ಪ್ರಗತಿವಾಹಿನಿ ಸುದ್ದಿ: ಎಸ್ ಬಿಐ ಬ್ಯಾಂಕ್ ಸಿಬ್ಬಂದಿ ಎಟಿಎಂ ಗೆ ಹಣ ತುಂಬಲೆಂದು ಬಂದಿದ್ದ ವೇಳೆ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ, ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಬ್ಯಾಂಕ್ ಸಿಬ್ಬಂದಿಗಳು ಸಾವನ್ನಪ್ಪಿರುವ ಘಟನೆ ಬೀದರ್ ನಲ್ಲಿ ನಡೆದಿದೆ.
ಗಿರೀಶ್ ಹಾಗೂ ಶಿವಕುಮಾರ್ ಮೃತರು. ಹಾಡಹಗಲೇ ಎಸ್ ಬಿ ಐ ಏಜೆನ್ಸಿ ಸಿಬ್ಬಂದಿ ಮೇಲೆ ಹಂತಕರು ಗುಂಡಿನ ದಾಳಿ ನಡೆಸಿ, 93 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ.
ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮತ್ತೋರ್ವ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಬ್ಯಾಂಕ್ ಸಿಬ್ಬಂದಿಗಳು ಎಂದಿನಂತೆ ವಾಹನದಲ್ಲಿ ಎಟಿಎಂಗೆ ಹಣ ಹಾಕಲೆಂದು ಬಂದಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಈ ದಾಳಿ ನಡೆಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಎಸ್ ಪಿ ಪ್ರದೀ ಗುಂಟಿ ಭೇಟಿ ನೀಡಿದ್ದಾರೆ. ಬೀದರ್ ಜಿಲ್ಲೆಯ ಗಡಿ ಭಾಗದಲ್ಲಿ ಪೊಲೀಸರು ನಾಕಾಬಂದಿ ಹಾಕಿ, ಹಂತಕರನ್ನು ಹಿಡಿಯಲು ಯತ್ನಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ