*ಗ್ಯಾರೆಂಟಿ ಯೋಜನೆಗಳು ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಶ್ರಮ ವಹಿಸಿ: ವಿನಯ ನಾವಲಗಟ್ಟಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಶೇಕಡಾ 95% ಫಲಾನುಭವಿಗಳಿಗೆ ತಲುಪುತ್ತಿದ್ದು ಉಳಿದವರಿಗೂ ಅವುಗಳ ಅನುಕೂಲ ಕಲ್ಪಿಸಿಕೊಡಲು ಸಂಬಂಧಿಸಿದ ಅಧಿಕಾರಿಗಳು ಶ್ರಮ ವಹಿಸಬೇಕು ಎಂದು ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ (ಜ.10) ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನ್ಯಾಯ ಬೆಲೆ ಅಂಗಡಿಗಳಲ್ಲಿ ನಿಯಮಾನುಸಾರ ಪಡಿತರ ವಿತರಣೆ ಮಾಡುತ್ತಿಲ್ಲ ಎಂದು ವ್ಯಾಪಕ ದೂರುಗಳು ಕೇಳಿಬರುತ್ತಿವೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.
ಗೃಹಲಕ್ಷ್ಮೀ ಯೋಜನೆಯಡಿ ನೀಡಲಾಗುತ್ತಿರುವ 2 ಸಾವಿರ ಹಣ ತಲುಪದಿದ್ದವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಗುರುತಿಸಿ ದಾಖಲೆ ಪರಿಶೀಲಿಸಿ ತಾಂತ್ರಿಕ ದೋಷ ಸರಿಪಡಿಸಿಕೊಡಬೇಕು ಈ ಸಂಬಂಧ ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಗಮನಕ್ಕೆ ತರುವಂತೆ ವಿನಯ ನಾವಲಗಟ್ಟಿ ತಿಳಿಸಿದರು.
ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ನೀಡಲು ಬಂದ ಗ್ಯಾಸ್ ಏಜೆನ್ಸಿಗಳಿಂದ ಪ್ರತಿ ಸಿಲೆಂಡರ್‌ಗೆ ಬೆಲೆ ನಿಗದಿಗಿಂತ ಹೆಚ್ಚುವರಿಯಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಆಹಾರ ಇಲಾಖೆಯಿಂದ ಗ್ಯಾಸ್ ಏಜೆನ್ಸಿಗಳಿಗೆ ಹೆಚ್ಚು ಹಣ ಪಡೆಯದಂತೆ ಕಡ್ಡಾಯವಾಗಿ ಸೂಚನೆ ನೀಡಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಚಿಕ್ಕೋಡಿ ಸದಸ್ಯರೊಬ್ಬರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾತನಾಡಿ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಭೇಟಿ ನೀಡಿ ನಿರಂತರ ಕ್ರಿಯಾಶೀಲರಾಗಿರಬೇಕು. ಆನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಲು ಈಗಾಗಲೇ ಮುಖ್ಯಮಂತ್ರಿಗಳಿಂದ ನಿರ್ದೇಶನ ನೀಡಲಾಗಿದೆ. ಅದರಂತೆ ಸದ್ಯದಲ್ಲಿ ಅಂತಹ ಪಡಿತರ ಚೀಟಿಗಳನ್ನು ಗುರುತಿಸಿ ರದ್ದು ಪಡಿಸಲಾಗುವುದು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಿಗೆ ಗೌರವ ಧನ ಹೆಚ್ಚಿರುವ ಕುರಿತು ಈಗಾಗಲೇ ನಿರ್ದೇಶನ ಬಂದಿದೆ. ಯೋಜನೆಗಳ ಸದ್ಬಳಕೆಗೆ ಸದಸ್ಯರು ಕಾರ್ಯ ವ್ಯಾಪ್ತಿಯಲ್ಲಿ ನಿರಂತರ ಸಭೆಗಳನ್ನು ಆಯೋಜಿಸಬೇಕು
ಗ್ಯಾರಂಟಿ ಯೋಜನೆಗಳು ಅನುಷ್ಠಾನಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಸರ್ಕಾರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದೆ ಎಂದು ಜಿ.ಪಂ ಸಿಇಒ ರಾಹುಲ್ ಶಿಂಧೆ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 3 ವಿಭಾಗಗಳಡಿಯಲ್ಲಿ ಒಟ್ಟು 15 ಬಸ್ ಘಟಕಗಳಿಂದ 1593 ಬಸ್ ಗಳು ಪ್ರತಿದಿನ ಕಾರ್ಯಾಚರಣೆ ಮಾಡಲಾಗುತ್ತಿದೆ. ಶಕ್ತಿ ಯೋಜನೆ ಪೂರ್ವದಲ್ಲಿ ಪ್ರತಿದಿನ ಸರಾಸರಿ 5.40 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಶಕ್ತಿ ಯೋಜನೆ ಪ್ರಾರಂಭದ ನಂತರ ಪ್ರತಿದಿನ ಸರಾಸರಿ ಒಟ್ಟು 7.79 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಆದ್ದರಿಂದ ಒಟ್ಟು 2.39 ಲಕ್ಷ ಪ್ರಯಾಣಿಕರ ಸಂಖ್ಯೆಯಲ್ಲಿ ಪ್ರತಿದಿನ ಹೆಚ್ಚಳವಾಗಿರುತ್ತಿದೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿ ವಿವರಿಸಿದರು.
ಯುವನಿಧಿ ಯೋಜನೆ ಪಡೆಯಲು ಪ್ರಸಕ್ತ ಸಾಲಿನಲ್ಲಿ ಉತ್ತೀರ್ಣ ಹೊಂದಿಂದ ಪದವೀಧರರ ನೋಂದಣಿ ಈಗಾಗಲೇ ಪ್ರಾರಂಭಿಸಲಾಗಿದೆ. ನೊಂದಣಿಯಾದ 6 ತಿಂಗಳ ನಂತರ ಪ್ರತಿ ತಿಂಗಳ ಪದವೀಧರರಿಗೆ ಹಣ ಬಿಡುಗಡೆ ಮಾಡಲಾಗುವುದು. ಪದವೀಧರರು ಪ್ರತಿ ತಿಂಗಳು ಯಾವುದೇ ಉದ್ಯೋಗ ಪಡೆದಿಲ್ಲ ಎಂದು ಕಡ್ಡಾಯವಾಗಿ ಘೋಷಣಾ ಪತ್ರ ಸಲ್ಲಿಸಬೇಕು ಎಂದು ಉದ್ಯೋಗ ವಿನಿಮಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಆಹಾರ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ ನಾಯಕ ಸೇರಿದಂತೆ ಹೆಸ್ಕಾಂ, ಜಿಲ್ಲಾ ಪಂಚಾಯತ್, ಸಾರಿಗೆ ಸಂಸ್ಥೆ, ವಿವಿಧ ಇಲಾಖೆಯ ಅಧಿಕಾರಿಗಳು, ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಿತಿ ಸದಸ್ಯರು, ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ