ಪ್ರಗತಿವಾಹಿನಿ ಸುದ್ದಿ: ದುಲ್ಕರ್ ಸಲ್ಮಾನ್ ಅಭಿನಯದ ಲಕ್ಕಿ ಭಾಸ್ಕರ್ ಸಿನಿಮಾದಿಂದ ಪ್ರೇರಿತರಾದ ಆರು ಜನರು ಬ್ಯಾಂಕ್ ಹಣ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಎಟಿಎಂಗೆ ಹಣ ಹಾಕುವ ಕೆಲಸ ಆರಂಭಿಸಿ ಅದೇ ಎಟಿಎಂ ನಿಂದ ಹಣ ದೋಚುತ್ತಿದ್ದ ಆರು ಆರೋಪಿಗಳನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶಿವು, ಸಮೀರ್, ಮನೋಹರ್, ಗಿರೀಶ್, ಜಗ್ಗೇಶ್, ಜಸ್ವಂತ್ ಎಂದು ಗುರುತಿಸಲಾಗಿದೆ.
ಲಕ್ಕಿ ಭಾಸ್ಕರ್ ಸಿನಿಮದಲ್ಲಿ ಕಥಾನಾಯಕ ಭಾಸ್ಕರ್ ಬ್ಯಾಂಕ್ ನಿಂದ ಹೇಗೆ ಹಣ ಕದ್ದು ಅದನ್ನು ಉಪಯೋಗಿಸಿಕೊಂಡು ಬಳಿಕ ವಾಪಸ್ ಹೇಗೆ ಬ್ಯಾಂಕ್ ನಲ್ಲಿ ತಂದಿಡುತ್ತಿದ್ದನೋ ಅದೇ ಮಾದರಿಯಲ್ಲಿ ಕಳ್ಳತನ ಮಾಡಲು ಹೋಗಿ ಆರು ಜನ ಸಿಕ್ಕಿಬಿದ್ದಿದ್ದಾರೆ.
ಬಂಧಿತರಲ್ಲಿ ಇಬ್ಬರು ಕ್ಯಾಶಿಯರ್ ಆಗಿ, ಇಬ್ಬರು ಎಟಿಎಂ ಹಣ ಹಾಕೋ ಕೆಲಸ ಮಾಡುವವರಾಗಿ, ಇನ್ನಿಬ್ಬರು ರಿಪೇರಿ ಕೆಲಸವಿದ್ದರೆ ಅದನ್ನು ಸರಿಪಡಿಸುವವರಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಬಿಡುಗಡೆಯಾಗಿದ್ದ ಲಕ್ಕಿ ಭಾಸ್ಕರ್ ಸಿನಿಮಾ ಇವರ ಕಳ್ಳತನದ ಕೃತ್ಯಕ್ಕೆ ಇನಷ್ಟು ಪ್ರೇರಣೆ ನೀಡಿದಂತಾಗಿದೆ. ಎಟಿಎಂಗೆ ಹಣ ಹಾಕುತ್ತಿದ್ದ ಖದೀಮರು ಬಳಿಕ ಅದೇ ಎಟಿಎಂನಿಂದ ಹನ ತೆಗೆದು ಹಣ ಡಬಲ್ ಮಾಡುವ ಪ್ಲಾನ್ ಮಾಡಿದ್ದಾರೆ. ಆಡಿಟಿಂಗ್ ವೇಳೆ ಸಿಕ್ಕಿಹಾಕಿಕೊಳ್ಳಬಾರದು ಎಂದು ವಪಸ್ ಹಣ ತಂದು ಹಾಕುವ ಯೋಜನೆಯನ್ನೂ ರೂಪಿಸಿದ್ದಾರೆ. ಹೀಗೆ ನಾಲ್ಕೈದು ಎಟಿಎಂ ನಿಂದ 43.76 ಲಕ್ಷ ರೂಪಾಯಿ ತೆಗೆದಿದ್ದಾರೆ. ಹೀಗೆ ತೆಗೆದ ಹಣ ಹಂಚಿಕೊಳ್ಳುವ ವೇಳೆ ಜಗಳ ಶುರುವಾಗಿದೆ.
ಗಲಾಟೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಆರೋಪಿಗಳನ್ನು ಹಿಡಿದು ವಿಚಾರಣೆ ನಡೆಸಿದಾಗ ಕಳ್ಳತನದ ರಹಸ್ಯ ಬಯಲಾಗಿದೆ. ಬಂಧಿತರಿಂದ 52 ಲಕ್ಷ ನಗದು, 40 ಲಕ್ಷ ಮೌಲ್ಯದ ಮೂರು ಕಾರು ವಶಕ್ಕೆ ಪಡೆಯಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ