ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ರಾಣಿ ಚನ್ನಮ್ಮ ಒಂದು ಜಾತಿ, ಸಮುದಾಯಕ್ಕೆ ಸೀಮಿತವಾಗಬಾರದು. ಬ್ರಿಟೀಷರ ವಿರುದ್ಧ ಹೋರಾಟದ ಕಹಳೆ ಮೊಳಗಿಸಿದ ಚನ್ನಮ್ಮ ಇಡೀ ದೇಶಕ್ಕೆ ಹೆಮ್ಮೆಯಾಗಿದ್ದಾರೆ. ಚನ್ನಮ್ಮನ ಹೆಸರು ಅಜರಾಮರವಾಗಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಭರವಸೆ ನೀಡಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಆಶ್ರಯದಲ್ಲಿ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಚನ್ನಮ್ಮ ಕಿತ್ತೂರು ಉತ್ಸವವನ್ನು ನೆರೆಸಂತ್ರಸ್ತರಿಗೆ ಸೂರು ಒದಗಿಸುವ ಭರವಸೆಯೊಂದಿಗೆ ವೇದಿಕೆಯಲ್ಲಿಯೇ ಸಾಂಕೇತಿಕವಾಗಿ ಮನೆಯನ್ನು ನಿರ್ಮಿಸುವ ಮೂಲಕ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಉದ್ಘಾಟಿಸಿದರು.
ಕಿತ್ತೂರು ಪ್ರಾಧಿಕಾರಕ್ಕೆ ೨೦೦ ಕೋಟಿ ರೂಪಾಯಿ ಅನುದಾನ ಒದಗಿಸಲು ಎಲ್ಲರೂ ಸೇರಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಚನ್ನಮ್ಮನ ಕಿತ್ತೂರಿನಲ್ಲಿ ಸಾರಿಗೆ ಘಟಕ ನಿರ್ಮಾಣಕ್ಕೆ ಶೀಘ್ರ ಭೂಮಿಪೂಜೆ ನಡೆಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಸವದಿ ಭರವಸೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಸಿ.ಟಿ.ರವಿ ಮಾತನಾಡಿ, ಚನ್ನಮ್ಮ ನಮ್ಮ ನಾಡಿನ ಶೌರ್ಯದ ಪ್ರತೀಕ ಎಂದು ಬಣ್ಣಿಸಿದರು.
ನಾಡಿಗಾಗಿ ಹೋರಾಡಿದ ಮಹನೀಯರನ್ನು ಜಾತಿಗಳಿಗೆ ಸೀಮಿತಗೊಳಿಸುವುದು ಅವರಿಗೆ ಮಾಡುವ ಅವಮಾನವಾಗಿದೆ.
ಭಾರತದ ಸ್ವಾತಂತ್ರ್ಯದ ಯಶೋಗಾಥೆ ಶೌರ್ಯ-ಸಾಹಸದ ಯಶೋಗಾಥೆಯಾಗಿದೆ. ನಮ್ಮನ್ನು ಆಳಿದ ಬ್ರಿಟಿಷರು, ಮೊಗಲರು ತಮ್ಮ ಸಾಮರ್ಥ್ಯದಿಂದ ನಮ್ಮನ್ನು ಆಳಿಲ್ಲ; ನಮ್ಮ ಒಡಕಿನ ಲಾಭ ಪಡೆದು ನಮ್ಮನ್ನು ಆಳಿದ್ದಾರೆ.
ಇತಿಹಾಸದ ಈ ಪಾಠ ನಮಗೆ ಭವಿಷ್ಯದಲ್ಲಿ ಮಾರ್ಗದರ್ಶನವಾಗಲಿ ಎಂದು ಸಚಿವ ಸಿ.ಟಿ.ರವಿ ಹೇಳಿದರು.
ಸಮಾನತೆಯ ಸಾರ ನಮ್ಮದಾಗಿದೆ; ಇಂದು ನಾವು ಜಾತಿ, ಅಸ್ಪೃಶ್ಯತೆ ಮೀರಿ ಯೋಚಿಸದಿದ್ದರೆ ದೇಶವನ್ನು ಉಳಿಸುವುದು ಕಷ್ಟವಾದೀತು ಎಂದು ಅವರು ಎಚ್ಚರಿಸಿದರು.
ಕಿತ್ತೂರು ನಮ್ಮದು ಎಂಬ ಅಭಿಮಾನ ಸ್ಥಳೀಯರು ಬೆಳೆಸಿಕೊಳ್ಳದಿದ್ದರೆ ಅಭಿವೃದ್ಧಿ ಎಂಬುದು ಮೂರು ದಿನಗಳ ಮಾತಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕಿತ್ತೂರು ಕೋಟೆ, ಪರಂಪರೆ ರಕ್ಷಣೆಗೆ ಕೈಜೋಡಿಸಬೇಕು ಎಂದು ಸಿ.ಟಿ.ರವಿ ಕರೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಮಾತನಾಡಿ, ಕಿತ್ತೂರು ಉತ್ಸವ ಇನ್ನು ಮುಂದೆ ಇದನ್ನು ಕಿತ್ತೂರು ವಿಜಯೋತ್ಸವದ ಉತ್ಸವ ಎಂದು ಆಚರಿಸುವ ಮೂಲಕ ಚನ್ನಮ್ಮನ ಶೌರ್ಯ ಯುವ ಸಮುದಾಯಕ್ಕೆ ಸ್ಫೂರ್ತಿಯಾಗುವಂತೆ ಮಾಡಲಾಗುವುದು ಎಂದರು.
ಬ್ರಿಟೀಷರ ವಿರುದ್ಧ ವೀರ ಸಾವರ್ಕರ್ ಅವರ ಹೋರಾಟ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂದರು.
ತಾವು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕಿತ್ತೂರನ್ನು ತಾಲ್ಲೂಕು ಎಂದು ಘೋಷಣೆ ಮಾಡಿರುವುದನ್ನು ಜಗದೀಶ್ ಶೆಟ್ಟರ್ ಅವರು ನೆನಪಿಸಿಕೊಂಡರು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅತೀ ಹೆಚ್ಚಿನ ಅನುದಾನವನ್ನು ಮುಂದಿನ ಬಜೆಟ್ಟಿನಲ್ಲಿ ಒದಗಿಸಲಾಗುವುದು. ಕಿತ್ತೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಕೈಗಾರಿಕೋದ್ಯಮಿಗಳು ಮುಂದಾದರೆ ರಿಯಾಯಿತಿ ನೀಡಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.
ಕಿತ್ತೂರು ಕರ್ನಾಟಕ ಆಡುಭಾಷೆಯಲ್ಲಿ ಬರಲಿ:
ಮುಂಬೈ ಕರ್ನಾಟಕವನ್ನು ಜನರು ತಮ್ಮ ಆಡುಮಾತಿನಲ್ಲಿ ಕಿತ್ತೂರು ಕರ್ನಾಟಕ ಎಂದು ಬಳಸಲು ಆರಂಭಿಸಿದರೆ ಇದು ತಾನಾಗಿಯೇ ಕಿತ್ತೂರು ಕರ್ನಾಟಕ ಎನಿಸಿಕೊಳ್ಳಲಿದೆ. ಅದೇ ರೀತಿ ಸರ್ಕಾರದ ಆಡಳಿತದಲ್ಲೂ ಕಿತ್ತೂರು ಕರ್ನಾಟಕ ಎಂದು ಬಳಸಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚನ್ನಮ್ಮನ ಕಿತ್ತೂರು ಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ ಅವರು, ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸುವಂತೆ ಮನವಿ ಮಾಡಿಕೊಂಡರು.
ಕಿತ್ತೂರಿನ ೬೦೦ ಎಕರೆ ಕೈಗಾರಿಕಾ ಅಭಿವೃದ್ಧಿ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಕೈಗಾರಿಕೆಗಳ ಸ್ಥಾಪನೆಗೆ ಕ್ರಮಕೈಗೊಳ್ಳಬೇಕು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ನೆರವು ನೀಡುವುದರ ಜತೆಗೆ ಈ ಭಾಗದಲ್ಲಿ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ನೆರವಿಮೊಂದಿಗೆ ಕಿತ್ತೂರು ಅನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದರು.
ಕಿತ್ತೂರಿನಲ್ಲಿ ಸಾರಿಗೆ ಘಟಕ ಸ್ಥಾಪನೆಗೆ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದ್ದು, ಸಾರಿಗೆ ಸಚಿವರು ಅನುದಾನ ಪ್ರಕಟಿಸಬೇಕು ಎಂದು ಶಾಸಕ ದೊಡ್ಡಗೌಡರ ಕೋರಿದರು.
ಸಂಸದ ಅನಂತಕುಮಾರ್ ಹೆಗಡೆ ಅವರು ಮಾತನಾಡಿ, “ಅಭಿವೃದ್ಧಿ ಪ್ರಾಧಿಕಾರಗಳ ರಚನೆಯ ಉದ್ದೇಶ ಈಡೇರುತ್ತಿಲ್ಲ. ಆದ್ದರಿಂದ ಪ್ರಾಧಿಕಾರಗಳಿಗೆ ಉದ್ಯಮ ಸ್ವರೂಪವನ್ನು ನೀಡುವ ಬಗ್ಗೆ ಚಿಂತನೆ ನಡೆಸಬೇಕಿದೆ” ಎಂದು ಅಭಿಪ್ರಾಯಪಟ್ಟರು.
ಬರೀ ಸರ್ಕಾರದಿಂದ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಉದ್ಯಮದ ಸ್ವರೂಪ ನೀಡಿದರೆ ಅಭಿವೃದ್ಧಿಗೆ ಹಣ ಹರಿದುಬರಲಿದೆ.
ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ರಿಯಾಯಿತಿ ದರದಲ್ಲಿ ಜಮೀನು ಹಂಚಿಕೆ ಮಾಡಿದರೆ ಕೈಗಾರೀಕೋದ್ಯಮಿಗಳು ಮುಂದೆ ಬರಬಹುದು ಎಂದು ಅನಂತಕುಮಾರ್ ಹೆಗಡೆ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ, ಉತ್ಸವದ ಉದ್ಘಾಟನೆಗೆ ವೇದಿಕೆಯಲ್ಲಿ ಕಟ್ಟಲಾಗಿರುವ ಸಾಂಕೇತಿಕ ಮನೆಯು ಸಂತ್ರಸ್ತರಿಗೆ ಸೂರು ಒದಗಿಸುವ ಸರ್ಕಾರದ ಬದ್ಧತೆಯ ಸಂಕೇತವಾಗಿದೆ ಎಂದರು.
ಚನ್ನಮ್ಮ, ಸಂಗೊಳ್ಳಿ ರಾಯಣ್ಣನವರ ನಾಡಪ್ರೇಮ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಲಿ ಎಂದು ಆಶಿಸಿದರು.
ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ್ ಕವಟಗಿಮಠ ಮಾತನಾಡಿ, ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕವಾಗಿ ಘೋಷಿಸಲು ಎಲ್ಲ ಸಚಿವರು ಪ್ರಯತ್ನಿಸಬೇಕು ಎಂದು ಮನವಿ ಮಾಡಿಕೊಂಡರು.
ಅದೇ ರೀತಿ ಈ ಭಾಗದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾಪನೆಯ ಅಗತ್ಯವಿದೆ ಎಂದರು.
ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕರಾದ ಮಹಾಂತೇಶ ಕೌಜಲಗಿ, ಮಹಾದೇವಪ್ಪ ಯಾದವಾಡ, ದುರ್ಯೋಧನ ಐಹೊಳೆ, ವಿಧಾನ ಪರಿಷತ್ ಸದಸ್ಯರಾದ ಹನಮಂತ ನಿರಾಣಿ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ತಾಲ್ಲೂಕು ಪಂಚಾಯತ ಅಧ್ಯಕ್ಷೆ ನೀಲವ್ವ ಫಕ್ಕೀರಣ್ಣವರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.
ಚನ್ನಮ್ಮ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ, ಆಶೀರ್ಚನ ನೀಡಿದರು. ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸ್ವಾಗತಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ