
ಪ್ರಗತಿವಾಹಿನಿ ಸುದ್ದಿ : ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸೌಲಭ್ಯ ಕೋರಿ ಸಲ್ಲಿಸುವ ಅರ್ಜಿಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಗುವುದು. ಕಾರ್ಮಿಕರಿಗೆ ಸೌಲಭ್ಯ ನೀಡಲು ಇಲಾಖೆಯಲ್ಲಿ ಅನುದಾನದ ಕೊರತೆ ಇಲ್ಲ. ಡಿಬಿಟಿ ಮೂಲಕ ಅವರಿಗೆ ಹಣ ಪಾವತಿಯಾಗಲಿದೆ. ಮಂಡಳಿಯಲ್ಲಿ ಸಾಕಷ್ಟು ಹಣ ಇದೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ವಿಧಾನಸಭೆಯಲ್ಲಿಂದು ತಿಳಿಸಿದರು.
ಶಾಸಕ ಮಹೇಶ್ ಟೆಂಗಿನಕಾಯಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಂಡಳಿಗೆ ಸಾವಿರಾರು ಅರ್ಜಿ ಸಲ್ಲಿಕೆಯಾಗುತ್ತದೆ. ಅವುಗಳನ್ನು ಪರಿಶೀಲನೆ ಮಾಡಬೇಕಿರುತ್ತದೆ. ವಿಲೇವಾರಿ ಮಾಡಬೇಕಿರುತ್ತದೆ. ಅರ್ಜಿ ಸಲ್ಲಿಸಿದವರ ಮನೆಗಳಿಗೆ ಹೋಗಬೇಕು. ತಪಾಸಣೆ ಮಾಡಬೇಕು. ಸೂಕ್ತ ಕಾರಣ ಇದ್ದರೆ ಮಾತ್ರವೇ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ತಿರಸ್ಕರಿಸಿದರೆ ಅರ್ಜಿದಾರರಿಗೆ ಕಾರಣ ನೀಡಿದ್ದೇವೆ ಎಂದು ಹೇಳಿದರು.
ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಗುರಿ ನಿಗದಿ ಮಾಡಿದ್ದೇವೆ. ಯಾರು ಅರ್ಜಿ ಸಲ್ಲಿಸುತ್ತಾರೆ ಅವರ ಮನೆಗೆ ಹೋಗಿ ಪರಿಶೀಲನೆ ಮಾಡುತ್ತಾರೆ ಎಂದರು.
ಅಂಬೇಡ್ಕರ್ ಸೇವಾ ಕೇಂದ್ರದ ಬಳಕೆ
ಅಂಬೇಡ್ಕರ್ ಸೇವಾ ಕೇಂದ್ರ ಮೂಲಕ ಅರ್ಜಿ ಸಲ್ಲಿಸದವರ ಪರಿಶೀಲನೆ ಮಾಡಲಾಗುತ್ತದೆ. ಇದಕ್ಕಾಗಿ 43 ವಾಹನಗಳು ಇವೆ. ವಾಹನಗಳು ಫಲಾನುಭವಿಗಳ ಮನೆ ಹೋಗಿ ತಪಾಸಣೆ ಮಾಡುತ್ತವೆ. ಕಟ್ಟಡಡ ನಿರ್ಮಾಣ ಸ್ಥಳಗಳಿಗೆ ಹೋಗಿ ಕಾರ್ಮಿಕರು ನೋಂದಣಿ ಆಗಿದ್ದಾರೋ ಇಲ್ಲವೊ ಎಂಬುದನ್ನು ಪರಿಶೀಲನೆ ಮಾಡುತ್ತಾರೆ. ಈ ಪ್ರಕ್ರಿಯೆ ಒಂದು ತಿಂಗಳಲ್ಲಿ ಆರಂಭವಾಗಲಿದೆ ಎಂದು ವಿವರಿಸಿದರು.
26 ಲಕ್ಷ ನಕಲಿ ಕಾರ್ಡ್ ರದ್ದು
ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 26 ಲಕ್ಷ ನಕಲಿ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಅರ್ಹರಿಗೆ ಸೌಲಭ್ಯ ಸಿಗಬೇಕು ಎಂಬುದೇ ಇಲಾಖೆಯ ಉದ್ದೇಶ. ಅನರ್ಹ ಕಾರ್ಮಿಕರ ರದ್ದುಪಡಿಸುವ ಪ್ರಕ್ರಿಯೆಗೆ ವೇಗ ನೀಡಲಾಗಿದೆ. ಅರ್ಹರ ಸೌಲಭ್ಯಗಳಲ್ಲಿ ವಂಚನೆಯಾಗಬಾರದು. ಹಾಗೆಯೇ ಅನರ್ಹರಿಗೆ ಸೌಲಭ್ಯ ಸಿಗಬಾರದು ಎಂಬುದೇ ನಮ್ಮ ಸರ್ಕಾರದ ಉದ್ದೇಶ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ