ಪ್ರಗತಿವಾಹಿನಿ ಸುದ್ದಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಅಂಕೋಲ ತಾಲೂಕಿನ ಹೊನ್ನಳ್ಳಿಯ ತುಳಸಿ ಗೌಡ (86) ವಯೋಸಹಜತೆಯಿಂದ ಇಂದು ಸಂಜೆ ದೈವಾಧೀನರಾಗಿದ್ದರೆ.
ವರ್ಷಕ್ಕೆ ಮೂವತ್ತು ಸಾವಿರಕ್ಕೂ ಅಧಿಕ ಸಸಿಗಳನ್ನು ತುಳಸಿ ಗೌಡ ಅವರು ನೆಟ್ಟು ಬೆಳೆಸುತ್ತಿದ್ದರು. ಅಕಾಲಿಕವಾಗಿ ಪತಿಯನ್ನು ಕಳೆದುಕೊಂಡು ಇಬ್ಬರು ಮಕ್ಕಳನ್ನು ಸಾಕಲು ಅರಣ್ಯ ಇಲಾಖೆಯಲ್ಲಿ ದಿನಗೂಲಿ ಕೆಲಸಕ್ಕೆ ಸೇರಿದ ಇವರು ಅಲ್ಲಿಯೇ ಗಿಡಗಳ ಆರೈಕೆ ಪೋಷಣೆ ಮಾಡುತ್ತಾ ಹಲವು ಕಾಡು ಗಿಡಗಳ ಬೀಜ ಸಂಗ್ರಹಿಸಿ ಸಸಿಗಳನ್ನು ಮಾಡಿ ಕಾಡಿನಲ್ಲಿ ನೆಡುವ ಮೂಲಕ ಸದ್ದಿಲ್ಲದೇ ಹಸಿರು ಕ್ರಾಂತಿ ಮಾಡಿದರು.
ಹಾಲಕ್ಕಿ ಸಮುದಾಯದಲ್ಲಿ ಹುಟ್ಟಿದ ಇವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಹಸಿರು ಬೆಳೆಸುವ ಕಾಯಕ ಮಾಡುತ್ತಾ ಸಾಗಿದರು. ಅಳಿವಿನಂಚಿನ ಸಸ್ಯಗಳನ್ನು ಬೆಳೆಸಿದ ಕೀರ್ತಿ ಇವರದ್ದು. ಇವರ ಸಾಧನೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅವರು ಮಗ ಸುಬ್ರಾಯ ಮತ್ತು ಮಗಳು ಸೋಮಿ ಹಾಗೂ ನಾಲ್ವರು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ