ಪ್ರಗತಿವಾಹಿನಿ ಸುದ್ದಿ, ಅಗಸಗಿ: ತಾಲೂಕಿನ ಕಾಕತಿ ಪೊಲೀಸ್ ಠಾಣೆ ಸಿಬ್ಬಂದಿಗೆ ನೂತನವಾಗಿ 1.90 ಕೋಟಿ ಲಕ್ಷ ರೂಪಾಯಿಗಳಲ್ಲಿ ನಿರ್ಮಾಣ ಮಾಡಿರುವ 12 ವಸತಿ ಗೃಹಗಳನ್ನು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
ಬೆಳಗಾವಿಯಲ್ಲಿ ಡ್ರಗ್ಸ್ ಮಾರಾಟ ದೊಡ್ಡ ದಂಧೆಯಾಗಿದ್ದು, ಇದನ್ನು ಪೋಷಿಸುವವರು ಯಾರೇ ಆಗಿದ್ದರೂ ಅವರ ವಿರುದ್ದ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಪೊಲೀಸರು ಭಾಗಿಯಾದ್ದರೆ ಅವರನ್ನು 24 ಗಂಟೆಯಲ್ಲಿ ಅಮಾನತ್ತು ಮಾಡಲಾಗುವುದು ಎಂದು ಬೊಮ್ಮಾಯಿ ಎಚ್ಚರಿಕೆ ನೀಡಿದರು.
ಸೂಕ್ಷ್ಮ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ಮಾಡುವಂತಹ ಎಫ್ಎಸ್ಎಲ್ ಲ್ಯಾಬ್ ಗಳು ಸಧ್ಯ ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಪ್ರತಿ ಜಿಲ್ಲೆಗಳಿಗೆ ಪ್ರಾರಂಭ ಮಾಡಲಾಗುವುದು. ಅಲ್ಲದೆ ಪ್ರತಿ ತಾಲೂಕಿಗೆ ಬೇಸಿಕ್ ಲ್ಯಾಬೋರೇಟರಿ ತೆರೆಯುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಅಭಿವೃದ್ಧಿ ಹೊಂದಿರುವ ರಾಷ್ಟ್ರದ ಪೊಲೀಸರಿಗೆ ದೊರಕಿರುವ ತಂತ್ರಜ್ಞಾನ ರಾಜ್ಯದ ಪೊಲೀಸರಿಗೂ ನೀಡಬೇಕೆಂಬ ಮಹಾ ಬಯಕೆಯನ್ನು ಮುಖ್ಯಮಂತ್ರಿಗಳು ಹೊಂದಿದ್ದಾರೆ. ಅದಕ್ಕಾಗಿ ಸರಕಾರ ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡುವುದಾಗಿ ಹೇಳಿದರು.
ದೇಶದಲ್ಲೆ ಕರ್ನಾಟಕ ರಾಜ್ಯವು ಪೊಲೀಸರಿಗೆ ವಸತಿ ಕಲ್ಪಿಸುವಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರಸ್ತುತ 60% ರಷ್ಟು ಪೊಲೀಸರಿಗೆ ವಸತಿ ಕಲ್ಪಿಸಿದ್ದು, ಬರುವ 3 ವರ್ಷಗಳಲ್ಲಿ 80% ಗುರಿ ಮುಟ್ಟಿಸಲಾಗುವುದಾಗಿ ಹೇಳಿದರು.
ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ ಸೈನಿಕರಿಗಿಂತ ಹೆಚ್ಚು ಪೋಲಿಸರು ಆಂತರಿಕ ಬದ್ರತೆಗೆಗಾಗಿ ಕರ್ತವ್ಯ ನಿರ್ವಹಿಸುವಾಗ ಮೃತ ಪಟ್ಟಿದ್ದಾರೆ. ಪೊಲೀಸರು 24 ಗಂಟೆ ಕೆಲಸ ಮಾಡುತ್ತಿರುವುದರಿಂದ ನಾವು ಇಂದು ಸುರಕ್ಷಿತವಾಗಿದ್ದೇವೆ. ಅವರಿಗೆ ನೀಡುವ ವಸತಿ ನಿಲಯಗಳು ಸ್ವಂತ ಮನೆ ವಾತಾವರಣದಲ್ಲಿ ವಾಸಿಸುವಂತಿರಬೇಕು. ಚಿಕ್ಕದಾಗಿದ್ದರೂ ಶಾಂತಿಯಿಂದ ಜೀವನ ನಡೆಸುವ ವಾತಾವರಣ ಅಲ್ಲಿ ನೆಲೆಸಬೇಕು ಎಂದರು.
ಶಾಸಕ ಅನಿಲ ಬೆನಕೆ ಮಾತನಾಡಿ, ಕಾಕತಿ ಪೊಲೀಸ್ ಠಾಣೆಯು 50 ವರ್ಷಕ್ಕಿಂತ ಹೆಚ್ಚು ಹಳೆಯದಾಗಿದ್ದು, ಮಳೆಗಾಲದಲ್ಲಿ ಸಂಪೂರ್ಣ ಶೀತಲಗೊಂಡು ಕಂಪ್ಯೂಟರ್ ಸೇರಿದಂತೆ ಇನ್ನಿತರ ತಂತ್ರಜ್ಞಾನ ಬಳಸಲು ಪೊಲೀಸರಿಗೆ ಅನಾನುಕೂಲವಾಗಿದೆ. ಆದಷ್ಟು ಬೇಗ ಹೊಸ ಕಟ್ಟಡ ಮಂಜೂರಾತಿ ಮಾಡುವಂತೆ ಗೃಹ ಸಚಿವರಿಗೆ ಮನವಿ ಮಾಡಿದರು.
ಪೊಲೀಸರ ಪ್ರಾಮಾಣಿಕ ಕರ್ತವ್ಯದಿಂದಾಗಿ ನಾನು ಶಾಸಕನಾದಾಗಿನಿಂದ ನಗರದಲ್ಲಿ ಒಂದೇ ಒಂದು ಕಲ್ಲು ತೂರಾಟವಾಗಿಲ್ಲವೆಂದು ಬೆನಕೆ ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಸಚಿವ ಶಶಿಕಾಂತ ನಾಯಿಕ, ಐಜಿಪಿ ರಾಘವೇಂದ್ರ ಸುಹಾಸ, ಪೊಲೀಸ್ ಆಯುಕ್ತ ಲೋಕೇಶ್ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಡಿಸಿಪಿ ಯಶೋಧಾ ವಂಟಗೂಡೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ