
ಪ್ರಗತಿವಾಹಿನಿ ಸುದ್ದಿ: ಆಸ್ಪತ್ರೆಯಿಂದ ಮನೆಗೆ ವಾಪಾಸ್ ಆಗುತ್ತಿದ ಮಹಿಳೆಯ ಚಿನ್ನದ ಸರ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮಹಾಂತೇಶ ನಗರದ ನಿವಾಸಿ ಉಮಾ ಮಹೇಶ್ವರ ಮಲ್ಲಾಪೂರ ಎಂಬುವವರು ತನ್ನ ನಾದಿನಿ ಪ್ರೇಮಾ ದುರದುಂಡೇಶ್ವರ ಮಲ್ಲಾಪೂರ ಜೊತೆ ಆಸ್ಪತ್ರೆಗೆ ಹೋಗಿ ಮನೆಗೆ ವಾಪಸ್ ಆಗುತ್ತಿದ್ದರು. ಮಾರ್ಚ್ 12ರ ರಾತ್ರಿ 8 ಗಂಟೆಯ ಸುಮಾರಿಗೆ ಆಂಜನೇಯ ನಗರದ ಅರಿಹಂತ ಬಿಲ್ಡಿಂಗ್ ನ ಮುತ್ತೂಟ್ ಮನಿ ಫೈನಾನ್ಸ್ ಮುಂದೆ ಇದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಮಹಿಳೆಯ ಕೊರಳಿನಲ್ಲಿದ್ದ ಸುಮಾರು 90,000/- ರೂ ಕಿಮ್ಮತ್ತಿನ 30 ಗ್ರಾಂ ತೂಕದ ಬಂಗಾರದ ಚೈನ್ ಕದ್ದು ಪರಾರಿಯಾಗಿದ್ದಾರೆ.
ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.