Belagavi NewsBelgaum News

*ಸುವರ್ಣಸೌಧದಲ್ಲಿ ಅನುಭವ ಮಂಟಪದ ತೈಲಚಿತ್ರ ಅನಾವರಣ: ವಿಧಾನಸಭೆಯಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡ ಸಿಎಂ*

ಪ್ರಗತಿವಾಹಿನಿ ಸುದ್ದಿ: ಸುವರ್ಣಸೌಧದಲ್ಲಿ ಅನುಭವ ಮಂಟಪದ ತೈಲಚಿತ್ರ ಅಳವಡಿಸಿದ್ದರ ಸಂಬಂಧ ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿನ ಹೈಲೈಟ್ಸ್…

ಅನುಭವ ಮಂಟಪದ ತೈಲಚಿತ್ರದ ಅನಾವರಣ ನನ್ನ ಕೈಯಿಂದ ಆಗಿರುವುದು ನನ್ನ ಸೌಭಾಗ್ಯ ಎಂದರು

ಅನುಭವ ಮಂಟಪದ ತೈಲಚಿತ್ರದ ಅನಾವರಣ ನನ್ನ ಕೈಯಿಂದ ಆಗಿರುವುದು ನನ್ನ ಸೌಭಾಗ್ಯ ಎಂದರು.‌

12 ನೇ ಶತಮಾನದಲ್ಲಿ ಅಸಮಾನತೆ, ಜಾತಿ ವ್ಯವಸ್ಥೆ, ಮನುಷ್ಯ ಶೋಷಣೆಯ ವ್ಯವಸ್ಥೆ ಹೋಗಲಾಡಿಸಿ, ಜಾತಿ ರಹಿತ ಸಮ ಸಮಾಜ ತರಬೇಕು ಎನ್ನುವ ಉದ್ದೇಶದಿಂದ ಬಸವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನು ಮಾಡಿದರು.

*ಮೇಲು-ಕೀಳು ಇರುವುದು, ಮನುಷ್ಯ ತಾರತಮ್ಯ ಇರುವುದು ಧರ್ಮ ಆಗಲು ಸಾಧ್ಯವಿಲ್ಲ. ದಯೆಯೇ ಧರ್ಮದ ಮೂಲ ಎಂದು ಅವಿದ್ಯಾವಂತರಿಗೂ ಅರ್ಥ ಆಗುವಂತೆ ಧರ್ಮವನ್ನು ಬೋಧಿಸಿದರು.

ಮದುವೆ ಕೂಡ ಜಾತಿ ಆಧಾರದಲ್ಲಿ ಏರ್ಪಡಿಸಲಾಗುತ್ತಿತ್ತು.‌ ವ್ಯಕ್ತಿಯ ಯೋಗ್ಯತೆಯನ್ನು ಜಾತಿ, ವರ್ಣ ವ್ಯವಸ್ಥೆ ಆಧಾರದ ಮೇಲೆ ನಿರ್ಧಾರ ಆಗುತ್ತಿತ್ತು.‌ ಪ್ರತಿಭೆ ಕೂಡ ಯೋಗ್ಯತೆ ಆಧಾರದ ಮೇಲೆ ನಿರ್ಧಾರ ಆಗದೆ ಜಾತಿ ಆಧಾರದಲ್ಲಿ ನಿರ್ಧರಿಸಲಾಗುತ್ತಿತ್ತು.

ಆರ್.ಅಶೋಕ್, ಅಶ್ವಥ್ ನಾರಾಯಣ್, ಯತ್ನಾಳ್ ಅವರೇ ನೀವೂ ಶೂದ್ರರೇ. ನಿಮ್ಮನ್ನೂ ಸೇರಿಸಿ ಜಿ.ಪರಮೇಶ್ವರ್, ಹೆಚ್.ಕೆ.ಅಟೀಲ್, ಕೆ.ಹೆಚ್.ಮುನಿಯಪ್ಪ, ಸಿದ್ದರಾಮಯ್ಯ ಸೇರಿ ಶೂದ್ರರ ಯೋಗ್ಯತೆಯನ್ನು ಜಾತಿ ಆಧಾರದ ಮೇಲೆ ಅಲ್ಲಗಳೆಯಲಾಗುತ್ತಿತ್ತು ಎಂದರು.

ಜಾತಿ ವ್ಯವಸ್ಥೆಯಿಂದ ಲಾಭ ಪಡೆಯುತ್ತಿರುವ ಪಟ್ಟ ಭದ್ರರು ಜಾತಿ ವ್ಯವಸ್ಥೆಯ ಅಸಮಾನತೆಯನ್ನು ಪೋಷಿಸುತ್ತಿದ್ದಾರೆ.

ಹುಟ್ಟುವಾಗ ಎಲ್ಲರೂ ವಿಶ್ವ ಮಾನವರೇ ಎಂದು ಕುವೆಂಪು ಹೇಳಿದರೆ, ಕುಲ ಕುಲವೆಂದು ಬಡಿದಾಡದಿರಿ ಎಂದು ಕನಕದಾಸರು ಹೇಳಿದ್ದಾರೆ ಎನ್ನುತ್ತಾ ಇಬ್ಬರ ಉಲ್ಲೇಖಗಳನ್ನೂ ಪ್ರಸ್ತಾಪಿಸಿದರು.

ಇವತ್ತಿನ ವಿಧಾನಸಭೆ, ಇವತ್ತಿನ ಪಾರ್ಲಿಮೆಂಟೇ ಅವತ್ತಿನ ಅನುಭವ ಮಂಟಪ. ಅತ್ಯಂತ ಕೆಳ ಸಮುದಾಯದ ಅಲ್ಲಮ ಪ್ರಭು ಅವರು ಅದರ ಅಧ್ಯಕ್ಷರಾಗಿದ್ದರು.

ಎಲ್ಲಾ ಜಾತಿಯ ಪ್ರತಿನಿಧಿಗಳು, ಮಹಿಳಾ ಪ್ರತಿನಿಧಿ ಶರಣ ಶರಣೆಯರೂ ಅನುಭವ ಮಂಟಪದ ಸದಸ್ಯರಾಗಿದ್ದರು.

ಬುದ್ದನ ಕಾಲದಲ್ಲೂ ಈ ರೀತಿಯ ಸರ್ವ ಜಾತಿ , ಸರ್ವ ಧರ್ಮದ ಪ್ರತಿನಿಧಿಗಳನ್ನು ಒಳಗೊಂಡ ಮಂಟಪಗಳಿದ್ದವು ಎಂದು ಚರಿತ್ರೆಯಲ್ಲಿ ಓದಿದ್ದೇವೆ ಎಂದರು.

ಹೀಗಾಗಿ ಅಂಬೇಡ್ಕರ್ ಅವರ ಮಾತಿನ್ನು ನಾವು ಸ್ಮರಿಸಿಕೊಳ್ಳಬೇಕು ಎನ್ನುತ್ತಾ, ‘” ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲಾರರು” ಎನ್ನುವ ಮಾತನ್ನು ಉಲ್ಲೇಖಿಸಿದರು.

ಶೂದ್ರರು ಮತ್ತು ಮಹಿಳೆಯರಿಗೆ ಶಿಕ್ಷಣವನ್ನು ನಿಷೇಧಿಸಲಾಗಿತ್ತು. ಈ ನಿಷೇಧ ಬಸವಾದಿ ಶರಣರ ಕಾಲದಲ್ಲಿ ಇರಲಿಲ್ಲ ಎಂದರು.

ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ನಮ್ಮ ಸಮಾಜ ಚಲನೆ ರಹಿತವಾಗಿದೆ ಎಂದು ಲೋಹಿಯಾ ಮಾತನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದರು.

ಆರ್ಥಿಕ ಮತ್ತು ಸಾಮಾಜಿಕ ಚಲನೆ ಸಿಕ್ಕಾಗ ಮಾತ್ರ ಸಮಾಜದ ಚಲನೆ ಸಾಧ್ಯ ಎಂದರು.

ಜಾತಿ ವ್ಯವಸ್ಥೆ ಬಾವಿಯೊಳಗಿನ‌ಕಸದಂತೆ. ನೀರು ಸೇದಲು ಕೊಡ ಬಾವಿಗಿಳಿಸಿ ಕದಕಿದಾಗ ಕಸ ಪಕ್ಕಕ್ಕೆ ಸರಿಯುತ್ತದೆ. ನೀರು ಸೇದಿದ ಬಳಿಕ ಮತ್ತೆ ಕಸ ಆವರಿಸಿಕೊಳ್ಳುತ್ತದೆ. ಇದೇ ಜಾತಿ ವ್ಯವಸ್ಥೆ ಎಂದು ವಿಶ್ಲೇಷಿಸಿದರು.

850 ವರ್ಷಗಳ ಹಿಂದೆಯೇ ಬಸವಾದಿ ಶರಣರು ಜಾತಿ ಮೀರಿದ ಸಾಮಾಜಿಕ ವ್ಯವಸ್ಥೆ ರೂಪಿಸಲು ಶ್ರಮಿಸಿದ್ದರು. ಅವರ ಶ್ರಮಕ್ಕೆ ಪ್ರತೀಕವಾದ ಅನುಭವ ಮಂಟಪದ ತೈಲಚಿತ್ರವನ್ನು ನಿಮ್ಮ ಅವಧಿಯಲ್ಲಿ ಅನಾವರಣಗೊಳಿಸಿದ್ದು ಒಳ್ಳೆಯದಾಯಿತು ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button