Kannada NewsKarnataka NewsLatest

ಗೋಕಾಕ ದೇಶದಲ್ಲಿಯೆ ನಂ1 ಭ್ರಷ್ಟಾಚಾರದ ಕ್ಷೇತ್ರ: ಸತೀಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ:- ಅನರ್ಹಗೊಂಡ ಗೋಕಾಕ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಕ್ಷೇತ್ರದ ಕಾಮಗಾರಿಯನ್ನು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಕಳೆದ ಎರಡು ತಿಂಗಳಿಂದ ಪರಿಶೀಲಿಸುತ್ತಾ ಭರ್ಜರಿಯಾಗಿ ಉಪ ಚುನಾವಣೆಯ ಪ್ರಚಾರವನ್ನು ನಡೆಸುತ್ತಿದ್ದಾರೆ.
ಇಂದು ಘಟಪ್ರಭಾದಲ್ಲಿ ಪಟ್ಟಣ ಪಂಚಾಯತ್‌ಗೆ ತಮ್ಮ ನೂರಾರು ಬೆಂಬಲಿಗರೊಂದಿಗೆ ಭೇಟಿ ನೀಡಿ ಮಾಹಿತಿ ಪಡೆದು ಅಧಿಕಾರಿಗಳ ಬೆವರಿಳಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರು, ತಮ್ಮ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದ ಕಾಮಗಾರಿಯನ್ನು ರಾಜಕೀಯ ಪ್ರಚಾರಕ್ಕಾಗಿ ಪರಿಶೀಲಿಸುತ್ತಿದ್ದೀರಿ. ಹಿಂದೆ ತಮಗೆ ಅಧಿಕಾರವಿದ್ದು ಮಂತ್ರಿಯಾಗಿದ್ದಾಗ ಯಾಕೆ ಪರಿಶೀಲನೆ ಮಾಡಿಲ್ಲ ಎಂದು ಕೇಳಿದಾಗ, ಹಿಂದೆ ನಾವು ಒಂದೇ ಪಕ್ಷದಲ್ಲಿ ಇದ್ದೆವು. ಗೋಕಾಕ ಕ್ಷೇತ್ರ ದೇಶದಲ್ಲಿಯೆ ನಂ.೧ ಭ್ರಷ್ಟಚಾರದ ಕ್ಷೇತ್ರವಾಗಿದೆ. ಕೆಲವು ಕಡೆ ಅಧಿಕಾರಿಗಳಿಗೆ ಹಪ್ತಾ ಹೋದರೆ ಗೋಕಾಕ ಕ್ಷೇತ್ರದಲ್ಲಿ ಹಪ್ತಾ ಶಾಸಕರಿಗೆ ಹೋಗುತ್ತದೆ ಎಂದು ಹೇಳಿದರು.

ಹಾಗಾದರೆ ಎಷ್ಟು ಕೋಟಿ ಭ್ರಷ್ಟಚಾರವನ್ನು ಗೋಕಾಕ ಕ್ಷೇತ್ರದಲ್ಲಿ ಕಂಡು ಹಿಡಿದಿದ್ದೀರಿ ಎಂದು ಪ್ರಶ್ನಿಸಿದಾಗ, ಇನ್ನು ತನಕ ಎಷ್ಟು ಭ್ರಷ್ಟಾಚಾರ ನಡೆದಿದೆ ಎನ್ನುವ ದಾಖಲೆ ಸಿಕ್ಕಿಲ್ಲ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದರು.
ಒಂದು ಕ್ಷೇತ್ರದ ಶಾಸಕರಾಗಿ ಇನ್ನೊಂದು ಕ್ಷೇತ್ರದ ಕಾಮಗಾರಿ ಪರೀಶಿಲಿಸುವುದು, ಅಧಿಕಾರಿಗಳ ತರಾಟೆ ತೆಗೆದುಕೊಳ್ಳುವುದು ಎಷ್ಟು ಸರಿ ಎನ್ನುವ ಸುದ್ದಿಗಾರರ ಪ್ರಶ್ನೆಗೆ, ನಾನು ಶಾಸಕ ರಾಜ್ಯದ ಎಲ್ಲಾ ಕಡೆ ಪರಿಶೀಲನೆ ನಡೆಸಬಹುವುದು ಹಾಗೆಯೇ ಅರಬಾವಿ ಕ್ಷೇತ್ರದಲ್ಲಿ ಭ್ರಷ್ಟಾಚಾರ ನಡೆದ ಬಗ್ಗೆ ಆರೋಪ ಕೇಳಿ ಬಂದರೆ ಅಲ್ಲಿಯೂ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದರು.

ಆದರೆ ಕೆಲವು ಮೇಲಾಧಿಕಾರಿಗಳನ್ನು ಸಂಪರ್ಕಿಸಿದಾಗ ಮಾಹಿತಿಯನ್ನು ಯಾರು ಬೇಕಾದರೂ ಪಡೆಯಬಹುದು. ಆದರೆ ಪರಿಶೀಲನೆ ಮಾಡಿ ಇನ್ನೊಂದು ಕ್ಷೇತ್ರದ ಅಧಿಕಾರಿಗಳ ಸಭೆ ನಡೆಸಲಿಕ್ಕೆ ಅವಕಾಶವಿಲ್ಲ ಎನ್ನುತ್ತಾರೆ.
ಇಂದು ಮಲ್ಲಾಪೂರ ಪಟ್ಟಣ ಪಂಚಾಯತ್‌ಗೆ ಯಾವುದೇ ಲಿಖಿತ ಸೂಚನೆ ಇಲ್ಲದೆ ಮೌಖಿಕವಾಗಿ ತಿಳಿಸಿ ತಮ್ಮ ಕಾರ್ಯಕರ್ತರರೊಂದಿಗೆ ಕೆಲವು ಗಂಟೆಗಳ ಕಾಲ ಪರಿಶೀಲನೆ ನಡೆಸಿದರು.
ಪ್ರಾರಂಭದಲ್ಲಿ ಕಾರ್ಯಕರ್ತರು ಧುಪದಾಳ ಗ್ರಾಮ ಪಂಚಾಯತ್ ನಿಂದ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತ್ ತನಕ ಬೈಕ್ ರ‍್ಯಾಲಿ ನಡೆಸಿ ಸತೀಶ ಜಾರಕಿಹೊಳಿಯವರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಪ್ರಕಾಶ ಡಾಂಗೆ, ಪ್ರಕಾಶ ಬಾಗೇವಾಡಿ, ಮಾರುತಿ ವಿಜಯನಗರ, ರಮಜಾನ್ ಖೋಜಾ, ಅಪ್ಪಸಾಬ ಮುಲ್ಲಾ, ಭರಮು ಗಾಡಿವಡ್ಡರ, ಪುಟ್ಟು ಖಾನಪೂರೆ, ಈರಣ್ಣ ಸಂಗಮನವರ, ನವೀನ ಹೊಸಮನಿ, ರೆಹಮಾನ್ ಮೊಕಾಶಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕೆ.ಬಿ.ಪಾಟೀಲ, ಇಂಜಿನೀಯರ್ ಎಮ್.ಎಸ್.ತೇಲಿ ಸೇರಿ ನೂರಾರು ಕಾರ್ಯಕರ್ತರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಯಮಕನಮರಡಿ ಶಾಸಕರು ಸಾರ್ವಜನಿಕರಿಂದ ಬಂದ ದೂರುಗಳನ್ನು ಸ್ವೀಕರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button