Belagavi NewsBelgaum NewsLatest
*ಮಾರ್ಚ್ 1 ಮತ್ತು 2 ರಂದು ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ರಜತ ಮಹೋತ್ಸವ ಮತ್ತು 4ನೇಯ ಜಿಲ್ಲಾ ಸಮ್ಮೇಳನ*

ಇದೇ ಬರುವ ಮಾರ್ಚ್ ೧ ಮತ್ತು ೨ ರಂದು ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ೨೫ ವರ್ಷಗಳ ಪಯಣವನ್ನು ದಾಖಲಿಸುವ ರಜತ ಮಹೋತ್ಸವ ಮತ್ತು ನಾಲ್ಕನೆಯ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸಲಾಗುತ್ತಿದೆ. ಬೆಳಗಾವಿಯ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಸಮಾರಂಭ ನಡೆಯಲಿದೆ.
ದಿ. ೧ ,ಶನಿವಾರ ಬೆ. ೧೦ ಗಂಟೆಗೆ ರಜತ ಮಹೋತ್ಸವದ ಉದ್ಘಾಟನೆ ಮಾಜಿ ಗೃಹಸಚಿವರೂ , ಭಾರತ ಸ್ಕೌಟ್ಸ್ & ಗೈಡ್ಸ್ ರಾಜ್ಯ ಕಮಿಶನರ್ ಪಿ. ಜಿ. ಆರ್. ಸಿಂಧ್ಯಾ ಅವರಿಂದ ನೆರವೇರಲಿದ್ದು, ಕಾರಂಜಿ ಮಠದ ಶ್ರೀ ಶ್ರೀ ಗುರುಸಿದ್ಧ ಸ್ವಾಮಿಗಳವರ ಸಾನ್ನಿಧ್ಯದಲ್ಲಿ , ರಾಜ್ಯ ಚುಸಾಪ ಸಂಚಾಲಕರಾದ ಡಾ. ಎಂ.ಜಿ.ಆರ್. ಅರಸ್ ಅವರ ಅಧ್ಯಕ್ಷತೆಯಲ್ಲಿ , ಹಾಗೂ ಇತರ ಹಲವು ಗಣ್ಯರ ಉಪಸ್ಥಿತಿಯಲ್ಲಿ ಸಮಾರಂಭದ ಶುಭಾರಂಭವಾಗಲಿದೆ. ಸಮಾರಂಭದ ಅಂಗವಾಗಿ " ಚುಟುಕು ಸಂಭ್ರಮ" ಎಂಬ ಸ್ಮರಣ ಸಂಚಿಕೆಯನ್ನು ಎಸ್. ಎಂ. ಕುಲಕರ್ಣಿ ಅವರು ಮತ್ತು " ಚುಟುಕು ಪಾರಿಜಾತ " ಎಂಬ ಪ್ರಾತಿನಿಧಿಕ ಚುಟುಕು ಸಂಕಲನವನ್ನು ಪ್ರಿ. ವಿ. ಎನ್. ಜೋಶಿ ಬಿಡುಗಡೆ ಮಾಡಲಿದ್ದು, ಬಾಸೂರು ತಿಪ್ಪೇಸ್ವಾಮಿ ಅವರು ಪುಸ್ತಕ ಪ್ರದರ್ಶನ ಮಾರಾಟ ಸ್ಟಾಲ್ ಉದ್ಘಾಟಿಸಲಿದ್ದಾರೆ.
ಉದ್ಘಾಟನೆ ನಂತರ ೧೧.೩೦ ಕ್ಕೆ ಬೆಳಗಾವಿ ಜಿಲ್ಲೆಯವರೇ ಆದ ಪ್ರಸಿದ್ಧ ಕವಿ ಡಾ. ಎಂ. ಅಕಬರ ಅಲಿ ಅವರ ಜನ್ಮಶತಮಾನೋತ್ಸವದ ನಿಮಿತ್ತ ಡಾ. ಎಚ್. ಐ. ತಿಮ್ಮಾಪುರ ಅವರಿಂದ ವಿಶೇಷ ಉಪನ್ಯಾಸವಿರುತ್ತದೆ. ಮ.೧೨.೦೦ ರಿಂದ ಬಹುಭಾಷಾ ಚುಟುಕು ವಾಚನ ಗೋಷ್ಠಿ ನಡೆಯಲಿದ್ದು ,ಡಾ. ಬಸವರಾಜ ಜಗಜಂಪಿ ಅವರ ಅಧ್ಯಕ್ಷತೆಯಲ್ಲಿ ೯ ಭಾಷೆಗಳ ೧೪ ಕವಿಗಳು ಚುಟುಕು ವಾಚನ ಮಾಡಲಿದ್ದಾರೆ. ಶ್ರೀ ಶಿರೀಷ ಜೋಶಿ ಆಶಯ ನುಡಿಗಳನ್ನಾಡುವರು.
ಮ. ೨.೩೦ ಕ್ಕೆ ವಿವಿಧ ಕವಿಗಳ ನೂತನ ಚುಟುಕು ಕೃತಿಗಳ ಬಿಡುಗಡೆಯನ್ನು ಡಾ. ಎಚ್. ಬಿ. ಕೋಲಕಾರ ಅವರು ಮಾಡಲಿದ್ದು, ೩ ಗಂಟೆಗೆ ನಡೆಯುವ ಹಾಸ್ಯ ರಸಾಯನ ಕಾರ್ಯಕ್ರಮದಲ್ಲಿ ಶ್ರೀ ಮಹೇಶ ಚಟ್ನಳ್ಳಿ ಚಿಕ್ಕಮಗಳೂರು, ಡಾ. ಗುರುದೇವಿ ಹುಲೆಪ್ಪನವರಮಠ, ಶ್ರೀ ಅಶೋಕ ಮಳಗಲಿ ಭಾಗವಹಿಸುವರು. ನಂತರ ಪ್ರೊ. ಬಿ. ಆರ್. ಪೋಲೀಸಪಾಟೀಲ ಬನಹಟ್ಟಿ ಮತ್ತು ತಂಡದವರಿಂದ ಲಾವಣಿ ಕಾರ್ಯಕ್ರಮ ನಡೆಯಲಿದೆ. ಸಂ. ೫ ರಿಂದ ರಾಜ್ಯ ಮಟ್ಟದ ಚುಟುಕು ವಾಚನ ಸ್ಪರ್ಧೆ ಡಾ. ಪಿ. ಜಿ. ಕೆಂಪಣ್ಣನವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶ್ರೀ ರವಿ ಕೊಟಾರಗಸ್ತಿ ಆಶಯ ನುಡಿಯನ್ನಾಡುವರು.
ದಿ. ೨ ರವಿವಾರ ಬೆ. ೯ ಕ್ಕೆ ನಾಲ್ಕನೆಯ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯನ್ನು ಮಾನ್ಯ ಬೆಳಗಾವಿ ನಗರ ಶಾಸಕ ಶ್ರೀ ಅಸೀಫ್ ಸೇಟ್ ಉದ್ಘಾಟಿಸುವರು. , ೯.೩೦ ರಿಂದ ಸಮ್ಮೇಳನದ ಉದ್ಘಾಟನಾ ಸಮಾರಂಭವಿದ್ದು ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅವರು ಉದ್ಘಾಟಿಸಲಿದ್ದಾರೆ ಮತ್ತು ಹುಕ್ಕೇರಿ ಹಿರೇಮಠದ ಷಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜಿಲ್ಲೆಯ ಹಿರಿಯ ಚುಟುಕು ಕವಿ ಅಪ್ಪಾಸಾಹೇಬ ಅಲಿಬಾದಿ ಸರ್ವಾಧ್ಯಕ್ಷತೆ ವಹಿಸುವರು. ಡಾ. ರತ್ನಾ ಹಾಲಪ್ಪಗೌಡ ಮೈಸೂರು ಮತ್ತು ಇತರ ಗಣ್ಯರು ಉಪಸ್ಥಿತರಿರುವರು.
ನಂತರ ಮ. .೧೧ಕ್ಕೆ ಚುಟುಕು ಸಾಹಿತ್ಯದ ಕುರಿತು ನಾಗೇಶ ಜೆ. ನಾಯಕ ಅವರಿಂದ ವಿಶೇಷ ಉಪನ್ಯಾಸವಿದೆ. ಮ. ೧೧.೩೦ ರಿಂದ ಮಹಿಳಾ ಚುಟುಕು ವಾಚನ ಗೋಷ್ಠಿ ನಡೆಯಲಿದ್ದು ಖ್ಯಾತ ಲೇಖಕಿ ಮಧುರಾ ಕರ್ಣಂ ಬೆಂಗಳೂರು ಅವರು ಅಧ್ಯಕ್ಷತೆ ವಹಿಸುವರು.
ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ್ ಆಶಯ ನುಡಿಗಳನ್ನಾಡುವರು. ನಂತರ ಎಲ್ಲ ತಾಲೂಕಾ ಘಟಕಗಳಿಗೆ ರಜತ ಗೌರವ, ಚುಟುಕು ವಾಚನ ಸ್ಪರ್ಧೆ ಮತ್ತು ಚುಟುಕು ಕೃತಿಗಳ ಸ್ಪರ್ಧೆ ಬಹುಮಾನ ವಿತರಣೆ ಮೊದಲಾದ ಕಾರ್ಯಕ್ರಮಗಳಿರುತ್ತವೆ. ಬಿ. ಎಸ್. ಗವಿಮಠ, ಡಾ. ವೈ. ಎಂ. ಯಾಕೊಳ್ಳಿ, ಶ್ರೀ ಪಿ. ಬಿ. ಸ್ವಾಮಿ , ಪ್ರೊ. ಎಂ. ಎಸ್. ಇಂಚಲ ಮೊದಲಾದ ಹಿರಿಯ ಸಾಹಿತಿಗಳು ಭಾಗವಹಿಸುವರು.
ಮ. ೩. ೩೦ ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ವಿಶ್ವಲಿಂಗಾಯತ ಧರ್ಮಪೀಠದ ಜಗದ್ಗುರು ಬಸವಪ್ರಭು ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಪ್ರೊ. ಸಿದ್ದು ಯಾಪಲಪರವಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಸರ್ವಾಧ್ಯಕ್ಷರ ಸನ್ಮಾನವಿದ್ದು ಡಾ. ಎಂಜಿ.ಆರ್. ಅರಸ್ ಮತ್ತಿತರ ಗಣ್ಯರು ಉಪಸ್ಥಿತರಿರುವರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ