Kannada NewsKarnataka NewsLatest

ಪ್ರವಾಸಿ ತಾಣವಾಗಿ ರಾಜಹಂಸಗಡ ಕೋಟೆ ಅಭಿವೃದ್ಧಿ -ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬೆಳಗಾವಿ ನಗರದ ಹೊರವಲಯದಲ್ಲಿರುವ ಇತಿಹಾಸ ಪ್ರಸಿದ್ಧ ಸುಂದರ ತಾಣ ರಾಜಹಂಸಗಡ ಕೋಟೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು, ಇಷ್ಟರಲ್ಲೇ ಕೆಲಸ ಆರಂಭವಾಗಲಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಮೊದಲ ಹಂತದಲ್ಲಿ 3.50 ಕೋಟಿ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.

ರಾಜಹಂಸಗಡ ಅತ್ಯಂತ ಸುಂದರ ಪ್ರದೇಶವಾಗಿದ್ದರೂ ಈವರೆಗೂ ನಿರ್ಲಕ್ಷಿಸಲ್ಪಟ್ಟಿದೆ. ಪ್ರವಾಸಿ ತಾಣವಾಗಿ ದೇಶ, ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಎಲ್ಲ ಅವಕಾಶಗಳಿದ್ದರೂ ಅಭಿವೃದ್ಧಿ ಕಾಣದ್ದರಿಂದ ಹಿಂದೆ ಬಿದ್ದಿದೆ. ಹಿಂದಿನ ಸಮ್ಮಿಶ್ರ ಸರಕಾರವಿದ್ದಾಗ 15 ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವನೆ ಸಿದ್ದಪಡಿಸಿ ಸಲ್ಲಿಸಿದ್ದೆ. ಪ್ರವಾಸೋದ್ಯಮ ಇಲಾಖೆಯಿಂದ ಮೊದಲ ಹಂತದಲ್ಲಿ 5 ಕೋಟಿ ರೂ. ಮಂಜೂರಾಗಿದ್ದು, 3 ಕೋಟಿ ರೂ. ಬಿಡುಗಡೆಯಾಗಿದೆ. ಸಧ್ಯದಲ್ಲೇ ಕೆಲಸ ಆರಂಭಿಸಲಾಗುತ್ತಿದೆ ಎಂದು ಹೆಬ್ಬಾಳಕರ್ ತಿಳಿಸಿದ್ದಾರೆ.

ರಾಜಹಂಸಗಡ ಅಭಿವೃದ್ಧಿ ಕುರಿತಂತೆ ಮೃಣಾಲ್ ಹೆಬ್ಬಾಳಕರ್ ಸ್ಥಳೀಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವುದು

ರಾಜಹಂಸಗಡದಲ್ಲಿ ಶಿವಾಜಿಯ ಮೂರ್ತಿ ಸ್ಥಾಪಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಸ್ತಾವನೆ ಸಿಲ್ಲಿಸಲಾಗಿತ್ತು. ಅದಕ್ಕಾಗಿ 50 ಲಕ್ಷ ರೂ. ಬಿಡುಗಡೆಯಾಗಿದೆ. ಈ ಕಾರ್ಯವೂ ಆರಂಭವಾಗಿದೆ. ಶಿವಸ್ಮಾರಕ ನಿರ್ಮಾಣ, ಹೆರಿಟೇಜ್ ಪಾರ್ಕ್ ಸ್ಥಾಪನೆ ಮಾಡಲಾಗುವುದು. ಪ್ರವಾಸಿಗರಿಗೆ ಬಂದು ಹೋಗಿ ಮಾಡಲು ಅನುಕೂಲವಾಗುವಂತೆ ರಸ್ತೆಯನ್ನು ಸಹ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಯೋಜನೆಯ ಮೂಲಕ ಸುತ್ತಮುತ್ತಲೂ ಇರುವ ಸುಳಗಾ, ಯಳ್ಳೂರು, ದೇಸೂರು, ನಂದಿಹಳ್ಳಿ ಭಾಗದ ಜನರಿಗೆ ಉದ್ಯೋಗಾವಕಾಶವಾಗಲಿದೆ ಎನ್ನುವುದು ಕೂಡ ನನ್ನ ಆಶಯವಾಗಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದರು.

ಬೆಳಗಾವಿ ನಗರದಿಂದ ಕೇವಲ 7 ಕಿಮೀ ಅಂತರದಲ್ಲಿರುವ ಶಿವಾಜಿ ಕಟ್ಟಿದ ಕೋಟೆ ರಾಜಹಂಸಗಡ. ಅತ್ಯಂತ ಎತ್ತರ ಪ್ರದೇಶದಲ್ಲಿರುವ ಕೋಟೆ ಪ್ರದೇಶ ಮನಮೋಹಕವಾಗಿದೆ. ಯಾವುದೇ ಸೌಲಭ್ಯವಿಲ್ಲದಿದ್ದರೂ ನಿತ್ಯ ಪ್ರವಾಸಿಗರು ಆಗಮಿಸುತ್ತಾರೆ. ಸರಿಯಾದ ಯೋಜನೆ ಜಾರಿಯಾದರೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯಬಹುದು. ಇದೀಗ ರೂಪಿಸಲಾಗಿರುವ ಯೋಜನೆ ಜಾರಿಯಾದಲ್ಲಿ ಬೆಳಗಾವಿಯಲ್ಲೊಂದು ಸುಂದರ ಪ್ರವಾಸಿ ತಾಣ ಸಿದ್ದವಾದಂತಾಗುತ್ತದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button