Politics

*ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಸಾಧನೆಯೇನು? ಕಮಲ ನಾಯಕರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ*

ರಾಜ್ಯಪಾಲರ ಭಾಷಣ ಟೀಕಿಸಿದ್ದ ಬಿಜೆಪಿ ನಾಯಕರ ವಿರುದ್ಧ ಲಕ್ಷ್ಮೀ ಹೆಬ್ಬಾಳಕರ್ ಕಿಡಿ

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ನಾಲ್ಕು ವರ್ಷಗಳ ಕಾಲ ಬಿಜೆಪಿಯವರು ಏನೆಲ್ಲ ಮಾಡಿದ್ದಾರೆನ್ನವುದು ಎಲ್ಲರಿಗೂ ಗೊತ್ತಿದೆ. ರಾಜ್ಯಪಾಲರ ಭಾಷಣವನ್ನು ಟೀಕಿಸುವುದಕ್ಕೂ ಮುನ್ನ ಬಿಜೆಪಿಯವರು ಮೊದಲು ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಕಿಡಿಕಾರಿದ್ದಾರೆ.

ಸೋಮವಾರ ಆರಂಭಗೊಂಡ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಮಾಡಿದ ರಾಜ್ಯಪಾಲರ ಭಾಷಣದ ಬಗ್ಗೆ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರ ಆಡಳಿತವನ್ನು ರಾಜ್ಯದ ಜನರು ನೋಡಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ ಎನ್ನುವುದನ್ನು ಅವರು ಮೊದಲು ಅವಲೋಕನ ಮಾಡಿಕೊಳ್ಳಲಿ ಎಂದು ಅವರು ತಿರುಗೇಟು ನೀಡಿದರು.

ಎಥಿಕ್ಸ್ ಕಮಿಟಿ ವಿಚಾರ ಗೊತ್ತಿಲ್ಲ

Home add -Advt

ಸಚಿವರ ವಿರುದ್ಧ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಬಳಸಿದ ಅಶ್ಲೀಲ ಪದ ಪ್ರಯೋಗ ಪ್ರಕರಣವನ್ನು ಎಥಿಕ್ಸ್ ಕಮಿಟಿಗೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ನಾನು ಇಂದು ಬೆಂಗಳೂರಿಗೆ ಬಂದಿದ್ದು, ನಿಮಗೆ (ಮಾಧ್ಯಮ) ಎಷ್ಟು ಮಾಹಿತಿ ಇದೆಯೋ, ಅಷ್ಟೇ ಮಾಹಿತಿ ನನಗೂ ಇದೆ. ಎಥಿಕ್ಸ್ ಕಮಿಟಿಗೆ ನೀಡಿರುವ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದರು.

ನಾನು ಆಸ್ಪತ್ರೆಯಲ್ಲಿದ್ದಾಗ ಸಭಾಪತಿ ಬಸವರಾಜ ಹೊರಟ್ಟಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಆ ವೇಳೆಯಲ್ಲೂ ಪ್ರಕರಣದ ಬಗ್ಗೆ ಏನೂ ಮಾತನಾಡಲಿಲ್ಲ. ಈ ರೀತಿ ಯಾರಿಗೂ ಆಗಬಾರದೆನ್ನುವುದೇ ನನ್ನ ಕಳಕಳಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕನ ವಿರುದ್ಧ ಕಠಿಣ ಕ್ರಮ

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಶಾಲೆಯ ಶಿಕ್ಷಕನೋರ್ವ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ವರದಿ ಗಮನಕ್ಕೆ ಬಂದಿದ್ದು, ಖಂಡಿತವಾಗಿ ಸರ್ಕಾರವು ಮಕ್ಕಳ ಹಾಗೂ ಪೋಷಕರ ಪರ ನಿಲ್ಲುತ್ತದೆ. ಲೈಂಗಿಕ ದೌರ್ಜನ್ಯ ಪಿಡುಗನ್ನು ಬೇರು ಸಮೇತ ಕಿತ್ತೊಗೆಯಬೇಕಿದೆ. ಈ ಪ್ರಕರಣದಲ್ಲಿ ದೂರು ದಾಖಲಾಗಿರುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಅವರನ್ನು ಪೊಲೀಸ್ ಠಾಣೆಗೆ ಕಳುಹಿಸಿ ವರದಿ ತರಿಸಿಕೊಳ್ಳಲಾಗುವುದು. ಈ ಬಗ್ಗೆ ದೂರು ದಾಖಲಿಸಿಕೊಳ್ಳುವಂತೆಯೂ ತಿಳಿಸಿರುವುದಾಗಿ ಸಚಿವರು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button