Kannada NewsKarnataka NewsLatest

ಕಿತ್ತೂರು ಉತ್ಸವ-೨೦೧೯ ಸಮಾರೋಪ; ಸಾಂಸ್ಕೃತಿಕ ಸಂಭ್ರಮಕ್ಕೆ ತೆರೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಬ್ರಿಟೀಷರ ವಿರುದ್ಧ ಕೆಚ್ಚೆದೆಯ ಹೋರಾಟ ಮಾಡುವ ಮೂಲಕ ಸ್ವಾಭಿಮಾನ ನೆನಪಿಸಿಕೊಟ್ಟವರು ತಾಯಿ ರಾಣಿ ಚನ್ನಮ್ಮ. 1824 ರಲ್ಲಿ ಚನ್ನಮ್ಮ ನಡೆಸಿದ ಹೋರಾಟವು ನಮ್ಮಲ್ಲಿ ಸ್ವಾಭಿಮಾನವನ್ನು ಬಡಿದೆಬ್ಬಿಸಿ ಸ್ವಾತಂತ್ರ್ಯದ ಹೋರಾಟಕ್ಕೆ ಇಂಬು ನೀಡಿತು ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಹೇಳಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಕಿತ್ತೂರು ಉತ್ಸವ-೨೦೧೯ ರ ಸಮಾರೋಪ  ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯದ ಕಹಳೆ ಊದಿದ ಚೆನ್ನಮ್ಮನ ಶೌರ್ಯ, ಸಾಹಸವನ್ನು ಯುವ ಪೀಳಿಗೆಗೆ ತಲುಪಿಸಬೇಕಿದೆ.
ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಬೀತುಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಆಗಬೇಕು ಎಂಬ ಬಹಳ ದಿನಗಳ ಬೇಡಿಕೆ ಬಗ್ಗೆ ಮುಖ್ಯಮಂತ್ರಿಗಳ ಜತೆ ಈಗಾಗಲೇ ಚರ್ಚಿಸಲಾಗಿದೆ.
ಚನ್ನಮ್ಮನ ಯಶೋಗಾಥೆ ಹಾಗೂ ಬಸವಣ್ಣನವರ ಸಾಧನೆಯನ್ನು ಜಗತ್ತಿಗೆ ಪರಿಚಯಿಸುವ ಅಗತ್ಯವಿದೆ ಎಂದರು.
ಜಿಲ್ಲೆಯಲ್ಲಿ ಜನರು ಸಂಕಷ್ಟದ್ದಲ್ಲಿದ್ದಾರೆ. ಆದಾಗ್ಯೂ ನೋವು ಮರೆತು ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಸಂತ್ರಸ್ತರಿಗೆ ಮನೆಗಳನ್ನು ಮನೆ ನಿರ್ಮಿಸಿಕೊಡುವ ಮೂಲಕ ಅವರಿಗೆ ನೆರವಾಗಬೇಕಿದೆ. ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಸುರೇಶ್ ಅಂಗಡಿ ಅವರು ತಿಳಿಸಿದರು.

ಚೆನ್ನಮ್ಮ ಎಕ್ಸಪ್ರೆಸ್ ರೈಲು ಕಿತ್ತೂರಿಗೆ ಬರಲಿ:

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹಾಂತೇಶ ದೊಡ್ಡಗೌಡರ ಅವರು, ಕಿತ್ತೂರು ಚೆನ್ನಮ್ಮ ಎಕ್ಸಪ್ರೆಸ್ ರೈಲು ಮುಂಬರುವ ದಿನಗಳಲ್ಲಿ ಕಿತ್ತೂರು ಮೂಲಕ ಹಾದು ಹೋಗಬೇಕು ಎಂಬುದು ಜನರ ಆಶಯವಾಗಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಿಕೊಂಡರು.
ಕಿತ್ತೂರು ಮೂಲಕ ರೈಲು ಮಾರ್ಗ ನಿರ್ಮಿಸಲು ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಈಗಾಗಲೇ ಪ್ರಯತ್ನವನ್ನು ಆರಂಭಿಸಿದ್ದಾರೆ. ಭೂಸ್ವಾಧೀನ ಸಂದರ್ಭದಲ್ಲಿ ರೈತರು ಸಹಕಾರ ನೀಡುವ ಮೂಲಕ ಕಿತ್ತೂರಿನಲ್ಲಿ ರೈಲು ನಿಲ್ದಾಣ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.
ಕಿತ್ತೂರು ಭಾಗದ ಸಮಗ್ರ ಅಭಿವೃದ್ಧಿಗೆ ಪ್ರಾಧಿಕಾರಕ್ಕೆ ೨೦೦ ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಬೇಕು ಎಂಬುದು ಸೇರಿದಂತೆ ಈ ಭಾಗಕ್ಕೆ ಅಗತ್ಯವಿರುವ ಎಲ್ಲ ಬೇಡಿಕೆಗಳಿಗೂ ಮುಖ್ಯಂತ್ರಿಗಳು ಹಾಗೂ ವಿವಿಧ ಇಲಾಖೆಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ನಿರಂತರ ಮಳೆಯ ಮಧ್ಯೆಯೂ ಮೂರು ದಿನಗಳ ಉತ್ಸವವು ಯಶಸ್ವಿಯಾಗಿದ್ದು, ಇದಕ್ಕೆ ಸಹಕಾರ ನೀಡಿದ ಎಲ್ಲ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತಕ್ಕೆ ಶಾಸಕ ಮಹಾಂತೇಶ ದೊಡ್ಡಗೌಡರ ಕೃತಜ್ಞತೆ ಸಲ್ಲಿಸಿದರು.

ಸಮಾರೋಪ ನುಡಿ:

ಕಿತ್ತೂರು ಉತ್ಸವ-೨೦೧೯ ರ ಸಮಾರೋಪ ನುಡಿಗಳನ್ನಾಡಿದ ಕರ್ನಾಟಕ ಕಲಾ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾದ ರಾಜೇಶ್ವರಿ ಮಹೇಶ್ವರಯ್ಯ ಅವರು, ಕಿತ್ತೂರು ಕರ್ನಾಟಕ ಆಗಲಿ ಎಂಬ ಜನರ ಆಶಯ ಶೀಘ್ರದಲ್ಲಿ ಈಡೇರಲಿ ಎಂದು ಆಶಿಸಿದರು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಂಚೆ ಇಲಾಖೆಯ ಅಧೀಕ್ಷಕರಾದ ಎಸ್.ಜಿ.ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.
ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ವಿಶೇಷ ಅಂಚೆ ಲಕೋಟೆಯನ್ನು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಬಿಡುಗಡೆಗೊಳಿಸಿದರು.
 ನಿಚ್ಚಣಿಕೆ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಹಾಗೂ ಕಾದರವಳ್ಳಿ ಶೀಮಿಮಠದ ಡಾ.ಫಾಲಾಕ್ಷಿ ಶಿವಯೋಗಿಗಳು ಸಾನಿಧ್ಯ ವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button