Politics

*ರನ್ಯಾ ರಾವ್‌ ಪ್ರಕರಣ: ಸಮಗ್ರ ತನಿಖೆಯಾಗಲಿ: ಸಂಸದ ಬೊಮ್ಮಾಯಿ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ಚಿತ್ರನಟಿ ರನ್ಯಾ ರಾವ್ ಅಕ್ರಮ ಚಿನ್ನ ಸಾಗಾಣಿಕೆ ಮಾಡಿರುವ ಜಾಲದಲ್ಲಿ ಇರುವವರನ್ನು ಪತ್ತೆ ಹಚ್ಚಲು ಸಮಗ್ರವಾಗಿ, ಆಳವಾದ ತನಿಖೆ ನಡೆಸಬೇಕು ನಮ್ಮ ಅವಧಿಯಲ್ಲಿ ರನ್ಯಾರಾವ್‌ ನಿರ್ದೇಶಕಿಯಾದ ಕಂಪನಿಗೆ ಜಮೀನು ನೀಡಿರುವುದು ಮುಖ್ಯಮಂತ್ರಿಯ ಹಂತದವರೆಗೂ ಬಂದಿರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿರಾ ಕೈಗಾರಿಕಾ ಪ್ರದೇಶದಲ್ಲಿ ಮೆ. ಕ್ಸಿರೋಡಾ ಇಂಡಿಯಾ ಪ್ರೈ. ಲಿ. ಸಂಸ್ಥೆಗೆ ಜಮೀನು ನೀಡಿದ್ದೇವೆ. ಆ ಕಂಪನಿಯಲ್ಲಿ ಈಗ ಆರೋಪಿತೆಯಾಗಿರುವ ರನ್ಯಾರಾವ್ ಅವರು ನಿರ್ದೇಶಕಿಯಾದ್ದಾರೆ. ಯಾರೇ ಉದ್ದಿಮೆ ಮಾಡುತ್ತೇವೆ ಎಂದು ಬಂದರೂ ನಾವು ಅವರಿಗೆ ಅಗತ್ಯ ಕರಾರುಗಳನ್ನು ಹಾಕುತ್ತೇವೆ. ಲ್ಯಾಂಡ್ ಆಡಿಟ್ ಕಮಿಟಿ ಅಂತ ಇರುತ್ತದೆ. ಆ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳು ಇರುತ್ತಾರೆ. ಅವರು ಸಂಬಂಧಪಟ್ಟ ಕಂಪನಿಗೆ ಎಷ್ಟು ಜಮೀನು ಬೇಕು, ಯಾವ ಭಾಗದಲ್ಲಿ ಜಮೀನು ಬೇಕಿದೆ ಎನ್ನುವುದನ್ನು ಪರಿಶೀಲಿಸಿ ಶಿಫಾರಸ್ಸು ಮಾಡುತ್ತಾರೆ. 500 ಕೋಟಿ ರೂ ಗಳ ವರೆಗಿನ ಯೋಜನೆಗಳಿಗೆ ಸಂಬಂಧಪಟ್ಟ ಮಂತ್ರಿಗಳ ಹಂತದಲ್ಲಿ ತೀರ್ಮಾನ ಆಗುತ್ತದೆ ಮುಖ್ಯಮಂತ್ರಿಯವರೆಗೂ ಬರುವುದಿಲ್ಲ ನನ್ನ ಹಂತದವರೆಗೂ ಅದು ಬಂದಿಲ್ಲ. ಕೈಗಾರಿಕಾ ಸಚಿವರ ನೇತೃತ್ವದಲ್ಲಿ ಸಿಂಗಲ್‌ ವಿಂಡೊ ಪ್ರೊಸಿಡಿಂಗ್ ಮೂಲಕ ಹಂಚಿಕೆ ಮಾಡುತ್ತಾರೆ. ಅವರಿಗೆ ಜಮೀನು ಹಂಚಿಕೆ ಮಾಡಿದ ಮೇಲೆ ಅವರಿಗೆ ಹಣ ಕಟ್ಟುವಂತೆ ನೊಟೀಸ್ ನೀಡಲಾಗಿದೆ. ಅವರು ಹಣ ಕಟ್ಟದಿರುವುದರಿಂದ ಅವರಿಗೆ ಭೂಮಿ ಹಂಚಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.


ಉದ್ದಿಮೆ ಸ್ಥಾಪಿಸಲು ಹಲವಾರು ಅರ್ಜಿಗಳು ಬಂದಾಗ ರಾಜ್ಯದ ‘ಅಭಿವೃದ್ಧಿ ದೃಷ್ಟಿಯಿಂದ ಉದ್ಯಮಗಳಿಗೆ ಜಮೀನು ನೀಡುತ್ತೇವೆ. ಈಗಿನ ಸರ್ಕಾರವೂ ಕೂಡ ಲಕ್ಷಾಂತರ ಕೋಟಿ ರೂ. ಜಮೀನು ಹಂಚಿಕೆ ಮಾಡಿರುತ್ತದೆ. ಯಾರೋ ಮುಂದೆ ಅಪರಾಧ ಮಾಡುತ್ತಾರೆ ಎಂದು ಯಾರಿಗೂ ಗೊತ್ತಿರುವುದಿಲ್ಲ. ಅದನ್ನು ಊಹೆ ಮಾಡಲು ಆಗುವುದಿಲ್ಲ. ನಟಿ ದುಬೈನಿಂದ ಅಕ್ರಮವಾಗಿ ಚಿನ್ನ ತಂದಿರುವ ಬಗ್ಗೆ ತನಿಖೆ ನಡೆಯುತ್ತಿದೆ. ‘ಎಲ್ಲ ಆಯಾಮದಿಂದಲೂ ತನಿಖೆ ನಡೆಯಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಹೇಳಿದರು.

Home add -Advt

ಮಾಧ್ಯಮಗಳಲ್ಲಿ ಇಬ್ಬರು ಸಚಿವರು ಇದರ ಹಿಂದೆ ಇದ್ದಾರೆ ಎಂದು ತೋರಿಸಲಾಗುತ್ತಿದೆ. ಈ ಬಗ್ಗೆ ತನಿಖೆ ಆಗಬೇಕು. ಇದು ಒಂದು ಬಾರಿ ನಡೆದಿರುವಂತೆ ಕಾಣಿಸುತ್ತಿಲ್ಲ. ಇದಕ್ಕೆ ಬೆಂಬಲವಾಗಿ ಇರುವುವವರ ಬಗ್ಗೆ ಸಮಗ್ರವಾಗಿ, ಆಳವಾಗಿ ತನಿಖೆಯಾಗಲಿ, ಅಧಿಕಾರಿಗಳ ಪಾತ್ರ ಇಲ್ಲದೆ ಇಷ್ಟುದೊಡ್ಡ ಅಕ್ರಮ ನಡೆಯಲು ಸಾಧ್ಯವಿಲ್ಲ. ಇದರ ಹಿಂದಿರುವ ಜಾಲವನ್ನು ಸಂಪೂರ್ಣವಾಗಿ ಭೇಧಿಸಬೇಕು. ಸಿಬಿಐ ತನಿಖೆಯಿಂದ ಯಾರ್ ಪಾತ್ರ ಇದೆ ಅನ್ನುವುದು ಹೊರ ಬರುತ್ತದೆ. ಹೀಗಾಗಿ ಇದರ ಬಗ್ಗೆ ಆಳವಾಗಿ ತನಿಖೆಯಾದರೆ ಎಲ್ಲ ಸತ್ಯವೂ ಹೊರ ಬರಲಿದೆ ಎಂದು ಹೇಳಿದರು.

ತಪ್ಪು ಮುಚ್ಚಿಕೊಳ್ಳಲು ಗ್ರೇಟರ್ ಬೆಂಗಳೂರು

ಬೆಂಗಳೂರು ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರಸ್ತೆಗಳ ರಿಪೇರಿಯಿಂದ ಹಿಡಿದು ಹೊಸ ರಸ್ತೆ ನಿರ್ಮಾಣ ಮಾಡುವುದರಿಂದ ಹಿಡಿದು, ಚರಂಡಿ ನಿರ್ವಹಣೆ ಮಾಡುವುದನ್ನು ಸರಿಯಾಗಿ ಮಾಡಿಲ್ಲ ಸುಮ್ಮನೆ ಎರಡು ವರ್ಷ ಬ್ರಾಂಡ್ ಬೆಂಗಳೂರು ಅಂತ ಅರ್ಜಿ ತೆಗೆದುಕೊಂಡು ಎಲ್ಲಿ ಹಾಕಿದ್ದಾರೊ ಗೊತ್ತಿಲ್ಲ. ಬಜೆಟ್‌ನಲ್ಲಿಯೂ ಕೂಡ ಕಾರ್ಯಸಾಧುವಾಗುವಂತೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ನಮ್ಮ ಕಾಲದಲ್ಲಿ ತೀರ್ಮಾನ ಮಾಡಿರುವ ವಿಶ್ವ ಬ್ಯಾಂಕಿನಿಂದ 1700 ಕೋಟಿ ರೂ ಸಾಲ ನೀಡುವ ಯೋಜನೆ ಈಗ ಅಂತಿಮವಾಗಿದೆ. ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು, ದೇವರು ಬಂದರೂ ಇದನ್ನು ಸರಿ ಮಾಡಲು ಸಾಧ್ಯವಿಲ್ಲ ಎಂಬ ಸರ್ಕಾರದ ಧೋರಣೆಯಿದೆ. ಬೆಂಗಳೂರಿನ ವಿಸ್ತರಣೆ ಎಷ್ಟಿದೆ ಅಷ್ಟೇ ಇದೆ. ಈಗಾಗಲೇ ವಲಯಗಳಿಗೊಬ್ಬರು ಮುಖ್ಯ ಎಂಜನೀಯರ್ ಇದ್ದಾರೆ. ಈಗ ಎಲ್ಲ ವಲಯಗಳಿಗೆ ಆಯುಕ್ತರನ್ನು ಮಾಡಲು ಹೊರಟಿದ್ದಾರೆ. ಅದು ಪರಿಹಾರವಲ್ಲ. ಅದರ ಬದಲು ಯೋಜನಾಬದ್ಧವಾಗಿ ಹಣಕಾಸು ಒದಗಿಸಬೇಕು. ನಮ್ಮ ಕಾಲದಲ್ಲಿ ಎರಡು ಉಪ ನಗರಗಳನ್ನು ಮಾಡಲು ಯೋಚಿಸಿದ್ದೇವು. ಅವುಗಳನ್ನು ಮಾಡಿ ಸಂಪರ್ಕ ಕಲ್ಪಿಸಿ, ಅದರ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.

ಪರಿಷ್ಕರಣೆಗೆ ಅವಸರ ಬೇಡ
ಇದೇ ವೇಳೆ ರಾಜ್ಯ ಸರ್ಕಾರ ರೇಷನ್ ಕಾರ್ಡ್ ಪರಿಷ್ಕರಣೆ ಮಾಡಲು ಮುಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೇಷನ್ ಕಾರ್ಡ್ ಪರಿಷ್ಕರಣೆ ಮಾಡುವ ಮೊದಲು ರಾಜ್ಯ ಸರ್ಕಾರ ಅವಸರದ ತೀರ್ಮಾನ ಮಾಡಬಾರದು. ಅರ್ಹ ಫಲಾನುಭವಿಗಳಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಮೊದಲು ಎರಡು ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿ, ಅಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ನಂತರ ರಾಜ್ಯಾದ್ಯಂತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button