Politics

*ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಖಚಿತ: ಬಿಜೆಪಿ ಹೋರಾಟ ಮತ್ತೆ ಆರಂಭ: ವಿಪಕ್ಷ ನಾಯಕ ಆರ್.ಅಶೋಕ್*

ಪ್ರಗತಿವಾಹಿನಿ ಸುದ್ದಿ: ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಆಸ್ತಿಗಳನ್ನು ವಶಪಡಿಸಿಕೊಂಡಿದ್ದರೂ, ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪ್ರಕರಣ ಮುಚ್ಚಿಹಾಕಲು ಲೋಕಾಯುಕ್ತ ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ವಿರುದ್ಧ ಬಿಜೆಪಿ ತೀವ್ರ ಹೋರಾಟ ಮಾಡಿದೆ. ಮುಡಾ ಹಗರಣದಲ್ಲಿ 4-5 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ. ಸಿಎಂ ಸಿದ್ದರಾಮಯ್ಯ 14 ಸೈಟು ವಾಪಸ್‌ ನೀಡಿರುವುದರಿಂದ ತಪ್ಪಾಗಿದೆ ಎಂಬುದು ಸಾಬೀತಾಗಿದೆ. ಜಾರಿ ನಿರ್ದೇಶನಾಲಯ ಆಸ್ತಿಗಳನ್ನು ವಶಕ್ಕೆ ಪಡೆದಿದ್ದರೂ, ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಲಾಗಿದೆ. ಇದರಲ್ಲಿ ಅಧಿಕಾರಿಗಳ ತಪ್ಪು ಎನ್ನಲಾಗುತ್ತಿದೆ. ಆದರೆ ಇದರ ಹಿಂದೆ ಸಿಎಂ ಸಿದ್ದರಾಮಯ್ಯ ಇರುವುದನ್ನು ಮುಚ್ಚಿಹಾಕಲಾಗುತ್ತಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದರು.

ಲೋಕಾಯುಕ್ತ ಪೊಲೀಸರು ರಾಜ್ಯ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಾರೆ. ಪೊಲೀಸರಿಗೂ ವರ್ಗಾವಣೆ, ಬಡ್ತಿ ಬೇಕಿರುತ್ತದೆ. ಆದ್ದರಿಂದ ಈ ರೀತಿ ತನಿಖೆ ನಡೆಯುತ್ತಿದೆ. ಪೊಲೀಸರು ವರದಿ ನೀಡಿದರೂ ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ ಚಿಟ್‌ ನೀಡುವುದು ಖಚಿತ ಎಂದರು.

ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಮಾತ್ರ ನಿಜಾಂಶ ಹೊರಬರಲಿದೆ. ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಎಸ್‌ಐಟಿ ಕ್ಲೀನ್‌ ಚಿಟ್‌ ನೀಡಿರುವಾಗ ಮುಖ್ಯಮಂತ್ರಿಗೆ ಕ್ಲೀನ್‌ ಚಿಟ್‌ ನೀಡುವುದು ಖಚಿತ. ಆದ್ದರಿಂದ ಹೋರಾಟವನ್ನು ಮತ್ತೆ ಆರಂಭಿಸುತ್ತೇವೆ. ತನಿಖೆಯನ್ನು ಸಿಬಿಐಗೆ ವಹಿಸುವವರೆಗೂ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಸುಳ್ಳು ಸುದ್ದಿ

ಪಕ್ಷದಲ್ಲಿ ಗೊಂದಲ ಇರುವುದು ನಿಜ. ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಶ್ರೀರಾಮುಲು ಅವರೊಂದಿಗೆ ನಾನು ಹಾಗೂ ಬಸವರಾಜ ಬೊಮ್ಮಾಯಿ ಚರ್ಚಿಸಲಿದ್ದೇವೆ. ನಮ್ಮಲ್ಲಿ ಯಾವುದೇ ಟೀಮ್‌ ಇಲ್ಲ. ನಾನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಯಾವುದೇ ದೂರು ನೀಡಿಲ್ಲ. ಆದರೂ ದೂರು ನೀಡಿದ್ದೇನೆ ಎಂದು ಸುಳ್ಳಾಗಿ ಪತ್ರಿಕೆಯಲ್ಲಿ ಬರೆಯಲಾಗಿದೆ. ಒಕ್ಕಲಿಗರು ಪ್ರತ್ಯೇಕವಾಗಿ ಸಭೆ ಮಾಡಿಲ್ಲ ಅಥವಾ ಗುರುತಿಸಿಕೊಂಡಿಲ್ಲ. ಇದು ಕೂಡ ಸುಳ್ಳು ಸುದ್ದಿ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button