿಣಾಮ ಕರ್ನಾಟಕ ಹಾಗೂ ಕೇರಳ ಗಡಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು,ರಸ್ತೆಗಳು ಜಲಾವೃತಗೊಂಡಿವೆ. ಕುಂಬ್ಳೆ,ಕಾಸರಗೋಡು ಭಾಗದಲ್ಲಿ ರಣಮಳೆಯಾಗುತ್ತಿದೆ.
ಇನ್ನು ಕಾಸರಗೋಡು ಜಿಲ್ಲೆಯಲ್ಲಿ ನಾಳೆ ಶಾಲಾ-ಕಾಲೇಜುಗಳು, ಶಿಕ್ಷಣ ಕೇಂದ್ರಗಳಿಗೆ ರಜೆ ಘೋಷಣೆ ಮಾಡಿ ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ ನಿರತರವಾಗಿ ಮಳೆ ಸುರಿಯುತ್ತಿದ್ದು, ಶೀತಗಾಳಿಗೆ ಜನರು ತತ್ತರಿಸುವಂತಾಗಿದೆ. ಬೆಂಗಳೂರು ಗ್ರಾಮಾಂತರ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಮಂಡ್ಯ ಭಾಗದಲ್ಲಿಯೂ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನಗಳ ಕಾಲ ಇದೇ ವಾತಾವರಣ ಮುಂದುವರೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ