Kannada NewsKarnataka NewsLatest

ಪೊಲೀಸ್ ಅಧಿಕಾರಿಗಳಿಗೆ ವಿದೇಶದಲ್ಲಿ ತರಬೇತಿ: ಸಚಿವ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ, ಹಿರೇಬಾಗೇವಾಡಿ –  ಆಧುನಿಕ ತಂತ್ರಜ್ಞಾನವನ್ನು ಪ್ರತಿಯೊಬ್ಬ ಸಿಬ್ಬಂದಿ ಅರಿತುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ವಿದೇಶದಲ್ಲೂ ತರಬೇತಿ ಒದಗಿಸುವ ನಿಟ್ಟಿನಲ್ಲಿ ಸ್ಕಾಟ್ಲ್ಯಾಂಡ್, ಪೊಲೆಂಡ್, ಅಮೇರಿಕ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ಕಡೆ ತರಬೇತಿ ನೀಡಲು ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಚರ್ಚೆ ನಡೆಯುತ್ತಿದೆ ಎಂದು ಗೃಹ ಸಚಿವ ಬೊಮ್ಮಾಯಿ ತಿಳಿಸಿದರು.
ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಆವರಣದಲ್ಲಿ ೬.೬೪ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ೩೬ ಪೊಲೀಸ್ ವಸತಿಗೃಹಗಳನ್ನು ಭಾನುವಾರ(ನ.೪) ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ಮೂರು ವರ್ಷಗಳಲ್ಲಿ ೧೬೦೦೦ ಸಿಬ್ಬಂದಿ ಹಾಗೂ ೧೦೦೦ ಕ್ಕೂ ಅಧಿಕ ಪಿ.ಎಸ್.ಐ. ನೇಮಕಾತಿ ಗುರಿಯನ್ನು ಸರ್ಕಾರ ಹೊಂದಿದೆ.
ತಂತ್ರಜ್ಞಾನ ಬದಲಾದಂತೆ ಅಪರಾಧದ ಸ್ವರೂಪ ಬದಲಾಗುತ್ತಿದೆ. ಅದಕ್ಕೆ ಅನುಗುಣವಾಗಿ ಸೈಬರ್ ಪೊಲೀಸ್ ಠಾಣೆ ಸ್ಥಾಪಿಸಲಾಗುತ್ತಿದೆ.
ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಗೊಳಿಸಲಾಗುತ್ತಿದೆ. ಅಪರಾಧಗಳ ತನಿಖೆಯ ಸ್ವರೂಪದಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಬರಲಾಗುತ್ತಿದೆ. ವಿಶ್ವದಲ್ಲೇ ಶ್ರೇಷ್ಠ ಪೊಲೀಸ್ ವ್ಯವಸ್ಥೆಯನ್ನಾಗಿ ರೂಪಿಸಲಾಗುವುದು.
ಹಳೆ ಠಾಣೆಗಳನ್ನು ಆಧುನೀಕರಣಗೊಳಿಸಲು ಪ್ರಸ್ತಾವ ಸಲ್ಲಿಸಿದರೆ ಮುಂದಿನ ಬಜೆಟ್ಟಿನಲ್ಲಿ ಅಗತ್ಯ ಅನುದಾನ ಒದಗಿಸಲು ಸರ್ಕಾರ ಸಿದ್ಧವಿದೆ ಎಂದರು.
ಪೊಲೀಸ್ ಸಿಬ್ಬಂದಿ ವಿಶಿಷ್ಟವಾದ ಸೇವೆಯಲ್ಲಿ ತೊಡಗಿರುತ್ತಾರೆ. ಅಪಘಾತ, ಅಪಘಾತ, ಅವಘಡ ಮಾತ್ರವಲ್ಲ ಕೌಟುಂಬಿಕ ಜಗಳ ನಡೆದಾಗಲೂ ಪೊಲೀಸರ ಅಗತ್ಯವಿರುತ್ತದೆ.
ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಕನಿಷ್ಠಪಕ್ಷ ಅವರ ಕುಟುಂಬ ನೆಮ್ಮದಿಯಿಂದ ಇರುವ ಹಾಗೆ ಸೌಲಭ್ಯ ಒದಗಿಸುವುದು ನಮ್ಮ ಕರ್ತವ್ಯವಾಗಿದೆ.
ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಪೊಲೀಸರ ಜತೆ ಸಹಕರಿಸಿದರೆ ಶಾಂತಿಯುತ ವಾತಾವರಣ ನಿರ್ಮಿಸಲು ಸಾಧ್ಯವಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದಕ್ಕೂ ಮುಂಚೆ ಮಾತನಾಡಿದ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ಹಗಲಿರುಳು ಜನಸೇವೆಯಲ್ಲಿ ತೊಡಗಿರುವ ಪೊಲೀಸ್ ಸಿಬ್ಬಂದಿಗೆ ವಸತಿಗೃಹಗಳನ್ನು ಒದಗಿಸಿರುವುದು ಸಂತೋಷದ ವಿಷಯವಾಗಿದೆ ಎಂದರು.
ಉತ್ತರ ವಲಯ ಐಜಿಪಿ ಎಚ್.ಜಿ.ರಾಘವೇಂದ್ರ ಸುಹಾಸ್, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ,  ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕಲಾವತಿ ಧರೆಣ್ಣವರ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್ ಸ್ವಾಗತಿಸಿದರು. ಡಿಸಿಪಿ ಯಶೋಧಾ ಒಂಟಗೋಡಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button