*ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*


ಕಳೆದ ಒಂದು ತಿಂಗಳು ತುಂಬಾ ಕಷ್ಟಕರವಾಗಿತ್ತು
ಪ್ರಗತಿವಾಹಿನಿ ಸುದ್ದಿ: ದೇವರ ದಯೆಯಿಂದ ಸಂಪೂರ್ಣ ಗುಣಮುಖ ಆಗಿದ್ದೇನೆ. ವೈದ್ಯರು 6 ವಾರ ವಿಶ್ರಾಂತಿ ಹೇಳಿದ್ದಾರೆ. ಹಾಗಾಗಿ ಇನ್ನೆರಡು ವಾರಗಳಲ್ಲಿ ಪ್ರಯಾಣ ಆರಂಭಿಸಿ, ಸಾರ್ವಜನಿಕ ಜೀವನಕ್ಕೆ ಮರಳುವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿಯ ಗೃಹಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಳೆದ ಒಂದು ತಿಂಗಳು ತುಂಬಾ ಕಷ್ಟಕರವಾಗಿತ್ತು. ಕ್ಷೇತ್ರದ ಜನರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಶೀಘ್ರವೇ ಜನ ಸೇವೆಗೆ ಮರಳುವೆ ಎಂದರು.

ನಾನು ಕಳೆದ 25 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವೆ. ಜನರ ಮಧ್ಯೆಯೇ ನನ್ನ ದೈನಂದಿನ ಜೀವನ ನಡೆಯುತ್ತಿದೆ. ಈಗಲೂ ದೂರವಾಣಿ ಮೂಲಕ ಜನರ ಸಂಪರ್ಕದಲ್ಲಿರುವೆ. ಜನರ, ದೇವರ ಆಶೀರ್ವಾದದಿಂದ ಸಂಪೂರ್ಣ ಗುಣಮುಖ ಆಗಿರುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮೈಕ್ರೋ ಫೈನಾನ್ಸ್ ಹಾವಳಿಗೆ ತಡೆ
6 ತಿಂಗಳ ಹಿಂದೆಯೇ ಮೈಕ್ರೋ ಫೈನಾನ್ಸ್ ಸಮಸ್ಯೆ ಬಗ್ಗೆ ತಿಳಿದಿತ್ತು. ನಾನು ತಕ್ಷಣವೇ ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದೆ, ಜೊತೆಗೆ ಮೈಕ್ರೋ ಫೈನಾನ್ಸ್ ಸಂಸ್ಥೆಯವರನ್ನು ಕರೆಸಿ ಮಹಿಳೆಯರಿಗೆ ತೊಂದರೆ ನೀಡಬಾರದು ಎಂದು ಬುದ್ದಿ ಹೇಳಿದ್ದೆ. ಇದರ ಮಧ್ಯೆಯೂ ಕ್ಷೇತ್ರದ ಹೊರಗಿನ ಐದಾರು ಮುಖಂಡರು ಫೈನಾನ್ಸ್ ಮಾಡಿಸುತ್ತಿದ್ದರು. ಸುಮಾರು 20 ಸಾವಿರ ಮಹಿಳೆಯರು ಫೈನಾನ್ಸ್ ತೆಗೆದುಕೊಂಡು ಬಿಟ್ಟಿದ್ದರು ಎಂದು ಸಚಿವರು ತಿಳಿಸಿದರು.
ಶೀಘ್ರವೇ ಗೃಹಲಕ್ಷ್ಮೀ ಯೋಜನೆ ಹಣ
ಹಿಂದಿನ ಮಾದರಿಯಂತೆ ಜಿಲ್ಲಾ ಉಪ ನಿರ್ದೇಶಕರ ಮೂಲಕವೇ ಗೃಹಲಕ್ಷ್ಮೀ ಯೋಜನೆ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ತಾಲೂಕು ಪಂಚಾಯಿತಿ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಣ ರವಾನೆಯಾಗುತ್ತಿದ್ದು, ಉಪ ನಿರ್ದೇಶಕರ ಮೂಲಕ ಹಣ ಹಾಕಲಾಗುತ್ತಿದೆ ಎಂದರು.
ಅಭಿಮಾನಿಗಳ ಸಮ್ಮುಖದಲ್ಲಿ ಜನ್ಮದಿನ ಆಚರಣೆ
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕ್ಷೇತ್ರದ ಜನರ ಎದುರು ಕೇಕ್ ಕತ್ತರಿಸುವ ಮೂಲಕ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು. ಜನ್ಮದಿನದ ನಿಮಿತ್ತ ಗೃಹಕಚೇರಿಗೆ ಆಗಮಿಸಿದ್ದ ಕ್ಷೇತ್ರದ ಜನರನ್ನು ಸಚಿವರು ಭೇಟಿಯಾದರು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಚಿವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ