*ಅಪಾರ್ಟ್‌ಮೆಂಟ್‌ನಲ್ಲಿ ವೇಶ್ಯಾವಾಟಿಕೆ: ದೂರು ನೀಡಿದ ನಿರ್ದೇಶಕ ರಾಜು ಮುರುಗನ್ ಪತ್ನಿ ಹೇಮಾ*

ಪ್ರಗತಿವಾಹಿನಿ ಸುದ್ದಿ: ಖ್ಯಾತ ಚಲನಚಿತ್ರ ನಿರ್ದೇಶಕ ರಾಜು ಮುರುಗನ್ ಅವರ ಪತ್ನಿ ಹೇಮಾ ಸಿನ್ಹಾ, ವಾಸಿಸುವ ಅಪಾರ್ಟ್‌ಮೆಂಟ್‌ನಲ್ಲಿ ವೇಶ್ಯಾವಾಟಿಕೆ ಸೇರಿದಂತೆ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಚೆನ್ನೈನ ಐಯ್ಯಪ್ಪಂತಂಗಲ್‌ನಲ್ಲಿರುವ ಐಷಾರಾಮಿ ಅಪಾರ್ಟ್‌ಮೆಂಟ್ ಬಗ್ಗೆ ಈಗ ವಿವಾದ ಮುನ್ನಲೆಗೆ ಬಂದಿದೆ. ಈ ಅಪಾರ್ಟಮೆಂಟ್ ನಲ್ಲಿ ವೇಶ್ಯಾವಾಟಿಕೆ ಸೇರಿದಂತೆ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಖ್ಯಾತ ಚಲನಚಿತ್ರ ನಿರ್ದೇಶಕ ರಾಜು ಮುರುಗನ್ ಅವರ ಪತ್ನಿ ಹೇಮಾ ಸಿನ್ಹಾ ಅವರೆ ಧ್ವನಿ ಎತ್ತಿದ್ದಾರೆ. ಹೇಮಾ ಅವರ ಪ್ರಕಾರ, ಈ ಅಕ್ರಮ ಚಟುವಟಿಕೆಗಳ ವಿರುದ್ಧ ಮಾತನಾಡಿದ ಕಾರಣಕ್ಕೆ ಅವರಿಗೆ ಮತ್ತು ಅವರ ಕುಟುಂಬಕ್ಕೆ ನಿರಂತರ ಕಿರುಕುಳ ನೀಡಲಾಗುತ್ತಿದೆ. ಅಪಾರ್ಟಮೆಂಟ್‌ನ ನಿವಾಸಿಗಳ ಸಂಘಕ್ಕೆ ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಬದಲಿಗೆ, ಅವರನ್ನು ಕಿರಿಕಿರಿ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ತಾವು ಪ್ರತೀ ಮೂರು ತಿಂಗಳಿಗೊಮ್ಮೆ 22,000 ರೂ. ನಿರ್ವಹಣಾ ಶುಲ್ಕ ಪಾವತಿಸುತ್ತಿದ್ದರೂ, ಮೂಲಭೂತ ಸೌಲಭ್ಯಗಳು, ವಿಶೇಷವಾಗಿ ಕಸ ವಿಲೇವಾರಿ ಮತ್ತು ಈಜುಕೊಳದ ಬಳಕೆಯನ್ನು ನಿರಾಕರಿಸಲಾಗಿದೆ. ಅಲ್ಲದೆ, ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಹೇಮಾ ಸಿನ್ಹಾ ಹೇಳಿದ್ದಾರೆ.
ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ನಾಲ್ಕು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ.