ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ 48 ದಿನಗಳ ಕಾಲ ತಿಹಾರ್ ಜೈಲಿನಲ್ಲಿದ್ದು ಬಿಡುಗಡೆಯಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಈಗಾಗಲೆ ನವದೆಹಲಿಯ ವಿಮಾನ ನಿಲ್ದಾಣದತ್ತ ತೆರಳಿರುವ ಶಿವಕುಮಾರ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಬೆಂಗಳೂರು ತಲುಪಲಿದ್ದಾರೆ. ಡಿ.ಕೆ.ಶಿವಕುಮಾರ ಅವರನ್ನು ಸ್ವಾಗತಿಸಲು ರಾಜ್ಯದ ಹಲವೆಡೆಯಿಂದ ಅವರ ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ.
ವಿಶೇಷವಾಗಿ ರಾಮನಗರ ಜಿಲ್ಲೆಯಿಂದ ಸುಮಾರು 500ಕ್ಕೂ ಹೆಚ್ಚು ವಾಹನಗಳಲ್ಲಿ ಅಭಿಮಾನಿಗಳು ಬೆಂಗಳೂರಿನತ್ತ ಹೊರಟಿದ್ದಾರೆ. ವಿಮಾನ ನಿಲ್ದಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು ಸೇರುತ್ತಿದ್ದಾರೆ. ಹಾಗಾಗಿ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಡಿ.ಕೆ.ಶಿವಕುಮಾರ ಅವರಿಗೆ ಅದ್ಧೂರಿ ಸ್ವಾಗತ ಕೋರುವಂತೆ ಕಾಂಗ್ರೆಸ್ ಹೈಕಮಾಂಡ್ ಈಗಾಗಲೆ ಸಂದೇಶ ರವಾನಿಸಿದೆ. ಇದನ್ನು ಕಾಂಗ್ರೆಸ್ ಹಾಗೂ ಡಿ.ಕೆ.ಶಿವಕುಮಾರ್ ಅವರ ಶಕ್ತಿ ಪ್ರದರ್ಶನಕ್ಕೆ ಅವಕಾಶವನ್ನಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಡಿ.ಕೆ.ಶಿವಕುಮಾರ ಅವರ ಮೇಲೆ ವಿನಾಕಾರಣ ಆರೋಪ ಹೊರಿಸಿ ಅವರನ್ನು ಜೈಲಿಗೆ ತಳ್ಳಿದ್ದು ಬಿಜೆಪಿಯ ಕುತಂತ್ರ. ಹಾಗಾಗಿ ಇದರ ವಿರುದ್ಧ ಕಾಂಗ್ರೆಸ್ ಸಿಡಿದೇಳಬೇಕು. ಏನೇ ಮಾಡಿದರೂ ಡಿ.ಕೆ.ಶಿವಕುಮಾರ ಬಲ ಕುಗ್ಗಿಸಲು ಸಾಧ್ಯವಿಲ್ಲ ಎನ್ನುವ ಸಂದೇಶ ನೀಡಲು ತಯಾರಿ ನಡೆಸಲಾಗಿದೆ.
ಶಿವಕುಮಾರ ನವದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಜೊತೆಗೆ ವೇಣುಗೋಪಾಲ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಗೆ ಡಿ.ಕೆ.ಶಿವಕುಮಾರ ದೊಡ್ಡ ಆಸ್ತಿಯಾಗಿರುವುದರಿಂದ ಪಕ್ಷ ಅವರನ್ನು ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಬೆಂಬಲಿಸಲು ನಿರ್ಧರಿಸಿದೆ.
ಆದರೆ, ಕಾಂಗ್ರೆಸ್ ನಾಯಕರು ವಿಮಾನ ನಿಲ್ದಾಣಕ್ಕೆ ತೆರಳುವ ಸಾಧ್ಯತೆ ಕಡಿಮೆ. ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿದ್ದು, ಪಕ್ಷದ ಕಾರ್ಯಕರ್ತರು ಶಿವಕುಮಾರ ಅವರನ್ನು ಸ್ವಾಗತಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಡಿ.ಕೆ.ಶಿವಕುಮಾರ ಅವರಿಗೆ ಜಾಮೀನು ನೀಡಿರುವುದನ್ನು ವಿರೋಧಿಸಿ ಜಾರಿ ನಿರ್ದೇಶನಾಲಯ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದೆ. ಜೊತೆಗೆ ಪ್ರಕರಣವನ್ನು ಸಿಬಿಐ ಕೂಡ ತನಿಖೆಗೆ ಕೈಗೆತ್ತಿಕೊಳ್ಳಲಿದೆ.
ಸೋನಿಯಾ, ರಾಹುಲ್ ಭೇಟಿಯಾದ ಡಿ.ಕೆ.ಶಿವಕುಮಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ