
ಪ್ರಗತಿವಾಹಿನಿ ಸುದ್ದಿ: ರಾಜ್ಯಪಾಲರಿಗೆ ನಿರಂತರವಾಗಿ ಅಪಮಾನ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಧಿವೇಶನದ ಮೊದಲ ದಿನ ಪ್ರತಿಭಟಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯಪಾಲರಿಗೆ ನಿರಂತರವಾಗಿ ಅಪಮಾನ ಮಾಡುತ್ತಿದೆ. ಒಂದು ಕಡೆ ಅಪಮಾನ ಮಾಡಿದರೆ, ಮತ್ತೊಂದು ಕಡೆ ಅವರಿಂದಲೇ ಸರ್ಕಾರಕ್ಕೆ ಮೆಚ್ಚುಗೆ ಹೇಳುವ ಮಾತನ್ನು ಆಡಿಸಲಾಗುತ್ತಿದೆ. ಇದನ್ನು ವಿರೋಧಿಸಿ ಬಿಜೆಪಿಯಿಂದ ಮಾರ್ಚ್ 3 ರಂದು ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕಾಂಗ್ರೆಸ್ ಶಾಸಕರೇ ಈ ಮಾತನ್ನು ಹೇಳುತ್ತಿದ್ದಾರೆ. ಇದರ ಜೊತೆಗೆ ಹಣ ಇಲ್ಲದೆ ಒಂದು ಲಕ್ಷ ಕೋಟಿ ರೂ.ಸಾಲ ಮಾಡಲಾಗುತ್ತಿದೆ. ಜನರ ಮೇಲೆ ತೆರಿಗೆ ಹೊರೆ ಹೇರಲಾಗುತ್ತಿದೆ. ಇದನ್ನು ಖಂಡಿಸಿ ಮಾರ್ಚ್ 7 ರಂದು ಶಾಸಕರ ಭವನದಿಂದ ವಿಧಾನಸೌಧಕ್ಕೆ ಪಾದಯಾತ್ರೆ ಹಾಗೂ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯನವರ ಸರ್ಕಾರ ದಲಿತರ ಹಣವನ್ನು ಗ್ಯಾರಂಟಿಗೆ ಬಳಸಿದೆ. ದಲಿತರ ಹಣವನ್ನು ದಲಿತರಿಗೆ ಸಂಬಂಧಿಸಿದ ಯೋಜನೆಗಳಿಗೆ ಮಾತ್ರ ಬಳಸಬೇಕು. ಚುನಾವಣೆ ಸಮಯದಲ್ಲಿ ಎಲ್ಲರಿಗೂ ಫ್ರೀ ಎಂದು ಹೇಳಿ, ಈಗ ದಲಿತರ ಹಣ ಬಳಸಲಾಗುತ್ತಿದೆ. ಬಿಜೆಪಿಯ 40% ಕಮಿಶನ್ ಹಣ ಉಳಿಸಿ ಗ್ಯಾರಂಟಿಗೆ ಬಳಸಲಾಗುವುದು ಎನ್ನಲಾಗಿತ್ತು. ಈಗ ಗುತ್ತಿಗೆದಾರರೇ ಕಾಂಗ್ರೆಸ್ ಸರ್ಕಾರದ ಕಮಿಶನ್ ಬಗ್ಗೆ ಹೇಳಿದ್ದಾರೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಗ್ಗಿ ಬಗ್ಗಿ ನಡೆಯಬೇಕೆಂದು ಹೇಳಿದ್ದರು. ಆ ಚಾಳಿಯನ್ನೇ ಮುಂದುವರಿಸಿ, ಸಿನಿಮಾ ಕಲಾವಿದರಿಗೆ ನೆಟ್ ಬೋಲ್ಟ್ ಟೈಟ್ ಮಾಡುತ್ತೇನೆ ಎಂದಿದ್ದಾರೆ. ಮೊದಲು ಸಚಿವ ರಾಜಣ್ಣ ಸೇರಿದಂತೆ ಇವರಿಗೆ ವಿರೋಧ ಮಾಡುತ್ತಿರುವವರಿಗೆ ನೆಟ್ ಬೋಲ್ಟ್ ಸರಿ ಮಾಡಲಿ. ಇವರು ಯಾವುದೇ ಕಲಾವಿದರನ್ನು ಆಹ್ವಾನಿಸಿಲ್ಲ. ಕಲಾವಿದರಿಗೆ ಧಮಕಿ ಹಾಕುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಕಲಾವಿದರು ಕಾಂಗ್ರೆಸ್ ಪಕ್ಷದ ಗುಲಾಮರಲ್ಲ. ಇವರ ಆಶೀರ್ವಾದ ಪಡೆದು ಸಿನಿಮಾಗಳು ಯಶಸ್ವಿಯಾಗುತ್ತಿಲ್ಲ ಎಂದರು.
ಧಮಕಿ ಹಾಕುವುದು, ಗೂಂಡಾಗಿರಿ ಮಾಡುವುದು ಪ್ರಜಾಪ್ರಭುತ್ವದಲ್ಲಿ ನಡೆಯುವುದಿಲ್ಲ. ಸಿನಿಮಾ ರಂಗಕ್ಕೆ ಬಿಜೆಪಿ ಸರ್ಕಾರ ಸಾಕಷ್ಟು ನೆರವು ನೀಡಿತ್ತು. ಇಂದು ಅಂಬರೀಶ್ ಅವರು ಇದ್ದಿದ್ದರೆ ಸರಿಯಾಗಿ ಉತ್ತರ ನೀಡುತ್ತಿದ್ದರು. ಸಿನಿಮಾ ರಂಗದವರು ಈ ಹೇಳಿಕೆಯನ್ನು ಖಂಡಿಸಬೇಕು. ಇದು ಕಲಾವಿದರಿಗೆ ಮಾಡುವ ಅಪಮಾನ. ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು, ಶರದ್ ಪವಾರ್, ದೇವೇಗೌಡ ಸೇರಿದಂತೆ ಎಲ್ಲರಿಗೂ ಅಪಾರ ಗೌರವ ನೀಡುತ್ತಾರೆ. ಅವರು ಗೌರವ ನೀಡುವುದರಲ್ಲಿ ಮಾದರಿ. ಡಿ.ಕೆ.ಶಿವಕುಮಾರ್ ಅವರು ಧಮಕಿ ಹಾಕುವುದರಲ್ಲಿ ಮಾದರಿಯಾಗಿದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ