ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಸಿ.ಟಿ. ರವಿ ಅವಾಚ್ಯ ಶಬ್ಧ ಬಳಸಿರುವುದು ಸರಕಾರಿ ಕ್ಯಾಮೆರಾದಲ್ಲೇ ರೆಕಾರ್ಡ್ ಆಗಿದೆ ಎಂದು, ತನಿಖಾ ಸಂಸ್ಥೆ ಸಿಒಡಿ ಮೂಲಗಳನ್ನು ಉಲ್ಲೇಖಿಸಿ ಕನ್ನಡಪ್ರಭ ವರದಿ ಮಾಡಿದೆ.
ಬೆಳಗಾವಿಯ ಸವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಯುತ್ತಿದ್ದ ವೇಳೆ ಡಿಸೆಂಬರ್ 19ರಂದು ಸಿ.ಟಿ. ರವಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಅವಾಚ್ಯ ಶಬ್ಧ ಬಳಸಿ ನಿಂದಿಸಿದ್ದಾಗಿ ಆರೋಪಿಸಲಾಗಿತ್ತು. ಈ ಕುರಿತು ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಸರಕಾರ ಪ್ರಕರಣವನ್ನು ಸಿಒಡಿ ತನಿಖೆಗೆ ಆದೇಶಿಸಿದೆ.
ತನಿಖೆ ವೇಳೆ ಸರಕಾರಿ ಕ್ಯಾಮೆರಾ ರೆಕಾರ್ಡ್ ಗಳನ್ನು ಪಡೆದಿರುವ ಸಿಒಡಿ ತಂಡ ಅದನ್ನು ಪರಿಶೀಲಿಸಿದಾಗ ಸಿ.ಟಿ.ರವಿ ಅವಾಚ್ಯ ಶಬ್ಧ ಬಳಸಿರುವುದು ದೃಢವಾಗಿದೆ. 7 ಬಾರಿ ಅವರು ಅದೇ ಪದವನ್ನು ಬಳಸಿದ್ದಾರೆ. ಈಗ ಅವರ ಧ್ವನಿ ಪರೀಕ್ಷೆ ಮಾಡಿ, ಅದನ್ನು ಎಫ್ ಎಸ್ ಎಲ್ ಗೆ ಕಳಿಸಬೇಕಿದೆ ಎಂದು ಸಿಒಡಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಕನ್ನಡ ಪ್ರಭ ವರದಿ ಮಾಡಿದೆ.
ಧ್ವನಿ ರೆಕಾರ್ಡ್ ಮಾಡಲು ಸಿ.ಟಿ.ರವಿ ಒಪ್ಪಿಗೆ ನೀಡುತ್ತಿಲ್ಲ. ಹಾಗಾಗಿ ನ್ಯಾಯಾಲಯದ ಮೊರೆ ಹೋಗಲಾಗಿದೆ. ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ಸಿ.ಟಿ.ರವಿ ಧ್ವನಿ ಪಡೆದು ಎಫ್ ಎಸ್ ಎಲ್ ಗೆ ಕಳಿಸಲು ಸಿಒಡಿ ನಿರ್ಧರಿಸಿದೆ ಎಂದು ತಿಳಿಸಿದೆ. ತಾವು ಅಂತಹ ಶಬ್ಧ ಬಳಸಿಯೇ ಇಲ್ಲ ಎಂದು ಸಿ.ಟಿ.ರವಿ ಪದೇ ಪದೆ ಹೇಳುತ್ತ ಬಂದಿದ್ದರು.
ಖಾಸಗಿ ಟಿವಿ ಕ್ಯಾಮೆರಾಗಳಲ್ಲಿ ಈಗಾಗಲೆ ರೆಕಾರ್ಡ್ ಆಗಿದ್ದು, ಅದು ಅಧಿಕೃತವಲ್ಲ, ಸರಕಾರಿ ಕಾಮೆರಾಗಳಲ್ಲಿ ರೆಕಾರ್ಡ್ ಆಗಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದರು. ಅಲ್ಲದೆ ಸಿಒಡಿ ತಂಡಕ್ಕೆ ಸದನದ ಒಳಗೆ ಪಂಚನಾಮೆ ಮಾಡಲು ಅನುನಮತಿ ನಿರಾಕರಿಸಿದ್ದರು. ಈಗ ಸರಕಾರಿ ಕ್ಯಾಮೆರಾದಲ್ಲೇ ರೆಕಾರ್ಡ್ ಆಗಿದ್ದು ನಿಜವಾದರೆ ಬಸವರಾಜ ಹೊರಟ್ಟಿ ಅವರ ನಿಲುವು ಏನಿರಲಿದೆ ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ