Belagavi NewsBelgaum NewsKarnataka NewsPolitics

*ಅಪಘಾತದ ಬಗ್ಗೆ ಸಂಶಯ ವ್ಯಕ್ತಪಡಿಸುವವರಿಗೆ ತಿರುಗೇಟು ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಪಘಾತದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿರುವವರು ಹೃದಯಹೀನರು ಅಂತಾ ಹೇಳಬಹುದು. ಸಾವಿನಲ್ಲೂ ರಾಜಕಾರಣ ಮಾಡುವವರಿಗೆ ಉತ್ತರಿಸುವ ಅವಶ್ಯಕತೆ ಇಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರೋಧಿಗಳ ವಿರುದ್ಧ ಕಿಡಿಕಾರಿದರು.

ಕಾರು ಅಪಘಾತದಲ್ಲಿ ಗಾಯಗೊಂಡು ಕಳೆದ 13 ದಿನಗಳಿಂದ ಬೆಳಗಾವಿ ವಿಜಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,ಕಾರು ಅಪಘಾತ ಪ್ರಕರಣದ ವಿಶೇಷ ತನಿಖೆಗೆ ನಾನು ಆಗ್ರಹಿಸುವುದಿಲ್ಲ. ದೇವರ ದಯೆ, ಕ್ಷೇತ್ರದ ಮತದಾರರು, ಮಠಾಧೀಶರ ಆಶೀರ್ವಾದದಿಂದ ಇವತ್ತು ಆರೋಗ್ಯವಾಗಿ ಆಸ್ಪತ್ರೆಯಿಂದ ಹೊರಗೆ ಬಂದಿದ್ದೇನೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯದ ನನ್ನ ಇಲಾಖೆ ಜವಾಬ್ದಾರಿ ಹೊತ್ತುಕೊಂಡು ಇನ್ನೊಮ್ಮೆ ಕಾರ್ಯಪ್ರವೃತ್ತ ಆಗುತ್ತೇನೆ ಎಂದು ತಿಳಿಸಿದರು.

 ಮೊದಲಿಗೆ ಕರ್ನಾಟಕ ಮಹಾಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ನನಗೆ ಆಗಬಾರದ ದುರ್ಘಟನೆ ಸಂಭವಿಸಿತು. ಜೀವನದ ಕೊನೆ ಹಂತವನ್ನು ನೋಡಿ ಹೋರಾಟ ಮಾಡಿ ಮತ್ತೆ ಬದುಕಿ ಹೊರಗೆ ಬರುತ್ತಿದ್ದೇನೆ. ಇದಕ್ಕೆಲ್ಲಾ ನಮ್ಮ ಹಿರಿಯರು, ತಂದೆ ತಾಯಿಗಳ ಆಶೀರ್ವಾದವೇ ಕಾರಣ. ನನ್ನ ಬದುಕಿನ ಹೋರಾಟದ ಸಂದರ್ಭದಲ್ಲಿ ನಾಡಿನ ಹಲವಾರು ಮಠಾಧೀಶರು, ಪೂಜ್ಯರು ಆಸ್ಪತ್ರೆಗೆ ಬಂದು ಶೀಘ್ರವೇ ಗುಣಮುಖರಾಗುವಂತೆ ಆಶೀರ್ವಾದ ಮಾಡಿದ್ದು, ನನಗೆ ಬಹಳಷ್ಟು ಶಕ್ತಿ ಮತ್ತು ಧೈರ್ಯ ತಂದಿತು ಎಂದು ನೆನಪಿಸಿದರು.

ಅದೇ ರೀತಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಪರಿಷತ್ ಸದಸ್ಯರು, ಮಾಜಿ ಶಾಸಕರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಆಗಮಿಸಿ ನನ್ನ ಆರೋಗ್ಯ ವಿಚಾರಿಸಿದರು‌. ಅವರಿಗೆಲ್ಲಾ ನನ್ನ ಧನ್ಯವಾದ ಸಲ್ಲಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ನನ್ನ ಪುಣ್ಯವೋ ಏನೋ ಗೊತ್ತಿಲ್ಲ. ವಿಜಯಾ ಆಸ್ಪತ್ರೆಯ ಡಾ. ರವಿ ಪಾಟೀಲ ಮತ್ತು ಅವರ ಎಲ್ಲ ವೈದ್ಯರು, ಸಿಬ್ಬಂದಿಗಳು ನನಗೆ ಇಂಥ ಅಪಘಾತ ಆಗಿದೆ ಎಂಬ ಭಾವನೆ ಒಂದು ಕ್ಷಣ ಬರದಂತೆ ಧೈರ್ಯ ತುಂಬಿ ಚಿಕಿತ್ಸೆ ನೀಡಿದರು. ಹಾಗಾಗಿ, ಅವರಿಗೆ ನಿಜವಾದ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಗುರುಹಿರಿಯರು, ಮತದಾರ ಬಾಂಧವರು ಪ್ರತಿನಿತ್ಯ ಪೂಜೆ ಸಲ್ಲಿಸಿ ನನ್ನ ಆರೋಗ್ಯ ಸುಧಾರಣೆ ಆಗಲಿ ಎಂದು ಪ್ರಾರ್ಥಿಸಿದರು‌. ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯದ ಜನರಿಗೆ ವಿಶೇಷ ಧನ್ಯವಾದ ಸಲ್ಲಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಅದೇ ರೀತಿ ನನ್ನ ಕುಟುಂಬದಲ್ಲಿ ನನ್ನ ತಾಯಿ, ತಮ್ಮ, ಸೊಸೆ, ಮಗ, ಅಕ್ಕ ತಂಗಿಯರು, ಮಾವಂದಿರು ಬೆನ್ನಿಗೆ ನಿಂತು ಧೈರ್ಯ ತುಂಬಿದರು. ಜೊತೆಗೆ ಮಾಧ್ಯಮಗಳ ಸಹಕಾರ ಕೂಡ ನನಗೆ ಸ್ಫೂರ್ತಿ ತುಂಬಿತು. ಖಂಡಿತವಾಗಲೂ ಆ ಕ್ಷಣ ನೆನಪು ಮಾಡಿಕೊಂಡರೆ ಇದು ನನಗೆ ಪುನರ್ಜನ್ಮವೇ ಸರಿ ಎಂದರು.

ವೈದ್ಯರು ಹೇಳಿದಷ್ಟು ದಿನ ವಿಶ್ರಾಂತಿ ತೆಗೆದುಕೊಳ್ಳಲು ಮನಸ್ಸಿದೆ. ಆದರೆ, ಜವಾಬ್ದಾರಿ ಹೆಚ್ಚಿದೆ. ಮಾರ್ಚ್ ನಲ್ಲಿ ಬಜೆಟ್ ಮಂಡನೆ ಮಾಡಬೇಕು. ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಒಳ್ಳೆಯ ರೀತಿ ಕೆಲಸ ಮಾಡುತ್ತಿದೆ. ಈಗಾಗಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕೆಲಸ ಮಾಡುತ್ತಿದ್ದಾನೆ. ಇನ್ನೂ ಮೂರು ವಾರ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಎಷ್ಟು ದಿನ ಆಗುತ್ತದೆಯೋ ಅಷ್ಟು ಮಾಡುತ್ತೇನೆ ಎಂದರು.

ಪ್ರಯಾಗ ರಾಜ್ ನಲ್ಲಿ ಎಲ್ಲರೂ ಪುಣ್ಯಸ್ನಾನ ಮಾಡುತ್ತಿದ್ದರು. ವಿಶೇಷವಾಗಿ ಸಂಕ್ರಾಂತಿ ಹಿನ್ನೆಲೆಯಲ್ಲಿ ನನ್ನ ತಮ್ಮನ ಮನೆದೇವರು ಹಟ್ಟಿಹೊಳಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೋಗಿ ಅಲ್ಲಿ ಮಲಪ್ರಭಾ ನದಿ ದಂಡೆಯಲ್ಲಿ ಮನೆಯವರೆಲ್ಲರೂ ಪುಣ್ಯಸ್ನಾನ ಮಾಡಲು ನಿಶ್ಚಯಿಸಿದ್ದೇವು. ಬೆಳಿಗ್ಗೆ 7 ಗಂಟೆಯೊಳಗೆ ಸ್ನಾನ ಮಾಡುವುದಾಗಿ ಅಂದು ರಾತ್ರಿ 10 ಗಂಟೆಗೆ ನಿರ್ಧಿರಿಸಿದ್ದೇವು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. 

ರಾತ್ರಿ 10.30ಕ್ಕೆ ನಾವು ಬೆಂಗಳೂರಿನಿಂದ  ಬೆಳಗಾವಿಗೆ ಹೋಗಲು ದಿಢೀರ್ ನಿರ್ಧಾರ ತೆಗೆದುಕೊಂಡಿದ್ದರಿಂದ ಎಸ್ಕಾರ್ಟ್ ಬೇಡ, ನಿಧಾನವಾಗಿ ಹೋಗೋಣ ಎಂದು ತಮ್ಮ ಚನ್ನರಾಜ್ ಹೇಳಿದ್ದರಿಂದ ಎಸ್ಕಾರ್ಟ್ ಬಿಟ್ಟು ಬಂದೇವು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು. 

ಫೈನಾನ್ಸ್ ಹಾವಳಿ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಇದು 6 ತಿಂಗಳ ಹಿಂದೆ ನನ್ನ ಗಮನಕ್ಕೆ ಬಂದಿತ್ತು. ಕೂಡಲೇ ಬೆಳಗಾವಿ ಪೊಲೀಸ್ ಆಯುಕ್ತರು, ಡಿಸಿಪಿ, ಎಸಿಪಿಗಳು ಹಾಗೂ ನನ್ನ ಕ್ಷೇತ್ರದ ನಾಲ್ವರು ಸಿಪಿಐಗಳನ್ನು ಕರೆಸಿ ಸಭೆ ಮಾಡಿದ್ದೆ. ಅಲ್ಲದೇ ಲಿಖಿತವಾಗಿ ದೂರು ಕೊಟ್ಟು, ಈ ಸಂಬಂಧ ಗಮನಹರಿಸುವಂತೆ ಸೂಚಿಸಿದ್ದೆ. ಅಲ್ಲದೇ ಕಿರುಕುಳ ನೀಡುವವರನ್ನು ಮನೆಗೆ ಕರೆಸಿ ಬುದ್ಧಿವಾದ ಹೇಳಿದ್ದೆ. ಇನ್ನೊಮ್ಮೆ ಈ ರೀತಿ ಮಾಡಿದ್ದು ಕಂಡು ಬಂದರೆ ನಿಮ್ಮ ವಿರುದ್ಧ ದೂರು ನೀಡುತ್ತೇನೆ ಎಂದು ಎಚ್ಚರಿಸಿದ್ದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button