ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಟಿಪ್ಪು ಸುಲ್ತಾನ್ ನನ್ನು ಮತಾಂಧ, ಕ್ರೂರಿ ಎಂದು ಜರಿದಿರುವ ಹಿಂದೂ ಜನಜಾಗೃತಿ ಸಮಿತಿ, ಆತನ ಕುರಿತ ಪಾಠವನ್ನು ಪಠ್ಯಪುಸ್ತಕದಿಂದ ತೆಗೆದುಹಾಕುವ ಯಡಿಯೂರಪ್ಪ ಸರ್ಕಾರದ ನಿರ್ಣಯ ಅತ್ಯಂತ ಸ್ವಾಗತಾರ್ಹವಾಗಿದೆ ಎಂದಿದೆ.
ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಈ ಸಂಬಂಧ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಕಾಲಾವಧಿಯಲ್ಲಿ ಮುಸಲ್ಮಾನರ ಮತಕ್ಕಾಗಿ ಇತಿಹಾಸದಲ್ಲಿ ಅತ್ಯಂತ ಕ್ರೂರಿ, ಮತಾಂಧ, ಅಸಹಿಷ್ಣು, ಕನ್ನಡ ವಿರೋಧಿ ಟಿಪ್ಪು ಸುಲ್ತಾನನನ್ನು ಅನಗತ್ಯವಾಗಿ ವೈಭವೀಕರಿಸಲಾಗಿದೆ. ಅವನನ್ನು ಮೈಸೂರು ಹುಲಿ, ಸ್ವಾತಂತ್ರ್ಯ ಹೋರಾಟಗಾರ, ಉತ್ತಮ ಆಡಳಿತಗಾರ ಹೀಗೆ ಇತಿಹಾಸವನ್ನು ತಿರುಚಿ ಜನರಿಗೆ ಸುಳ್ಳು ಇತಿಹಾಸವನ್ನು ತಿಳಿಸುವ ಮತ್ತು ಈ ಮೂಲಕ ಮಕ್ಕಳಿಗೆ ನಕಲಿ ಇತಿಹಾಸವನ್ನು ಕಲಿಸುವ ಪ್ರಯತ್ನ ನಡೆದಿತ್ತು.
ಈಗ ಯಡಿಯುರಪ್ಪನವರು ಇಂತಹ ಸುಳ್ಳು ಮತ್ತು ತಿರುಚಿದ ಟಿಪ್ಪುವಿನ ಇತಿಹಾಸವನ್ನು ಶಾಲಾ ಪಠ್ಯಕ್ರಮದಿಂದ ತೆಗೆದು ಹಾಕುವ ನಿರ್ಣಯ ತೆಗೆದುಕೊಂಡಿರುವುದು ಅತ್ಯಂತ ಸ್ವಾಗತಾರ್ಹ ನಿರ್ಣಯವಾಗಿದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ಬೆಂಬಲಿಸುತ್ತದೆ ಎಂದಿದ್ದಾರೆ.
ಇದರ ಜೊತೆಗೆ ಮೈಸೂರು -ಬೆಂಗಳೂರು ನಡುವೆ ಸಂಚರಿಸುವ ಟಿಪ್ಪು ಎಕ್ಸಪ್ರೆಸ್ ರೈಲಿನ ಹೆಸರನ್ನು ಬದಲಾಯಿಸಿ, ಕೃಷ್ಣರಾಜ ಒಡೆಯರ್ ಹೆಸರನ್ನು ಇಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.
ಈ ಮಧ್ಯೆ ರಾಜ್ಯದಲ್ಲಿ ಟಿಪ್ಪು ಜಯಂತಿ ಕೈಬಿಡುವ ಮತ್ತು ಪಠ್ಯದಿಂದ ಆತನ ಪಾಠವನ್ನು ತೆಗೆಯುವ ಕುರಿತು ಬಿಜೆಪಿ ಸರಕಾರ ನಿರ್ಣಯ ತೆಗೆದುಕೊಂಡಿದೆ. ಇದನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ