ಪ್ರಗತಿವಾಹಿನಿ ಸುದ್ದಿ: ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಕ್ಯಾನ್ಸರ್ ಕಾಯಿಲೆ ಗೆದ್ದು ಬಂದಿದ್ದಾರೆ. ಅಮೆರಿಕಾಗೆ ಚಿಕಿತ್ಸೆಗೆ ತೆರಳಿದ್ದ ಶಿವರಾಜ್ ಕುಮಾರ್, ಶಸ್ತ್ರ ಚಿಕಿತ್ಸೆ ಪಡೆದು ಕ್ಯಾನ್ಸರ್ ನಿಂದ ಸಂಪೂರ್ಣ ಗುಣಮುಖರಾಗಿದ್ದು, ತಾಯ್ನಾಡಿಗೆ ವಾಪಾಸ್ ಆಗಿದ್ದಾರೆ.
ಒಂದು ತಿಂಗಳ ಬಳಿಕ ನಟ ಶಿವರಾಜ್ ಕುಮಾರ್ ಅಮೆರಿಕಾದಿಂದ ಬೆಂಗಳೂರಿಗೆ ಆಗಮಿಸಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಚಿತ್ರರಂಗದ ಕಲಾವಿದರು, ಅಭಿಮಾನಿಗಳು ಶಿವಣ್ಣನಿಗೆ ಅದ್ದೂರಿ ಸ್ವಾಗತ ಕೋರಿದರು.
ಬೆಂಗಳೂರಿನ ತಮ್ಮ ನಿವಾಸಕ್ಕೆ ಆಗಮಿಸಿದ ಶಿವರಾಜ್ ಕುಮಾರ್, ಸುದ್ದಿಗೋಷ್ಠಿ ನಡೆಸಿದ್ದು, ಕಿಂಗ್ ಈಸ್ ಬ್ಯಾಕ್ ಎಂದು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರ ಆಶಿರ್ವಾದ, ಧೈರ್ಯದಿಂದ ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ. ವೈದ್ಯರು ಕೂಡ ನಿಮ್ಮ ಧೈರ್ಯ ಮೆಚ್ಚಬೇಕು ಎಂದಿದ್ದಾರೆ. ಅವರಿಗೂ ಸ್ವಲ್ಪ ಆತಂಕವಿತ್ತು. ಚಿಕಿತ್ಸೆ ಬಳಿಕ ಸಂಪೂರ್ಣ ಗುಣಮುಖನಾಗಿದ್ದು, ವೈದ್ಯರೂ ಅಚ್ಚರಿಪಟ್ಟಿದ್ದಾರೆ. ತುಂಬಾ ಜನರು ನನಗೆ ಧೈರ್ಯ ತುಂಬಿದ್ದರು. ಎರಡ್ಮೂರು ದಿನ ಮಾತ್ರ ಲಿಕ್ವಿಡ್ ಫುಡ್ ನಲ್ಲಿಯೇ ಇದ್ದೆ ಎಂದು ಹೇಳಿದರು.
ಜೀವನ ಒಂದು ಪಾಠವಿದ್ದಂತೆ. ಜೀವನದಲ್ಲಿ ಇದೆಲ್ಲವೂ ತಾನಾಗಿಯೇ ಬರುತ್ತದೆ. ಎದುರಿಸುತ್ತಾ ಹೋಗಬೇಕು. ನಾನು ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತಿದ್ದೇನೆ ಎಂದರು.
ಮುಂದಿನ ಪ್ರಾಜೆಕ್ಟ್ ಬಗ್ಗೆ ತಯಾರಿ ನಡೆಸಬೇಕು. 131ನೇಸಿನಿಮಾ ಬಗ್ಗೆ ಪ್ಲಾನ್ ಮಾಡಬೇಕು. ರಾಮ್ ಚರಣ್ ತೇಜಾ ಜೊತೆ ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ