ಪ್ರಗತಿವಾಹಿನಿ ಬೆಳಗಾವಿ -ಇದೇ ಮೊದಲ ಬಾರಿಗೆ ಬೆಳಗಾವಿ ಜಿಲ್ಲಾಡಳಿತ ಅಕ್ರಮ ಬಡಾವಣೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದೆ.
ಬೆಳಗಾವಿಯಲ್ಲಿ 200ಕ್ಕೂ ಹೆಚ್ಚು ಅಕ್ರಮ ಬಡಾವಣೆಗಳು ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ಶಾಸಕ ಅಭಯ ಪಾಟೀಲ ರಾಜ್ಯ ಸರಕಾರಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ರಾಜೇಂದ್ರ 15 ಪಿಡಿಒಗಳನ್ನು ಮನೆಗೆ ಕಳಿಸಿದ್ದಾರೆ. ಇದು ತನಿಖೆಯ ಆರಂಭವಷ್ಟೆ ಎಂದು ಅವರು ಹೇಳಿದ್ದಾರೆ.
ಬೆಳಗಾವಿ ನಗರ ಮತ್ತು ನಗರಕ್ಕೆ ಹೊಂದಿಕೊಂಡಂತೆ ನೂರಾರು ಅಕ್ರಮ ಬಡಾವಣೆಗಳು ತಲೆ ಎತ್ತಿವೆ. ಅಧಿಕೃತ ಬಡಾವಣೆಗಿಂತಲೂ ಅಕ್ರಮ ಬಡಾವಣೆಗಳ ಸಂಖ್ಯೆ ಹೆಚ್ಚಾಗಿದೆ. ಈ ಸಂಬಂಧ ಹಲವು ಬಾರಿ ದೂರು ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ.
ಅಕ್ರಮ ಬಡಾವಣೆ ನಿರ್ಮಿಸಿ 100 ರೂ. ಬಾಂಡ್ ಪೇಪರ್ ಮೇಲೆ ಮಾರಾಟ ಮಾಡಲಾಗುತ್ತಿದೆ. ಈಚೆಗೆ ನಗರಾಭಿವೃದ್ಧಿ ಪ್ರಾಧಿಕಾರವೂ ಅಕ್ರಮ ಬಡಾವಣೆಗಳ ವಿರುದ್ಧ ಸಮರ ಸಾರಿ, 20ಕ್ಕೂ ಹೆಚ್ಚು ಬಡಾವಣೆಗಳನ್ನು ನಿರ್ನಾಮ ಮಾಡಿತ್ತು. ಆದರೆ ಈಗಾಗಲೆ ಮನೆ ಕಟ್ಟಿಕೊಂಡಿರುವ ಬಡಾವಣೆಗಳ ವಿರುದ್ಧ ಕ್ರಮ ತೆಗೆದುಕೊಂಡಿರಲಿಲ್ಲ.
ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಗ್ರಾಮ ಪಂಚಾಯಿತಿಗಳ ಪಿಡಿಒಗಳನ್ನು ಅಮಾನತುಗೊಳಿಸಲಾಗಿದೆ. ಅಕ್ರಮ ಬಡಾವಣೆಗಳು ತಲೆ ಎತ್ತಲು ಅವಕಾಶ ಮಾಡಿಕೊಟ್ಟಿದ್ದಲ್ಲದೆ, ಅಂತಹ ಬಡಾವಣೆಗಳಲ್ಲಿ ನಿರ್ಮಿಸಿರುವ ಮನೆಗಳು ಎನ್ಎ ಆಗದಿದ್ದರೂ ಪಂಚಾಯಿತಿಯಲ್ಲಿ ನೊಂದಣಿ ಮಾಡಿಕೊಳ್ಳಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ