ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಜನಸಮುದಾಯದ ಭಾಷೆಯಾಗಿ ಕನ್ನಡವು ಎರಡೂವರೆ ಸಾವಿರ ವರ್ಷಗಳಿಂದ ತನ್ನ ಸ್ಪಷ್ಟ ಕುರುಹುಗಳನ್ನು ಉಳಿಸಿಕೊಂಡು ಬಂದಿದೆ. ಇಂದಿಗೂ ತನ್ನ ರಾಜವೈಭವವನ್ನು ಕನ್ನಡಭಾಷೆ ಕಳೆದುಕೊಂಡಿಲ್ಲ. ಆದರೆ ಶಿಕ್ಷಣ ಮಾಧ್ಯಮ ಕುರಿತು ಸರ್ವೊಚ್ಛ ನ್ಯಾಯಾಲಯವು ನೀಡಿದ ತೀರ್ಪು ಹಾಗೂ ಸರ್ಕಾರವೇ ಆಂಗ್ಲ ಮಾಧ್ಯಮದ ಶಾಲೆಗಳನ್ನು ತೆರೆಯಲು ಅನುಮತಿಸಿದ ಎರಡು ತೀರ್ಮಾನಗಳು ಕನ್ನಡಿಗರ ಪಾಲಿಗೆ ನುಂಗಲಾರದ ತುತ್ತಾಗಿವೆ ಎಂದು ನಾಡಿನ ಹಿರಿಯ ಭಾಷಾ ವಿಜ್ಙಾನಿ ಪ್ರೊ. ಸಂಗಮೇಶ ಸವದತ್ತಿಮಠ ಕಳವಳ ವ್ಯಕ್ತಪಡಿಸಿದರು.
ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯು ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸರಣಿ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ಸರ್ಕಾರದ ಕನ್ನಡಪರ ಸಂಸ್ಥೆಗಳಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ, ಶಾಸ್ತ್ರೀಯ ಭಾಷಾ ಅತ್ಯುನ್ನತ ಅಧ್ಯಯನ ಕೇಂದ್ರ, ಹಾಗೂ ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಯನ ಸಂಸ್ಥೆಗಳು ಕನ್ನಡಿಗರ ಕನ್ನಡ ಮನಸ್ಥಿತಿಯನ್ನು ಜಾಗೃತವಾಗಿಡುವ ಕೆಲಸಮಾಡಬೇಕೆಂದು ಅಭಿಪ್ರಾಯಪಟ್ಟರು.
ಮೇಲಿಂದ ಮೇಲೆ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಕನ್ನಡದ ಜಾಗೃತ ಘಂಟೆಯನ್ನು ಭಾರಿಸುತ್ತಿರಬೇಕು. ಇಲ್ಲದಿದ್ದಲ್ಲಿ ಕರ್ನಾಟಕದಲ್ಲಿ ಕನ್ನಡವೇ ಅಲ್ಪಸಂಖ್ಯಾತ ಭಾಷೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಗಡಿನಾಡಲ್ಲಿ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ ಗಡಿಕನ್ನಡಿಗರಿಗೆ ಬಲತುಂಬಬೇಕೆಂದು ಎಂದು ಕರೆಕೊಟ್ಟರು. ಈ ವಿಷಯದಲ್ಲಿ ಸರ್ಕಾರೇತರ ಕನ್ನಡಪರ ಸಂಘಟನೆಗಳ ನಡೆಯು ಶ್ಲಾಘನೀಯವೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್ ಎಂ ಗಂಗಾಧರಯ್ಯ ಅವರು ಶಾಸ್ತ್ರೀಯ ಭಾಷೆಯಾದ ಕನ್ನಡವು ಜಗತ್ತಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಅದರಲ್ಲೂ ಹನ್ನರಡನೆಯ ಶತಮಾನದಲ್ಲಿ ಕನ್ನಡಿಗರು ಸ್ವತಂತ್ರ ಚಿಂತನೆಯಿಂದ ಪ್ರಪಂಚದಲ್ಲೇ ಮೊದಲ ಭಾರಿಗೆ ಮಾನವ ಹಕ್ಕುಗಳನ್ನು ಘೋಷಿಸುವುದರ ಮೂಲಕ ಮಾನವೇತಿಹಾಸದಲ್ಲಿ ಮಹತ್ವದ ಸಂಗತಿಯನ್ನು ದಾಖಲಿಸಿಲಾಗಿದೆ ಎಂದರು.
ಕನ್ನಡ ತತ್ವಜ್ಙಾನವನ್ನು ವಚನ ಚಳುವಳಿಯ ಮೂಲಕ ಕಟ್ಟಿಕೊಡಲಾಗಿದೆ. ಜಗತ್ತಿನ ಮಾನವತಾ ವಾದಗಳಿಗೆ ವಚನಕಾರರ ಸಂದೇಶಗಳೇ ಮುಖ್ಯ ಹಾಗೂ ಮೂಲಗಳಾಗಿವೆ. ಇಂತಹ ಅಭಿಜಾತ ಭಾಷೆಯು ತಾತ್ವಿಕತೆಯು ಮತ್ತು ಸಾಹಿತ್ಯವು ನಮ್ಮದಾಗಿದೆಯೆಂಬ ಹೆಮ್ಮೆ ಕನ್ನಡಿಗರದ್ದಾಗಿದೆಯೆಂದರು.
ಡಾ. ಗಜಾನನ ನಾಯಕ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಡಾ ಮಹೇಶ ಗಾಜಪ್ಪನವರ, ಡಾ. ಶೋಭಾನಾಯಕ, ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ, ಡಾ. ಪಿ ನಾಗರಾಜ, ಡಾ. ಅಶೋಕ ಮುಧೋಳ, ಡಾ. ನಾರಾಯಣ ನಾಯ್ಕ ಉಪಸ್ಥಿತರಿದ್ದರು. ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಸಭೆಯಲ್ಲಿ ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ