Kannada NewsKarnataka NewsNational

*ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿಖಾನೆ ಮೇಲೆ ಮೇಯ‌ರ್ ದಿಢೀರ್ ದಾಳಿ*

ಪ್ರಗತಿವಾಹಿನಿ ಸುದ್ದಿ : ಕುರಿ ಸಾಕಣೆ ಹೆಸರಿನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿಖಾನೆಗೆ ಮಂಗಳೂರು ಮೇಯ‌ರ್ ದಿಢೀರ್ ದಾಳಿ ನಡೆಸಿದ್ದು ರಾಶಿ ರಾಶಿ ಅಸ್ತಿಪಂಜರಗಳು ಕಂಡು ಶಾಕ್ ಆಗಿದ್ದಾರೆ.

ರಾಜ್ಯದಲ್ಲಿ ಗೋ ಹತ್ಯೆ ನಿಷೇಧದ ಕಾನೂನಿನ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೂ ಕರ್ನಾಟಕದ ಹಲವು ಭಾಗಗಳಲ್ಲಿ ಇಂದಿಗೂ ಅವ್ಯಾಹತವಾಗಿ ಅಕ್ರಮ ಗೋಹತ್ಯೆ ನಡೆಯುತ್ತಿದೆ. ಹೀಗಾಗಿ ಮಂಗಳೂರು ಮಹಾನಗರ ಪಾಲಿಕೆ ಮೇಯ‌ರ್ ಮನೋಜ್ ಕುಮಾರ್ ಅವರ ನೇತೃತ್ವದಲ್ಲಿ ಮಂಗಳೂರಿನ ಕುದ್ರೋಳಿ ಕಸಾಯಿಖಾನೆಗೆ ದಿಢೀ‌ರ್ ದಾಳಿ ನಡೆಸಿದ್ದಾರೆ.

ಕುದ್ರೋಳಿ ಕಸಾಯಿಖಾನೆ ಈ ಹಿಂದೆ ಅಧಿಕೃತವಾಗಿದ್ದರೂ ಹಸಿರು ಪೀಠದ ಆದೇಶದ ಹಿನ್ನಲೆಯಲ್ಲಿ ಕಳೆದ ನಾಲ್ಕು ವರ್ಷದ ಹಿಂದೆ ಬೀಗ ಹಾಕಲಾಗಿತ್ತು. ಆದರೆ ಕಸಾಯಿಖಾನೆ ಪಕ್ಕದ ಖಾಸಗಿ ಜಾಗದಲ್ಲಿ ಅಕ್ರಮವಾಗಿ ಕಸಾಯಿಖಾನೆ ವ್ಯವಹಾರ ನಡೆಸಲಾಗುತ್ತಿದೆ. ಪ್ರತಿನಿತ್ಯ ಗೋವು, ಆಡು, ಕುರಿಗಳನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.

ಈ ಹಿನ್ನಲೆ ಸ್ವತಃ ಮನೋಜ್ ಅವರೇ ಫೀಲ್ಡ್ ಗೆ ಇಳಿದು ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಖಾಸಗಿ ಜಾಗದಲ್ಲಿರುವ ಕುರಿ ಸಾಕಾಣೆ ಕೇಂದ್ರದ ಹೆಸರಿನ ಅನಧಿಕೃತ ಕಟ್ಟಡವನ್ನು ಪರಿಶೀಲನೆ ನಡೆಸಿದಾಗ ದನ, ಆಡು, ಕುರಿಗಳ ರುಂಡಗಳು, ದೇಹದ ಭಾಗಗಳು ಒಂದು ಕೊಣೆಯಿಡೀ ರಾಶಿ ಬಿದ್ದಿರುವುದು ಪತ್ತೆಯಾಗಿದೆ.

ಸಾವಿರಕ್ಕೂ ಅಧಿಕ ಆಡು, ಕುರಿ, ಜಾನುವಾರುಗಳ ರುಂಡ, ದೇಹದ ಭಾಗಗಳು ಪತ್ತೆಯಾಗಿದೆ. ಸದ್ಯ ಕಟ್ಟಡದಲ್ಲಿ ಆಸ್ತಿಪಂಜರವನ್ನು ಕಂಡು ಅಧಿಕಾರಿಗಳು ಶಾಕ್ ಆಗಿದ್ದು, ಸಂಬಂಧಪಟ್ಟವರ ವಿರುದ್ದ ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button