ಪ್ರಗತಿವಾಹಿನಿ ಸುದ್ದಿ, ಅಯೋಧ್ಯಾ: ಮಂದಿರವಲ್ಲೇ ಕಟ್ಟುವೆವು… ಇದು ಸುಮಾರು 3 ದಶಕಗಳ ಹಿಂದೆ, ಮಕ್ಕಳಿಂದ ವೃದ್ದರವರೆಗೆ ಪ್ರತಿ ಹಳ್ಳಿ ಹಳ್ಳಿಯಲ್ಲಿ ಕೇಳಿ ಬರುತ್ತಿದ್ದ ಘೋಷಣೆ.
ಈಗ ರಾಮ ಭಕ್ತರ ಆ ಕನಸು, ಘೋಷಣೆ ನಿಜವಾಗುವ ಸಮಯ ಹತ್ತಿರ ಬಂದಿದೆ. ಸರ್ವೋಚ್ಛ ನ್ಯಾಯಾಲಯ ನಿನ್ನೆ ನೀಡಿದ ತೀರ್ಪಿನಿಂದ ಮಂದಿರದ ಕನಸು ಕಾಣುತ್ತಿದ್ದವರು ಖುಷಿಯಾಗಿದ್ದಾರೆ. ಇಡೀ ಹೋರಾಟದ ಮುಂದಾಳತ್ವ ವಹಿಸಿತ್ತ ವಿಶ್ವ ಹಿಂದೂ ಪರಿಷತ್ ಈಗ ಮುಂದಿನ ಯೋಜನೆಗಳ ಕಾರ್ಯಯೋಜನೆ ರೂಪಿಸುವಲ್ಲಿ ನಿರತವಾಗಿದೆ.
ಸುಪ್ರಿಂ ಕೋರ್ಟ್ ಆದೇಶದಂತೆ ಮಂದಿರ ನಿರ್ಮಾಣ ಮಾಡಲು ಈಗ ಕೇಂದ್ರ ಸರಕಾರ ಮೂರು ತಿಂಗಳಲ್ಲಿ ಟ್ರಸ್ಟ್ ರಚಿಸಬೇಕಿದೆ. ಇದು ವಿಶ್ವಹಿಂದೂ ಪರಿಷತ್ ಯೋಜನೆಯಂತೆ ನಡೆಯುವುದರಲ್ಲಿ ಸಂಶಯವಿಲ್ಲ.
ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವಹಿಂದೂ ಪರಿಷತ್ ಈಗಾಗಲೆ ಬಹುತೇಕ ಸಿದ್ದತೆ ಮಾಡಿಕೊಂಡಿದೆ. ವಿವಾದ ನ್ಯಾಯಾಲಯದಲ್ಲಿದ್ದರೂ ಎಂದಾರೊಂದು ದಿನ ತೀರ್ಪು ತಮ್ಮ ಪರವಾಗಿಯೇ ಬರುತ್ತದೆ ಎನ್ನುವ ವಿಶ್ವಾಸದೊಂದಿಗೆ ಎಲ್ಲ ತಯಾರಿ ನಡೆಸಿತ್ತು. ಹಾಗಾಗಿ ಈ ಕೆಲಸ ಸುಲಭವಾಗಿದೆ. ವಿಶ್ವಹಿಂದೂ ಪರಿಷತ್ತಿನ ಮೂಲಗಳ ಪ್ರಕಾರ ಮುಂದಿನ 5 ವರ್ಷದಲ್ಲಿ ಭವ್ಯವಾದ ರಾಮಮಂದಿರ ತಲೆ ಎತ್ತಲಿದೆ. ಮಂದಿರದಲ್ಲಿ ಶ್ರೀರಾಮ ದರ್ಶನ ನೀಡಲಿದ್ದಾನೆ.
ವಿಶ್ವಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ ಕೊಕ್ವೆ ಸರ್ವೇಚ್ಛ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದಾರೆ. ಮಂದಿರ ನಿರ್ಮಾಣ ಮತ್ತು ಸುಪ್ರಿಂ ಕೋರ್ಟ್ ನೀಡಿರುವ ಸಲಹೆಗಳನ್ನು ಜಾರಿಗೊಳಿಸಲು ವಿಶ್ವಹಿಂದೂ ಪರಿಷತ್ ಕೇಂದ್ರ ಸರಕಾರಕ್ಕೆ ಎಲ್ಲ ನೆರವು ನೀಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ರಾಮಮಂದಿರ ನಿರ್ಮಾಣದ ನೀಲನಕ್ಷೆ ಈ ಹಿಂದೆಯೇ ಸಿದ್ದವಾಗಿದೆ. ರಾಮಮಂದಿರ 268 ಅಡಿ ಉದ್ದ, 128 ಅಡಿ ಎತ್ತರ, 140 ಅಡಿ ಅಗಲ, 28 ದ್ವಾರಗಳು ಇರಲಿವೆ. ಬೇಕಾದ ಕಂಬಗಳ ನಿರ್ಮಾಣವೂ ಆಗಿದೆ. ಗೋಡೆಗಳಿಗೆ ಬೇಕಾದ ಕಲಾಕೃತಿಗಳೂ ಸಿದ್ದವಾಗಿವೆ. ದೇಶಾದ್ಯಂತ ಕರಸೇವಕರು ಯಾವುದೇ ಕೆಲಸಕ್ಕೆ ಸಿದ್ದರಾಗಿದ್ದಾರೆ. ಹಾಗಾಗಿ ಮಂದಿರ ನಿರ್ಮಾಣ ದೊಡ್ಡ ಸಮಸ್ಯೆಯೇ ಅಲ್ಲ. ಹೆಚ್ಚಿನ ಸಮಯವನ್ನೂ ತೆಗೆದುಕೊಳ್ಳುವುದಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ