Politics

*ಆರೋಗ್ಯ ಇಲಾಖೆಯೇ ರೋಗಪೀಡಿತವಾಗಿದೆ, ಸರ್ಕಾರಿ ಆಸ್ಪತ್ರೆಗಳಿಗೆ ದಿಢೀರ್‌ ಭೇಟಿ ನೀಡಿ ತಪಾಸಣೆ ಮಾಡಿ: ಆರ್.ಅಶೋಕ್ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣದ ಕುರಿತು ಮಾತನಾಡಿದ ಅವರು, ಈ ಸಮಸ್ಯೆಗೆ ತಾರ್ಕಿಕ ಅಂತ್ಯ ನೀಡಬೇಕು. ಔಷಧಿ ತಯಾರಿಕಾ ಕಂಪನಿಗಳಿಗೆ ಸಂದೇಶ ಹೋಗಬೇಕು. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು. ಆ ವರದಿಯನ್ನು ಸದನದಲ್ಲಿ ಮಂಡಿಸಬೇಕು. ಇದರಿಂದಾಗಿ ಡ್ರಗ್‌ ಮಾಫಿಯಾ ನಿಯಂತ್ರಣಕ್ಕೆ ಬಂದು ಬಾಣಂತಿಯರ ಸಾವನ್ನು ತಡೆಯಬಹುದು. ಜೊತೆಗೆ ಈ ಅಕ್ರಮಕ್ಕೆ ಕಡಿವಾಣ ಹಾಕಲು ಪ್ರತ್ಯೇಕ ಮಸೂದೆ ಮಂಡಿಸಬೇಕು ಎಂದು ಆಗ್ರಹಿಸಿದರು.

ಬಳ್ಳಾರಿಯಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಜಿಲ್ಲೆಗಳಲ್ಲಿ ತಾಯಂದಿರ ಸಾವಿನ ಘಟನೆಗಳು ನಡೆದಿವೆ. ರಾಜ್ಯದಲ್ಲಿ ಆರೋಗ್ಯ ಇಲಾಖೆಯೇ ರೋಗಪೀಡಿತವಾಗಿದೆ. ಇಂತಹ ಘಟನೆ ನಡೆದಾಗ ತಕ್ಷಣ ಆರೋಗ್ಯ ಸಚಿವರು ಅಲ್ಲಿಗೆ ಭೇಟಿ ನೀಡಬೇಕು. ನಾನು ಬಳ್ಳಾರಿಗೆ ಮೂರು ದಿನದ ನಂತರ ಹೋದರೆ, ಸಚಿವರು ಆರು ದಿನದ ಬಳಿಕ ಭೇಟಿ ನೀಡಿದ್ದಾರೆ. ವೈದ್ಯಾಧಿಕಾರಿಗಳು ಯಾರೂ ತಪ್ಪು ಒಪ್ಪಿಕೊಳ್ಳದೆ ಒಬ್ಬರ ಮೇಲೆ ಒಬ್ಬರು ದೂರು ಹೇಳುತ್ತಿದ್ದಾರೆ. ಈ ನಡುವೆ ಸರ್ಕಾರ ಯಾರೋ ಒಬ್ಬ ಅಧಿಕಾರಿಯ ಮೇಲೆ ಕ್ರಮ ಕೈಗೊಂಡು ಬಲಿಪಶು ಮಾಡಿದೆ. ಸರ್ಕಾರಕ್ಕೆ ಬದ್ಧತೆ ಇದ್ದಲ್ಲಿ ನ್ಯಾಯಾಂಗ ತನಿಖೆ ಮಾಡಬೇಕಿತ್ತು ಎಂದರು.

ಸಿಜೇರಿಯನ್‌ ಸರಿಯಾಗಿ ಮಾಡಿದ್ದೇವೆ, ಆದರೆ ಐವಿ ದ್ರಾವಣ ನೀಡಿದ ಕೂಡಲೇ ಕಿಡ್ನಿಯ ಕ್ರಿಯೇಟಿನ್‌ ಪ್ರಮಾಣದಲ್ಲಿ ವ್ಯತ್ಯಾಸವಾಗಿದೆ. ಅದನ್ನು ನಿಯಂತ್ರಿಸಲು ಹೋದಾಗ ಅಂಗಾಂಗ ವೈಫಲ್ಯವಾಗಿದೆ ಎಂದು ಬಳ್ಳಾರಿ ಆಸ್ಪತ್ರೆಯ ವೈದ್ಯರು ನನಗೆ ತಿಳಿಸಿದ್ದಾರೆ. ಆದರೆ ಸರ್ಕಾರದ ವರದಿಯಲ್ಲಿ ಈ ಬಗ್ಗೆ ಎಲ್ಲೂ ಹೇಳಿಲ್ಲ. ಗರ್ಭಿಣಿಯರಿಗೆ ಮೊದಲೇ ರೋಗ ಇತ್ತು ಎಂದು ಈ ವರದಿಯಲ್ಲಿ ಬರೆಯಲಾಗಿದೆ ಎಂದರು.

ಈ ದ್ರಾವಣ ಕಳಪೆ ಎಂದು ಆರು ತಿಂಗಳ ಹಿಂದೆಯೇ ಅಧಿಕಾರಿಗಳು ತಿಳಿಸಿದ್ದಾರೆ. ಇದರ ವಿರುದ್ಧ ದಾಖಲಾದ ಪ್ರಕರಣದ ವಿರುದ್ಧ ಸರಿಯಾದ ವಕೀಲರನ್ನು ನೇಮಿಸಿ ನ್ಯಾಯಾಲಯದಲ್ಲಿ ಸರ್ಕಾರ ಹೋರಾಟ ಮಾಡಬೇಕಿತ್ತು. ಸರ್ಕಾರ ಯಾಕೆ ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತರಲಿಲ್ಲ? ಇಲ್ಲಿ ಕೇಂದ್ರ ಸರ್ಕಾರದ ಪ್ರಶ್ನೆ ಬರುವುದಿಲ್ಲ. ಇಲ್ಲಿ ರಾಜ್ಯ ಸರ್ಕಾರ ಹಣ ಕೊಟ್ಟು ಔಷಧಿ ಖರೀದಿಸುತ್ತಿದೆ. ಈ ಬಗ್ಗೆ ಸರ್ಕಾರ ಚಿಂತಿಬೇಕಿತ್ತು ಎಂದರು.

ಐವಿ ದ್ರಾವಣದ ಸುಮಾರು 37 ಬ್ಯಾಚ್‌ಗಳು ಕಳಪೆ ಎಂದು ಗುರುತಿಸಲಾಗಿದೆ. ಇಷ್ಟಾದ ಮೇಲೂ ಅದರ ವಿರುದ್ಧ ಸರ್ಕಾರ ಕ್ರಮ ವಹಿಸಲಿಲ್ಲ. ವಕೀಲರು ಇದರ ವಿರುದ್ಧ ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಂಡಿಸಲಿಲ್ಲ. ಹೀಗಾದರೆ ಈ ಸಾವಿಗೆ ಯಾರು ನ್ಯಾಯ ಕೊಡುತ್ತಾರೆ? ಎಂದು ಪ್ರಶ್ನಿಸಿದರು.

ದಾವಣಗೆರೆ ಆಸ್ಪತ್ರೆಯಲ್ಲಿ 28 ತಾಯಂದಿರ ಸಾವು ಸಂಭವಿಸಿದೆ. ರಾಯಚೂರಿನಲ್ಲಿ ಮೂರು ತಿಂಗಳಲ್ಲಿ 10 ಬಾಣಂತಿಯರು ಮೃತಪಟ್ಟಿದ್ದಾರೆ. ಚಿತ್ರದುರ್ಗದ ಆಸ್ಪತ್ರೆಯಲ್ಲೂ ಒಬ್ಬ ತಾಯಿ ಸತ್ತಿದ್ದಾರೆ. ತಾಯಿ ಮತ್ತು ಮಗುವಿಗೆ ಸರ್ಕಾರ ಸುರಕ್ಷತೆಯ ಗ್ಯಾರಂಟಿ ನೀಡಬೇಕಿದೆ ಎಂದು ಆಗ್ರಹಿಸಿದರು.

ಕಪ್ಪು ಪಟ್ಟಿಗೆ ಸೇರಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಈ ಮೆಡಿಕಲ್‌ ಮಾಫಿಯಾವನ್ನು ಸರ್ಕಾರ ತಡೆಹಿಡಿಯಬೇಕಿದೆ. ಕ್ಯಾನ್ಸರ್‌ ಔಷಧಿಯನ್ನು ಡ್ರಗ್‌ ಮಾಫಿಯಾಗಾಗಿ ಬಳಸಲಾಗುತ್ತಿದೆ. ಇಂತಹ ಡ್ರಗ್‌ಗಳು ಸುಲಭವಾಗಿ ಹೊರಗೆ ದೊರೆಯುತ್ತಿದೆ ಎಂದರೆ ಆರೋಗ್ಯ ಇಲಾಖೆ ಸತ್ತಿದೆ ಎಂದರ್ಥ. ಸಚಿವರು ಹಾಗೂ ಅಧಿಕಾರಿಗಳು ಏಕೆ ತಪಾಸಣೆ ಮಾಡುತ್ತಿಲ್ಲ? ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಷ್ಟೆಲ್ಲ ಆಗುತ್ತಿದೆ ಎಂದರು.

ಕ್ರಿಯಾಶೀಲತೆ ಇಲ್ಲ

ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಿದೆ. ನಾನು ಆರೋಗ್ಯ ಸಚಿವನಾಗಿದ್ದಾಗ 20 ಆಸ್ಪತ್ರೆಗಳಿಗೆ ದಿಢೀರ್‌ ಭೇಟಿ ನೀಡಿದ್ದೆ. ಒಮ್ಮೆ ದಾವಣಗೆರೆಗೆ ಹೋಗಿದ್ದಾಗ 50 ನಕಲಿ ವೈದ್ಯರನ್ನು ಒಂದೇ ಬಾರಿಗೆ ಜೈಲಿಗೆ ಕಳುಹಿಸಿದ್ದೆ. ಈ ಬಗೆಯ ಕ್ರಿಯಾಶೀಲತೆ ಇಲಾಖೆಯಲ್ಲಿ ಕಂಡುಬರುತ್ತಿಲ್ಲ ಎಂದರು.

ವಯನಾಡಿನಲ್ಲಿ ಆನೆ ತುಳಿತದಿಂದ ಸತ್ತವರಿಗೆ 15 ಲಕ್ಷ ರೂ. ಪರಿಹಾರ ನೀಡಿದರೆ, ರಾಜ್ಯದ ಸಂತ್ರಸ್ತರಿಗೆ 2 ಲಕ್ಷ ರೂ. ನೀಡಲಾಗಿದೆ. ಕೆ.ಸಿ.ಜನರಲ್‌ ಆಸ್ಪತ್ರೆಗೆ ಲೋಕಾಯುಕ್ತರು ಭೇಟಿ ನೀಡಿ ವರದಿ ರೂಪಿಸಿದ್ದಾರೆ. ವೈದ್ಯರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ, ಯಂತ್ರದ ಕೊರತೆ, ಮಕ್ಕಳ ನಿಗಾ ಘಟಕದಲ್ಲಿ ಕಾರ್ಯನಿರ್ವಹಿಸದ ವೆಂಟಿಲೇಟರ್‌, ಬಾಣಂತಿಯರಿಗೆ ಬಿಸಿನೀರಿಲ್ಲ, ಕಳಪೆ ಔಷಧಿ, ಸಾವಿರ ಜನರಿಗೆ ಒಂದು ಶೌಚಾಲಯ, ಹಳೆಯ ಔಷಧಿಗಳು ವಿಲೇವಾರಿಯಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ವಿವರಿಸಿದರು.

ಸರ್ಕಾರಿ ಆಸ್ಪತ್ರೆಗೆ ಬಡವರು ಬರುತ್ತಾರೆ. ಆದರೆ ಸರ್ಕಾರ ವಿವಿಧ ಶುಲ್ಕಗಳನ್ನು ಏರಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಶುಲ್ಕ ಏರಿಕೆಗೆ ಸಿದ್ಧತೆ ನಡೆದಿದೆ. ಹಲ್ಲು ಕೀಳುವುದಕ್ಕೂ ಶುಲ್ಕ ಏರಿಸಲಾಗಿದೆ ಎಂದು ದೂರಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button